ಬೆಂಗಳೂರು ನಗರದ ಅರಮನೆ ಆವರಣದಲ್ಲಿ ಸೆ.25 ರಿಂದ 28 ರವರೆಗೆ ‘ವಿಶ್ವ ಕಾಫಿ ಸಮ್ಮೇಳನ-23’ ನ್ನು #world coffee conference – 23 ಆಯೋಜಿಸಲಾಗಿದೆ. 4 ದಿನಗಳು ನಡೆಯುವ ಈ ಸಮ್ಮೇಳನ ಸಂಪೂರ್ಣ ‘ಬಿಸಿನೆಸ್ ಟು ಬಿಸಿನೆಸ್’ ಉದ್ದೇಶ ಹೊಂದಿದೆ. 80 ದೇಶಗಳಿಂದ 2,400ಕ್ಕೂ ಹೆಚ್ಚು ಪ್ರತಿನಿಧಿಗಳು, 117 ಉಪನ್ಯಾಸಕರು, 208 ವಸ್ತುಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಯಾವೊಬ್ಬ ಮಂತ್ರಿ ಮಹೋದಯರು ಇತ್ತ ತಲೆ ಹಾಕಿಲ್ಲ ಅನ್ನೋದೆ ಬೇಸರದ ಸಂಗತಿ.
ಕೊಡಗಿನ ಮಡಿಕೇರಿ ಶಾಸಕರಾದ ಮಂಥರ್ ಗೌಡ ಮಾತ್ರಾ ಪತ್ನಿ ದಿವ್ಯಾ ಮತ್ತು ಮಿತ್ರರೊಂದಿಗೆ ಆಗಮಿಸಿ ವಸ್ತು ಪ್ರದರ್ಶನ ವೀಕ್ಷಣೆ ಮಾಡಿ ಖುಷಿ ಪಟ್ಟರು. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊಡಗು ಜಿಲ್ಲೆಯಿಂದಲೂ ಅಧಿಕ ತೆರಿಗೆ ಪಾವತಿಯಾಗುತ್ತಿದೆ. ಕೊಡಗಿನ ಕಾಫಿ ಬೆಳೆಗಾರರ ಬಗ್ಗೆ ಕಾಳಜಿ ಹಾಲಿ ಸರ್ಕಾರಕ್ಕೆ ಇಲ್ಲವೇ… 80 ರಾಷ್ಟ್ರಗಳ ಉದ್ದಿಮೆದಾರರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಕಣ್ತುಂಬಿಕೊಳ್ಳಬೇಕಾದರೆ ಕನಿಷ್ಟ ಕಾಫಿ ಬೆಳೆಯುವ ಜಿಲ್ಲೆಗಳ ಶಾಸಕರಾದರೂ ಭೇಟಿ ನೀಡಬಹುದಿತ್ತು. ಆದರೆ, ಎಲ್ಲಾ ಮಾಯ. ಕಾಫಿ ಮಂಡಳಿ ಕೇಂದ್ರ ಸರ್ಕಾರದ ಅಧೀನ ಸಂಸ್ಥೆ. ಅದಕ್ಕಾಗಿ ನಿರ್ಲಕ್ಷ್ಯ ವೇ?
ಒಟ್ಟಿನಲ್ಲಿ ರಾಜ್ಯ ವಾರ್ತಾ ಇಲಾಖೆ ಕನಿಷ್ಟ ಕಾಫಿ ಬೆಳೆಯುವ ಜಿಲ್ಲೆಗಳ ಪತ್ರಿಕೆಗಳಿಗೆ ಜಾಹಿರಾತು ನೀಡಬಹುದಿತ್ತು. ಕಾಫಿ ಬೆಳೆಯುವ ಜಿಲ್ಲೆಗಳ ಪತ್ರಕರ್ತರಿಗೆ ಸೂಕ್ತ ವ್ಯವಸ್ಥೆ ಮಾಡಬಹುದಿತ್ತು. ಕೇರಳ,ತಮಿಳುನಾಡು ಹಾಗೂ ಹೊರ ದೇಶದಿಂದ ಪತ್ರಕರ್ತರು ಬಂದಿರಬೇಕಾದರೆ, ನಮ್ಮ ಪತ್ರಕರ್ತರಿಗೆ ಏನೂ ವ್ಯವಸ್ಥೆ ಇಲ್ಲ. ಕಾಫಿ ಮಂಡಳಿ ತಕ್ಕ ಮಟ್ಡಿಗೆ ಪತ್ರಕರ್ತರಿಗೆ ಸ್ಪಂದಿಸಿದೆಯಾದರೂ ಕೇಂದ್ರ ಸರ್ಕಾರ ಕೇವಲ ಶೇ.50 ಖರ್ಚು ಭರಿಸಲಿರುವದರಿಂದ ರಾಜ್ಯ ಸರ್ಕಾರದಿಂದ ಕನಿಷ್ಟ ರೂ.5 ಕೋಟಿ ನಿರೀಕ್ಷೆ ಮಾಡಲಾಗಿತ್ತು. ಈ ಹಿಂದೆ ಬೊಮ್ಮಾಯಿ ಸರ್ಕಾರ ಅವಧಿಯಲ್ಲಿ ಇದೇ ವಿಶ್ವ ಕಾಫಿ ಸಮಾವೇಶಕ್ಕೆ ರೂ.5 ಕೋಟಿ ಬಿಡುಗಡೆ ಮಾಡಿತ್ತು. ಆ ಹಣ ಏನಾಯಿತು?
ಬಹುಶಃ ನೂತನ, ಉತ್ಸಾಹಿ ಸಿಇಓ ಕಾಫಿ ಮಂಡಳಿ ಇತಿಹಾಸದಲ್ಲಿಯೇ ಯಾವ ಐಎ ಎಸ್ ಅಧಿಕಾರಿ ಮಾಡದ ಬೃಹತ್ ಸಾಧನೆ ಮಾಡಿದ್ದಾರೆ. ಹಗಲಿರುಳೂ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದ್ದಾರೆ. ಟಾ ಟಾ, ನೆಸ್ಲೆ ಇಂಡಿಯಾ ಇತ್ಯಾದಿ ಕಂಪೆನಿಗಳು ಪ್ರಾಯೋಜನೆ ನೀಡಿದ್ದರೂ ಯಾವ ಪ್ರಮಾಣದಲ್ಲಿ ಗೊತ್ತಿಲ್ಲ. ಸುಮಾರು 200 ಮಳಿಗೆ ತಲಾ ರೂ.1 ಲಕ್ಷ ಎಂದರೂ ರೂ.2 ಕೋಟಿ ಆಗಬಹುದು. ಭಾರತದ ಕಾಫಿ ಉದ್ಯಮಿಗಳು ನೀಡಲಾದ ಮೊತ್ತ, ದೇಶಿ ವಿದೇಶಿ ಪ್ರತಿನಿಧಿ ಶುಲ್ಕದಿಂದ ಸಂಗ್ರಹಿತ ಮೊತ್ತಗಳಿಂದ ಬ್ರಹತ್ ವಿಶ್ವ ಕಾಫಿ ಸಮಾವೇಶ ಸರಿದೂಗಿಸಲು ಸಾಧ್ಯವೇ?, ಆದರೆ, ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಭಾರತದ ಕಾಫಿ ಮಂಡಳಿಯ ಜಿಲ್ಲಾ, ಹೋಬಳಿ ವಿಸ್ತರಣಾ ವಿಭಾಗದ, ಸಂಶೋಧನ ವಿಭಾಗದ ಅಧಿಕಾರಿಗಳು,ಸಿಬ್ಬಂದಿಗಳಿಗೆ ಅಚ್ಚುಕಟ್ಟು ಜವಾಬ್ಧಾರಿಯನ್ನು ಸಿಇಓ ಡಾ.ಕೆ.ಜಿ.ಜಗದೀಶ್ ವಹಿಸಿಕೊಟ್ಟು ಉತ್ತಮ ಕೆಲಸ ತೆಗೆದುಕೊಂಡಿದ್ದಾರೆ.
ಅರಮನೆ ಸುತ್ತಲಿನ ಪರಿಸರದಲ್ಲಿ ಅದ್ಧೂರಿಯ ತಾತ್ಕಾಲಿಕ ಸೆಟ್ ಕಣ್ಮನ ಸೆಳೆಯುತ್ತದೆ. ಎಲ್ಲದರಲ್ಲಿ ಭಾರತೀಯ ಕಲೆಗಳು, ಪ್ರಾಣಿ ಪಕ್ಷಿಗಳ ಚಿತ್ತಾರ ಕಣ್ಣು ಕೋರೈಸುತ್ತದೆ. ಈವೆಂಟ್ ಮ್ಯಾನೇಜ್ ಮೆಂಟ್ ಎಂ.ಎಂ.ಆಕ್ಟೀವ್ ನ ಮುಖ್ಯಸ್ಥ ಜಗದೀಶ್ ಪಟಾಣ್ಕರ್ ಕೆಲಸ, ಕಲೆ ಕಣ್ಣಿಗೆ ಹಬ್ಬವಾಗಿದೆ. 28 ರಂದು ಭಾರತೀಯ ಬೆಳೆಗಾರರ ಸಂವಾದಕ್ಕೆ ನಿಗಧಿತ ಶುಲ್ಕವಿದ್ದು, 1800/2000 ಪ್ರವೇಶ ಆಗಿದೆ. ಭಾರತೀಯ ಬೆಳೆಗಾರರು ಅದರಲ್ಲಿಯೂ ಹಾಸನ, ಚಿಕ್ಕಮಗಳೂರು, ಸಕಲೇಶಪುರ ಬೆಳೆಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೊಡಗಿನಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಏನಾಯಿತು ನಮ್ಮ ಕೊಡಗಿನ ಬೆಳೆಗಾರರಿಗೆ? : ವನ್ಯಜೀವಿ- ಮಾನವ ಸಂಘರ್ಷ, ಕಾಫಿ ಕಾರ್ಮಿಕರ ಕೊರತೆ, ಜಲಪ್ರಳಯ, ಅನಾವೃಷ್ಠಿ , ಬೆಲೆ ಏರಿಕೆ ಇತ್ಯಾದಿಗಳು ತಮ್ಮ ಎಸ್ಟೇಟ್ ಬ್ರಾಂಡೆಡ್ ಕಾಫಿಯನ್ನು ಅಭಿವೃದ್ಧಿ ಪಡಿಸಲು ನಿರಾಶೆಗೆ ತಲೆ ಬಾಗಿದರೆ. ಕಾಫಿ ಕೃಷಿ ಅಭಿವೃದ್ಧಿ ಬಗ್ಗೆ ವಿಮುಖರಾದರೆ ಎಂಬ ಭಾವನೆ ಬರುತ್ತದೆ. ಒಟ್ಟಿನಲ್ಲಿ ವಿಶ್ವ ಕಾಫಿ ಸಮಾವೇಶದ ಭಾಗವಾಗುವ ಅದ್ಭುತ ಅವಕಾಶವನ್ನು ಕೊಡಗಿನ ಕಾಫಿ ಬೆಳೆಗಾರರು ಕಳೆದುಕೊಂಡರೆಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಸುಮಾರು 7 ಇಂಡಿಯಾ ಇಂಟರ್ ನ್ಯಾಷನಲ್ ಕಾಫಿ ಹಬ್ಬ ಆಚರಿಸಿ ಸೈ ಎನಿಸಿದ್ದ ಇಂಡಿಯಾ ಕಾಫಿ ಟೃಸ್ಟ್ ನ ಮುಖ್ಯಸ್ಥ ಅನಿಲ್ ಕುಮಾರ್ ಭಂಡಾರಿ ಅವರನ್ನು ಈ ಬಾರಿ ಕಾಫಿ ಮಂಡಳಿ ಸಂಪೂರ್ಣ ಹೊರಗಿಟ್ಟು ಎಲ್ಲರ ಮನ ಗೆಲ್ಲುವಲ್ಲಿ ಕಾಫಿ ಮಂಡಳಿ ಪ್ರಥಮ ಬಾರಿಗೆ ಯಶಸ್ವಿಯಾಗಿದೆ.
ಇಂದು ದಿಢೀರನೆ ಆಗಮಿಸಿದ ICT ಅಧ್ಯಕ್ಷ ಅನಿಲ್ ಕುಮಾರ್ ಭಂಡಾರಿ ಅವರು ಅರಮನೆ ಮೈದಾನದಲ್ಲಿ ಮಾಡಲಾದ ವ್ಯವಸ್ಥೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಡಾ.ಕೆ.ಜಿ.ಜಗದೀಶ್ ನಾಯಕತ್ವದಲ್ಲಿ ಜಾಗತಿಕ ಕಾಫಿ ಮಾರುಕಟ್ಟೆಯ ದಿಗ್ಗಜರ ಮನಗೆಲ್ಲಲು ಉದ್ಯಾನ ನಗರಿ ಬೆಂಗಳೂರು ಯಶಸ್ವಿಯಾಗಿದೆ. ಜಿ.20 ಶ್ರಂಗ ಸಭೆ ಯಶಸ್ಸು, ಚಂದ್ರಯಾನ-3 ಯಶಸ್ಸಿನೊಂದಿಗೆ ವಿಶ್ವದ ಗಮನ ಸೆಳೆದಿರುವ ಭಾರತ ಹಾಗೂ ಕೇಂದ್ರದ ಮೋದಿ ಸರ್ಕಾರ ಇದೀಗ ಜಾಗತಿಕ ಕಾಫಿ ಸಮಾವೇಶವನ್ನು ಅದ್ಧೂರಿಯಾಗಿ, ಆಕರ್ಷಕವಾಗಿ, ಅರ್ಥಪೂರ್ಣವಾಗಿ ಏರ್ಪಡಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಒತ್ತಿ ಹೇಳಲೇ ಬೇಕಾಗಿದೆ.
ಕಾಫಿ ನಾಡಿನಲ್ಲಿ ಜನಿಸಿ, ಕಾಫಿ ಬೆಳೆಗಾರರ ಸಖ್ಯದಲ್ಲಿಯೇ ಹೆಚ್ಚಿನ ದಿನಗಳನ್ನು ಕಳೆದಿರುವ ನನಗೆ ವಿಶ್ವ ಕಾಫಿ ಸಮಾವೇಶದಲ್ಲಿ ಭಾಗಿಯಾಗಿರುವದಕ್ಕೆ ಹೆಚ್ಚು ಖುಷಿಯಾಗಿದೆ. ಕಾಫಿ ಎಕ್ಸ್ ಪೋ ದಲ್ಲಿ ಕಾಫಿ ಪುಡಿಯಿಂದಲೆ ಬಿಡಿಸಲಾದ ರೂ.50 ಕನಿಷ್ಟ ಬೆಲೆಯಿಂದ ರೂ.25000 ಸಾವಿರವರೆಗಿನ ತನ್ನ ಕಲಾಕೃತಿಯನ್ನು ಪ್ರದರ್ಶನಕ್ಕಿಡಲಾಗಿತ್ತು. ನನಗರಿವಿಲ್ಲದೆಯೇ ಕಾಫಿ ಲೋಕದಲ್ಲಿ ಹಲವು ಮನಸ್ಸುಗಳಿಗೆ ನಾನು ಹತ್ತಿರವಾಗಿದ್ದೇನೆ. ನಿಮಗೂ ಖುಷಿಯಾಗಲಿ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ WCC ಯ ಕೆಲವೊಂದು ಚಿತ್ರಣವನ್ನು ಇಲ್ಲಿ ನೀಡಲು ಪ್ರಯತ್ನಿಸಿದ್ದೇನೆ.
ಬರಹ : ಟಿ.ಎಲ್.ಶ್ರೀನಿವಾಸ, ಪತ್ರಕರ್ತರು