ಈ ದೇಶದ ಪರಂಪರೆ, ಆಚರಣೆ, ಕಲಾಪ್ರಾಕಾರಗಳಿಗೆ ನಾವೇ ಪರಿಕೀಯರಾಗಬಾರದು. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಈ ದೇಶದ ಒಂದಲ್ಲ ಒಂದು ಕಲಾಪ್ರಾಕಾರಗಳನ್ನು ಪೋಷಕರು ಪರಿಚಯ ಮಾಡಿಕೊಡಬೇಕು ಹಾಗೂ ವಿಶಿಷ್ಟ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯದ ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಗೋವಿಂದ ಹೇಳಿದರು.
ಅವರು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಯಕ್ಷಕಲಾಭಿಮಾನಿ ಮಿತ್ರರ ಆಶ್ರಯದಲ್ಲಿ ನಡೆದ “ಗಾನಾರ್ಚನೆ” ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು. ಪೋಷಕರು ಮಕ್ಕಳಲ್ಲಿ ಕಲಾಪ್ರಕಾರಕ್ಕೆ ಬೇಕಾದ ಅಭಿರುಚಿಯನ್ನು ಬೆಳೆಸುವ ಹಾಗೂ ಪರಿಚಯಿಸುವ ಕೆಲಸ ಇಂದು ಮಾಡಬೇಕಾಗಿದೆ. ಈ ದೇಶದ ಕಲಾಪ್ರಾಕಾರಗಳ ಪರಿಚಯ ಮಕ್ಕಳಲ್ಲಿ ಬೆಳೆಸಬೇಕು. ವಿದ್ಯಾರ್ಥಿ ಯಾವುದೇ ಕ್ಷೇತ್ರದಲ್ಲಿ ಬೆಳೆಯಬಹುದು, ಆತನೊಳಗೆ ಒಬ್ಬ ಕಲಾವಿದ ಇರಬೇಕು ಎಂದರು. ಯಾವತ್ತೂ ಯುರೋಪಿಯನ್ ಶಿಕ್ಷಣದ ಅಡಿಯಾಳಾಗಿರದೆ, ನಮ್ಮದೇ ಪರಂಪರೆ ಕಲಿಸುವ ನಮ್ಮದೇ ಪ್ರಾಕಾರಗಳನ್ನು ಮಕ್ಕಳಿಗೆ ಕಲಿಸಿಕೊಡಲೇಬೇಕಿದೆ, ಅದು ಹಾಡು, ಭಜನೆ, ಯಕ್ಷಗಾನ ಯಾವುದಾದರೊಂದು ಕ್ಷೇತ್ರದಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು ಎಂದರು. ಗಾನಾರ್ಚನೆಯ ಮೂಲಕ ಕಾವ್ಯ ಪರಂಪರೆ ಬೆಳೆಯಲು ಸಾಧ್ಯವಿದೆ, ಹಿಸ ತಲೆಮಾರಿಗೂ ವಿನೂತನ ಮಾದರಿಯಲ್ಲಿ ಕಲೆಯ ಪರಿಚಯವೂ ಆಗುತ್ತಿದೆ ಎಂದು ಎನ್ ಎಸ್ ಗೋವಿಂದ ಹೇಳಿದರು.
ದೀಪಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಪಿ ವಿ ಮಹಾಬಲೇಶ್ವರ ಭಟ್ ಶುಭಹಾರೈಸಿದರು.
ಅತಿಥಿಯಾಗಿದ್ದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ ಕೆ ಬೆಳ್ಯಪ್ಪ ಗೌಡ ಮಾತನಾಡಿ, ದೇವಸ್ಥಾನದ ವಠಾರದಲ್ಲಿ ಇಂತಹ ಕಾರ್ಯಕ್ರಮ ಮೊದಲ ಬಾರಿಗೆ ನಡೆಯುತ್ತಿದ್ದು, ಕಲೆಯೂ ಕೂಡಾ ದೇವತಾ ಅರ್ಚನೆಯಾಗಿದ್ದು , ಹೀಗಾಗಿ ದೇವಸ್ಥಾನವು ಇಂತಹ ಕಾರ್ಯಗಳಿಗೆ ಸದಾ ಪ್ರೋತ್ಸಾಹ ನೀಡುತ್ತದೆ ಎಂದರು. ಮಕ್ಕಳಲ್ಲಿ ಯಕ್ಷಗಾನದ ಮೂಲಕ ಸಂಸ್ಕಾರ ಬೆಳೆಯಬಲ್ಲುದು, ಈ ಕಾರಣದಿಂದ ದೇವಸ್ಥಾನದ ವಠಾರದಲ್ಲಿ ಭಜನೆ, ಯಕ್ಷಗಾನದಂತಹ ಕಾರ್ಯಗಳು ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಘಟಕ ಎಸ್.ಎನ್,ಪಂಜಾಜೆ ಅವರನ್ನು ಗೌರವಿಸಲಾಯಿತು. ವಿಶ್ವನಾಥ ಪುಚ್ಚಪ್ಪಾಡಿ ಗೌರವಿಸಿದರು.
ಯಕ್ಷಗಾನ ವಿಮರ್ಶಕ, ಸಂಘಟಕ ಎಸ್.ಎನ್,ಪಂಜಾಜೆ ಮಾತನಾಡಿ, ಗಾನಾರ್ಚನೆಯ ಮೂಲಕ ಕಲಾಸಕ್ತರಿಗೆ ಮಾನಸಿಕವಾದ ಶಕ್ತಿ ತುಂಬಿದೆ. ಯಕ್ಷಗಾನ ಪ್ರತೀ ಮನೆಯಲ್ಲಿ ಬೆಳೆಯಬೇಕು. ಪ್ರತೀ ಮನೆಯ ಮಕ್ಕಳಲ್ಲಿ ಒಬ್ಬರಿಗೆ ಯಕ್ಷಗಾನದಲ್ಲಿ ಪ್ರೀತಿ ಬರುವಾಗ ಪೋಷಕರು ಮಾಡಬೇಕು. ಆಗ ಕಲೆಯೂ ಬೆಳೆಯುತ್ತದೆ, ಭಾರತೀಯ ಪರಂಪರೆಯೂ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಿದ್ಧ ಭಾಗವತರುಗಳಾದ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರುಭಾಗವಹಿಸಿದರು. ಚೆಂಡೆಯಲ್ಲಿ ಸುಬ್ರಹ್ಮಣ್ಯ ದೇಲಂತಮಜಲು, ಮದ್ದಳೆಯಲ್ಲಿ ಕೃಷ್ಣಪ್ರಕಾಶ್ ಉಳಿತ್ತಾಯ, ಚಕ್ರತಾಳದಲ್ಲಿ ಪುರುಷೋತ್ತಮ ಆಚಾರ್ಯ ದುಗ್ಗಲಡ್ಕ ಭಾಗವಹಿಸಿದರು. ಕಲಾವಿದ ಹರೀಶ್ ಬಳಂತಿಮೊಗ್ರು ಕಾರ್ಯಕ್ರಮ ನಿರೂಪಿಸಿದರು.
ಯಕ್ಷಕಲಾಭಿಮಾನಿ ಮಿತ್ರರ ವತಿಯಿಂದ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಅಪರ್ಣಾ ಪುಚ್ಚಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ , ಸತ್ಯನಾರಾಯಣ ಭಟ್ ಹೊನ್ನಡಿ ಸಂಘಟಿಸಿದರು.