ಸುಳ್ಯ ತಾಲೂಕಿನ ಗುತ್ತಿಗಾರಿನ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಹನುಮಗಿರಿ ಮೇಳದ ಯಕ್ಷಗಾನ ಬಯಲಾಟವು ಮೇ.11 ರಂದು ಸಂಜೆ 6 ಗಂಟೆಯಿಂದ ನಡೆಯಲಿದೆ. ಇದೇ ಸಂದರ್ಭ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಲಿದೆ.
ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಕಲೆಯ ಪ್ರೋತ್ಸಾಹದ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯುತ್ತಿದೆ. ಇದೇ ಸಂದರ್ಭ ಒಬ್ಬ ಕಲಾವಿದರನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮವೂ ನಡೆಯುತ್ತಿದೆ. ಈ ಬಾರಿ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಅವರನ್ನು ಗೌರವಿಸಲಾಗುತ್ತಿದೆ.
ಉಬರಡ್ಕ ಉಮೇಶ್ ಶೆಟ್ಟಿ ಅವರು ದಿ, ಕುರಿಯ ವಿಠಲ ಶಾಸ್ತ್ರೀ ಮತ್ತು ದಿ, ಪಡ್ರೆ ಚಂದು ಅವರಿಂದ ಯಕ್ಷಗಾನ ಕಲೆಯನ್ನು ಅಭ್ಯಸಿಸಿದ್ದರು. ಧರ್ಮಸ್ಥಳ ಲಲಿತಾ ಕಲಾಕೇಂದ್ರದ ಮೊದಲನೇ ವರ್ಷದ ವಿದ್ಯಾರ್ಥಿಯಾಗಿರುವ ಉಮೇಶ್ ಶೆಟ್ಟಿ ಅವರು 1972ರಲ್ಲಿ ಶ್ರೀ ಧರ್ಮಸ್ಥಳ ಮೇಳ ಮೂಲಕ ಕಲಾಸೇವೆ ಆರಂಭಿಸಿ 2015 ರ ವರೆಗೆ ಅಂದರೆ ಸುಮಾರು 44 ವರ್ಷ ಕಲಾಸೇವೆ ನಡೆಸಿದ್ದಾರೆ. ಸದ್ಯ ಶ್ರೀ ಹನುಮಗಿರಿ ಮೇಳದಲ್ಲಿ ಅತಿಥಿ ಕಲಾವಿದ.
ತನ್ನ ಸೋದರ ಮಾವನವರಾದ ದಿ. ಅಳಿಕೆ ರಾಮಯ್ಯ ರೈ ಅವರ ಪ್ರೇರಣೆಯಂತೆ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿರುವ ಉಮೇಶ್ ಶೆಟ್ಟಿ ಅವರು, ಕಡತೋಕ ಭಾಗವತರು ಮತ್ತು ಚಿಪ್ಪಾರು ಬಲ್ಲಾಳರ ಮಾರ್ಗದರ್ಶನದಲ್ಲಿ ಅಣ್ಣಪ್ಪ, ಕಂಸ, ಹಿರಣ್ಯಕಶ್ಯಪ, ದ್ರೋಣ, ಅತಿಕಾಯ, ಹನೂಮಂತ ಮೊದಲಾದ ವೇಷಗಳಿಗೆ ತನ್ನದೆ ಛಾಪು ಭಿತ್ತಿ ಮೇರು ಕಲಾವಿದರಾದರು. ಯಕ್ಷಗಾನದಿಂದ ಆರ್ಥಿಕವಾಗಿ ಗಳಿಸಿದ್ದು ಕಡಿಮೆ. ಜನಪ್ರಿಯತೆ ಮತ್ತು ಪ್ರಶಸ್ತಿಗಳ ಬೆನ್ನು ಹತ್ತಿದವರಲ್ಲ. ಸಹೃದಯ ಕಲಾಭಿಮಾನಿಗಳೇ ಅವರು ಸಂಪಾದಿಸಿದ ಆಸ್ತಿ. 2015 ರಲ್ಲಿ ವೃತ್ತಿಪರ ಮೇಳದಿಂದ ತಿರುಗಾಟಕ್ಕೆ ನಿವೃತ್ತಿ ಹೇಳಿದ್ದಾರೆ. ಇವರ ಕಲಾಸೇವೆಗೆ ಈಗಾಗಲೇ 100 ಅಧಿಕ ಸನ್ಮಾನ, ಗೌರವಗಳು ಸಂದಿವೆ.