ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರ ಜಂಟಿ ಆಶ್ರಯದಲ್ಲಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಆಯೋಜನೆಗೊಂಡಿದೆ. 2025 ಜೂನ್ 30ರಿಂದ ಜುಲೈ 6ರ ತನಕ ‘ಶ್ರೀ ಸುಕೃತೀಂದ್ರ ಕಲಾ ಮಂದಿರ’ದಲ್ಲಿ ಸಂಜೆ 4 ರಿಂದ 8 ರ ತನಕ ಪ್ರಸಿದ್ಧ ಕಲಾವಿದರಿಂದ ವಿವಿಧ ಆಖ್ಯಾನಗಳ ತಾಳಮದ್ದಳೆಗಳು ನಡೆಯಲಿವೆ.
ಸಪ್ತಾಹ ಉದ್ಘಾಟನೆ: ಜೂನ್ 30 ಸೋಮವಾರ ಸಂಜೆ ಗಂಟೆ 4ಕ್ಕೆ ಯಕ್ಷಗಾನ ದಶಾವತಾರಿ ಕೆ.ಗೋವಿಂದ ಭಟ್ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರಿನ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಇದರ ಮ್ಹಾಲಕ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಹಾಗೂ ಪುತ್ತೂರು ಶ್ರೀ ರಾಘವೇಂದ್ರ ಮಠದ ಕಾರ್ಯದರ್ಶಿ ಯು ಪೂವಪ್ಪ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಸಪ್ತಾಹ ಸಮಾರೋಪ : ಜುಲೈ 6, ರವಿವಾರದಂದು ಸಂಜೆ ಗಂಟೆ 4ಕ್ಕೆ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಇವರ ದಿವ್ಯ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಹೊನ್ನಾವರದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ,) ಕೆರೆಮನೆ-ಗುಣವಂತೆ ಹಾಗೂ ಹಿರಿಯ ಸ್ತ್ರೀವೇಷಧಾರಿ ಕೊಕ್ಕಡ ಈಶ್ವರ ಭಟ್ಟರಿಗೆ ‘ಕುರಿಯ ಪ್ರಶಸ್ತಿ’ ಪ್ರದಾನಿಸಲಾಗುವುದು. ಈ ಸಂದರ್ಭದಲ್ಲಿ ಬೆಂಗಳೂರಿನ ಉದ್ಯಮಿ, ಕಲಾಪೋಷಕ ಆರ್.ಕೆ.ಭಟ್ಟರಿಗೆ ‘ಕುರಿಯ ಸ್ಮೃತಿ ಗೌರವ’ ನೀಡಿ ಸಂಮಾನಿಸಲಾಗುವುದು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರಿನ ದ್ವಾರಕಾ ಕಾರ್ಪೋರೇಶನ್ ಪ್ರೈ ಲಿ., ಇದರ ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್ ಮುಖ್ಯ ಅಭ್ಯಾಗತರಾಗಿ ಉಪಸ್ಥಿತಿ. ಕೀರ್ತಿಶೇಷ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರ ಸಂಸ್ಮರಣೆಯನ್ನು ಹಿರಿಯ ಆರ್ಥದಾರಿ ವೆಂಕಟರಾಮ ಭಟ್ ಸುಳ್ಯ ಮಾಡಲಿದ್ದಾರೆ.
ಜೂನ್ 30ರಿಂದ ಜುಲೈ 6 ರನಕ ಅನುಕ್ರಮವಾಗಿ “ತರಣಿಸೇನ ಕಾಳಗ, ಶಲ್ಯ ಸಾರಥ್ಯ, ದಕ್ಷಾಧ್ವರ, ದಮಯಂತಿ ಪುನಃ ಸ್ವಯಂವರ, ಕೃಷ್ಣಾರ್ಜುನ ಕಾಳಗ, ವಾಲಿ ವಧೆ, ಗುರುದಕ್ಷಿಣೆ” ಪ್ರಸಂಗಗಳ ತಾಳಮದ್ದಳೆ ಜರುಗಲಿದೆ. ಎಲ್ಲಾ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶ ಇದೆ ಎಂದು ಕುರಿಯ ವಿಠಲಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ತಿಳಿಸಿದ್ದಾರೆ.