ರೈತರು , ಗ್ರಾಮೀಣ ಜನರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ (Yashaswini Yojana) ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸುವ ಸಂಬಂಧ ಬುಧವಾರ ಆದೇಶ ಹೊರಡಿಸಿದೆ. ಈ ಯೋಜನೆಗೆ ನವೆಂಬರ್ 1 ರಿಂದ ನೋಂದಣಿ ಆರಂಭವಾಗಲಿದೆ.
ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿದೆ. ತಾತ್ವಿಕ ಅನುಮೋದನೆ ನೀಡಿ ಸರ್ಕಾರ ಆದೇಶ ನೀಡಿದೆ. 2018ರಲ್ಲಿ ಈ ಯೋಜನೆ ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದೆ. 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿತ್ತು.
ನೂತನ ಯೋಜನೆಯ ಪ್ರಕಾರ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚ 5 ಲಕ್ಷ ನಿಗದಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ 500 ರೂ. ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1000 ರೂ. ಪಾವತಿ ಶುಲ್ಕ ನಿಗದಿ ಪಡಿಸಲಾಗಿದೆ. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬ ಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ. ವಂತಿಗೆ ಪಾವತಿಸಿ, ನೋಂದಾಯಿಸಬಹುದು. ನೊಂದಣಿ ಪ್ರಕ್ರಿಯೆಯನ್ನು 01-11-2022 ರಿಂದ ಪ್ರಾರಂಭವಾಗಲಿದೆ. ಯಶಸ್ವಿ ಯೋಜನೆ ಅವಧಿ 01-01-2023 ರಿಂದ 30-12-2023 ರವರೆಗೂ ಜಾರಿಯಲ್ಲಿರುತ್ತದೆ. 1650 ಖಾಯಿಲೆಗಳಿಗೆ ಈ ಯೋಜನೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಯಶಸ್ವಿನಿ ಈ ಯೋಜನೆಯಲ್ಲಿ 823 ಬಗೆಯ ಶಸ್ತ್ರಚಿಕಿತ್ಸೆಗಳು ಒಳಗೊಂಡಿದೆ.
ಈ ಯೋಜನೆಯಡಿ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ 300 ಕೋಟಿ ರೂ. ಅನುದಾನ ನಿಗದಿ ಪಡಿಸಿದೆ. ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು.
ಯಶಸ್ವಿನಿ ಯೋಜನೆಯ ಫಲಾನುಭವಿಯಾಗಲು ಕನಿಷ್ಠ 3 ತಿಂಗಳು ಮುಂಚಿತವಾಗಿ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಗ್ರಾಮೀಣ ಸಹಕಾರ ಸಂಘ/ಬ್ಯಾಂಕ್ ಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು.
ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ/ಸಹಕಾರಿ ಬ್ಯಾಂಕುಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ ಸದಸ್ಯರು ಕೂಡ ಯೋಜನೆಯ ಸೌಲಭ್ಯ ಪಡೆಯಬಹುದು. ನಗರ/ಪಟ್ಟಣ ಪ್ರದೇಶದಲ್ಲಿ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು ಮತ್ತು ಸಹಕಾರಿ ನೇಕಾರರು ಕೂಡ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಈ ಯೋಜನೆಯಲ್ಲಿ ಚಿಕಿತ್ಸೆಗಳಾದ ಕೀಮೊಥೆರಪಿ, ರೇಡಿಯೋ ಥೆರಪಿ, ಜಾಯಿಂಟ್ ಬದಲಾವಣೆ, ಸುಟ್ಟು ಗಾಯಗಳು, ರಸ್ತೆ ಅಪಘಾತಗಳು, ಹಲ್ಲಿನ ಶಸ್ತ್ರಚಿಕಿತ್ಸೆ, ಚರ್ಮದ ಗ್ರಾಫ್ಟಿಂಗ್,ಸ್ಟಂಟ್, ಇಂಪ್ಲಾಂಟ್ಸ್ ಇತ್ಯಾದಿ ಸೌಲಭ್ಯಗಳು ಯೋಜನೆಯಲ್ಲಿ ಸೇರಿರುವುದಿಲ್ಲ. ಇಂತಹ ಅನಾರೋಗ್ಯಗಳಿಗೆ ಫಲಾನುಭವಿ ಪಡೆಯುವ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರಗಳ ಹಾಗೂ ಶಸ್ತ್ರಚಿಕಿತ್ಸಾ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕು