ದೈವರಾಧನೆ ಎಂಬುವುದು ತುಳುನಾಡಿನ ಶ್ರೀಮಂತ ಸಂಸ್ಕೃತಿ. ಇದೊಂದು ರೀತಿಯ ಅಲೌಕಿಕ ಶಕ್ತಿಗಳ ಆರಾಧನೆ. ದೈವರಾಧನೆಯು ತುಳುನಾಡಿನ ಪ್ರಮುಖ ಆರಾಧನಾ ಶಕ್ತಿಗಳಾಗಿದ್ದು, ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಬೇರೆ ಬೇರೆ ರೀತಿಯ ದೈವಗಳನ್ನು ಒಂದು ಮರದ ಅಡಿಯಲ್ಲಿ ಹರಿಯುವ ನೀರಿನ ತೋಡಿನಿಂದ ಒಂದು ಕಲ್ಲನ್ನು ಇಟ್ಟು, ಕಾಡಿನಲ್ಲಿ ಸಿಗುವ ಹೂ,ಹರಿಯುವ ತೋಡಿನ ನೀರಿನಿಂದ ಸ್ವಚ್ಛಗೊಳಿಸಿ ದೈವಗಳನ್ನು ನಿಲೆ ಮಾಡಿ ಆರಾಧಿಸುತ್ತಿದ್ದರು. ದೈವಗಳಲ್ಲಿ ಸಾಮಾನ್ಯವಾಗಿ ಭೂಮಿ ಸೃಷ್ಟಿ ಆಗುವಾಗ ಇರುವ ದೈವಗಳು, ಪ್ರಾಣಿಮೂಲ ದೈವಗಳು, ಮನುಷ್ಯ ಮೂಲ ದೈವಗಳೆಂದು ವರ್ಗೀಕರಣ ಮಾಡಬಹುದು. ಮನುಷ್ಯ ಮೂಲ ದೈವಗಳ ಹಿಂದೆ ಅತ್ಯಂತ ರೋಚಕವಾದ , ದುರಂತಮಯ ಕತೆಗಳು ಅಡಗಿವೆ. ನ್ಯಾಯ ,ಧರ್ಮಕ್ಕಾಗಿ ಹೋರಾಟ ಮಾಡಿ ತಮ್ಮ ಜೀವನವನ್ನೇ ಅರ್ಪಿಸಿದ ಸಂಗತಿಗಳು ಇವೆ. ಇಂತಹ ಅದ್ಭುತ ಸಂಗತಿಗಳೆ ದೈವಗಳ ಸಂಧಿ ಪಾಡ್ದನಗಳು. ಇಂತಹ ಪಾಡ್ದನಗಳೆ ತುಳುನಾಡಿನ ಮಹಾಕಾವ್ಯಗಳು.……..ಮುಂದೆ ಓದಿ…..
ಈ ದುರಂತಮಯ ಕತೆಗಳಿಗಳ ಪಟ್ಟಿಗೆ ನಾವು ಆರಾಧಿಸುವ ಬಚ್ಚನಾಯಕ ದೈವದ ಕತೆಗಳು ಸೇರಿವೆ. ಸಕಲೇಶಪುರ ತಾಲ್ಲೂಕು ಐಗೂರು ಸೀಮೆ ವ್ಯಾಪ್ತಿಗೆ ಸೇರಿದ ಕಾಗೆನೂರು ಪ್ರದೇಶದಲ್ಲಿ ಕೋಟೆಯ ಕಾಯುವ ದಳವಾಯಿ ಮಲ್ಲಗೌಡ ಮತ್ತು ಲೀಲಾವತಿ ಎಂಬ ದಂಪತಿಗಳು ಇದ್ದರು. ಈ ದಂಪತಿಗಳಿಗೆ ಬಚ್ಚನಾಯಕ, ಕೋಟಿನಾಯಕ,ಬಸ್ತಿ ನಾಯಕ ,ಹಾಗೂ ಒಬ್ಬಳು ಸಹೋದರಿ ಸೇರಿ ನಾಲ್ಕು ಜನ ಮಕ್ಕಳಿದ್ದರು. ಇವರು ಇಕ್ಕೇರಿ ವಂಶಕ್ಕೆ ಸಂಬಂಧಿಸಿದ ಆಡಳಿತದಲ್ಲಿ ಕೆಲಸ ಮಾಡುತ್ತಿದ್ದರು.
ಮಕ್ಕಳು ದೊಡ್ಡವರಾಗುತ್ತಲೇ ಯುದ್ಧಭ್ಯಾಸ, ಯುದ್ಧ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಜೊತೆಗೆ ಸಹೋದರರು ಊರು ಊರು ಸುತ್ತಿ ಅಲ್ಲಿಯ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿಕೊಂಡುಬರುವುದು ಅಭ್ಯಾಸ ಆಗಿರುತ್ತದೆ. ಹಿಂದಿನ ಕಾಲದಲ್ಲಿ ತುಳುನಾಡಿಗೆ ಬರಬೇಕಾದರೆ ಕುದುರೆ ಸವಾರಿ ಮೂಲಕ ಮಾತ್ರವೇ ಸಾಧ್ಯವಿತ್ತು.
ಒಂದು ದಿನ ಬಚ್ಚನಾಯಕ ಮತ್ತು ಸಹೋದರರು ಗುಂಡ್ಯದ ಗುಂಡ್ಯ ತೋಟ ಎಂಬಲ್ಲಿಗೆ ಜಾತ್ರೆಯ ವೀಕ್ಷಣೆ ಮಾಡಲು ಬರುತ್ತಾರೆ. ಈ ಸಂದರ್ಭದಲ್ಲಿ ಒಬ್ಬಳು ಹೆಣ್ಣಿನ ಪರಿಚಯ ಆಗುತ್ತದೆ. ಅವಳು ಬಚ್ಚನಾಯಕನನ್ನು ತನ್ನ ಸ್ವಾಧೀನಕ್ಕೆ ಪಡೆಯಲು ಮುಂದಾಗುತ್ತಾರೆ. ಅವಳ ನಯವಾದ ಮಾತಿಗೆ ಮರುಳಾಗಿ ಜೊತೆ ಸೇರುವ ಸಂದರ್ಭದಲ್ಲಿ ಅವಳೊಬ್ಬಳು ವೈಶ್ಯೆ ಎಂದು ಬಚ್ಚನಾಯಕನಿಗೆ ತಿಳಿಯುತ್ತದೆ. ಈ ಸಂದರ್ಭದಲ್ಲಿ ಕೋಪಗೊಂಡ ಬಚ್ಚನಾಯಕನು ವೈಶ್ಯೆಯ ತಲೆಯನ್ನು ಕತ್ತರಿಸುತ್ತಾನೆ. ಇದಕ್ಕೆ ಪೂರಕವಾಗಿ ಗುಂಡ್ಯ ತೋಟದಲ್ಲಿ ಒಂದು ಕಲ್ಲು ಸಾಕ್ಷಿ ಹೇಳುತ್ತದೆ ಎಂದು ಜಾನಪದ ವಿದ್ವಾಂಸರಾದ ಆನಂದ ಗೌಡ ಪರ್ಲ ಹೇಳುತ್ತಾರೆ.
ತದನಂತರ ಬಚ್ಚನಾಯಕ ಮತ್ತು ಸಹೋದರರು ತಮ್ಮ ಮೂಲ ಜಾಗ ಕಾಗೆನೂರುಗೆ ಬರುತ್ತಾರೆ . ನಂತರ ಅವರ ತಂಗಿಗೆ ಮದುವೆ ಕೂಡ ಆಗುತ್ತದೆ. ಬಚ್ಚನಾಯಕ ಮತ್ತು ಸಹೋದರರು ಇಕ್ಕೇರಿ ವಂಶದ ಕೋಟೆ ಕಾಯುವ ಕೆಲಸದಲ್ಲಿ ತೊಡಗುತ್ತಾರೆ. ಈ ಸಂದರ್ಭದಲ್ಲಿ ಯೇನೆಕಲ್ಲು ಮುನ್ನೂರೊಕ್ಕಳು ಪ್ರದೇಶವನ್ನು ಪಂಜದ ಬಳ್ಳಾಳರು ಆಡಳಿತ ಮಾಡುತ್ತಿದ್ದರೂ . ಆ ಪ್ರದೇಶವು ಬಾನಡ್ಕ ಕೆಳಗಿನ ಮನೆ ಸಲಿಗೆ ಸುಬ್ಬಗೌಡನ ಕೈಯಲ್ಲಿತ್ತು. ಯೇನೆಕಲ್ಲಿನಿಂದ ಪಂಜ ಬಳ್ಳಾಲರಿಗೆ ಸರಿಯಾಗಿ ಕಪ್ಪಕಾಣಿಕೆ ಬಾರದೆ ಇರುವುದು ಅಸಮಾಧಾನ ಇತ್ತು. ಬಾನಡ್ಕ ಸುಬ್ಬಗೌಡರ ಕೈ ಚಲಕಕ್ಕೆ ಸರಿಯಾಗಿ ಪಂಜದ ಬಳ್ಳಾಲರು ಉಪಾಯವನ್ನು ಹುಡುಕಿದರು. ಇದಕ್ಕೆ ಸರಿಯಾದ ವ್ಯಕ್ತಿಯ ಅಗತ್ಯ ಇತ್ತು. ವ್ಯಕ್ತಿಯ ನೇಮಕಕ್ಕೆ ಹೊರಟಾಗ ಕಾಗೆನೂರು ಪ್ರದೇಶದ ಬಚ್ಚನಾಯಕನೆ ಸರಿಯಾದ ವ್ಯಕ್ತಿ ಎಂದು ತೀರ್ಮಾನಕ್ಕೆ ಬರಲಾಯಿತು.
ಕಡಬ ಸಂಸ್ಥಾನದಿಂದ ಐಗೂರು ಸೀಮೆಯ ಇಕ್ಕ್ಕೇರಿ ವಂಶದವರಿಗೆ ಪತ್ರ ರವಾನೆ ಆಗಿತ್ತು. ನಮ್ಮ ಸಂಸ್ಥಾನದಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಅದನ್ನು ಪರಿಹರಿಸಲು ನಿಮ್ಮ ಸಂಸ್ಥಾನದ ದಳವಾಯಿಗಳ ಅಗತ್ಯವಿದೆ ಎಂದು ಬರೆಯಲಾಗಿತ್ತು. ಈ ಪತ್ರವು ಬಚ್ಚನಾಯಕನ ಕೈಗೆ ಸಿಗುತ್ತದೆ. ಇದನ್ನು ಓದಿದ ಬಚ್ಚನಾಯಕನು ಕೆಲವೇ ಸಮಯದಲ್ಲಿ ಬರುತ್ತೇನೆ ಎಂದು ಪ್ರತಿಕ್ರಿಯೆ ನೀಡುತ್ತಾನೆ. ಬಚ್ಚನಾಯಕನು ತುಳುನಾಡಿಗೆ ಹೋಗಲು ಸಿದ್ಧವಾಗುತ್ತಾನೆ. ಈ ವಿಚಾರಗಳನ್ನು ತಂದೆ ತಾಯಿಗೆ ವಿವರಿಸುತ್ತಾನೆ. ಇದಕ್ಕೆ ತಂದೆ ತಾಯಿ ಸಹೋದರರಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತದೆ. ನಂತರ ಬಸುರಿಯಾದ ತನ್ನ ತಂಗಿಯ ಜೊತೆ ವಿಚಾರಗಳನ್ನು ಬಚ್ಚನಾಯಕನು ಹಂಚಿಕೊಂಡಾಗ ವಿರೋಧ ವ್ಯಕ್ತಪಡಿಸಿದಳು. ಇದರಿಂದ ಕೋಪಗೊಂಡ ಬಚ್ಚನಾಯಕನು ತಂಗಿಗೆ ಕಾಲಿನಿಂದ ಒದೆಯುತ್ತಾನೆ . ಆಗ ತಂಗಿಗೆ ಗರ್ಭಪಾತವಾಗುತ್ತದೆ. ತಕ್ಷಣ ಅಲ್ಲಿಂದ ಬಚ್ಚನಾಯಕನು ಕುದುರೆ ಏರಿ ತುಳುನಾಡಿಗೆ ಬರುತ್ತಾನೆ. ಬರುತ್ತಾ ಶಿರಾಡಿ ಗಡಿ ದಾಟಿ ಅಡ್ಡ ಹೊಳೆಯಲ್ಲಿ ವಿಶ್ರಾಂತಿ ಪಡೆದು ಕೊಂಬಾರು ಬೀಡಿಗೆ ತಲುಪುತ್ತಾನೆ. ಅಲ್ಲಿಂದ ಮಾರನೆ ದಿನ ಕಡಬ ಸಂಸ್ಥಾನಕ್ಕೆ ಬರುತ್ತಾನೆ. ಆಗ ಪಂಜದ ಬಳ್ಳಾಳರು ಮತ್ತು ಕಡಬದ ಬಳ್ಳಾಳರು ಸೇರಿ ಯೇನೆಕಲ್ಲು ಮೇಲೆ ದಂಡೇತ್ತಿ ಹೋಗುವ ವಿಚಾರವಾಗಿ ಮಾತುಕತೆ ನಡೆಸುತ್ತಾರೆ. ಈ ವಿಚಾರ ಬಾನಡ್ಕ ಸಬ್ಬಗೌಡರಿಗೆ ತಿಳಿಯುತ್ತದೆ.
ಇದಕ್ಕೆ ಪ್ರತಿಯಾಗಿ ಸಬ್ಬಗೌಡರು ತನ್ನ ಕೋಟೆಯ ಸುತ್ತ ಮುಗೇರ ಸಮುದಾಯದ ಜವಾನರನ್ನು ಪಿಲಿಕಂದಡಿ ಹಾವಿನ ವಿಷ ಉಜ್ಜಿದ ಬಿಲ್ಲು ಪಗರಿಯಿಂದ ಸಿದ್ದಗೊಳಿಸಿ ನಿಲ್ಲಿಸುತ್ತಾನೆ. ಬಚ್ಚನಾಯಕನು ಕಡಬದಿಂದ ಯೇನೆಕಲ್ಲಿಗೆ ಸೇನೆಯೊಂದಿಗೆ ದಂಡೆತ್ತಿ ಬರುತ್ತಾನೆ. ಸೇನೆಯನ್ನು ಸಂಕಡ್ಕ ಎಂಬಲ್ಲಿ ನಿಲ್ಲಿಸಿ ಒಬ್ಬನೆ ಬಾನಡ್ಕ ಕಡೆ ಹೋಗುತ್ತಾನೆ. ಬಚ್ಚನಾಯಕನು ಕದುರೆ ಮೇಲೆ ಕುಳಿತು ಸಬ್ಬಗೌಡರ ಮನೆಯ ಅಂಗಳಕ್ಕೆ ಬರುತ್ತಾನೆ. ಈ ಸಂದರ್ಭದಲ್ಲಿ ಸಬ್ಬಗೌಡರು ತೆಂಗಿನ ಮರದ ಮೇಲೆ ಪಂಚೋಲಿ ಎಲೆ ಕೀಳುತ್ತಾ ಇರುತ್ತಾರೆ. ಬಚ್ಚನಾಯಕನನ್ನು ನೋಡಿದ ಸಬ್ಬಗೌಡರ ಇಬ್ಬರು ಹೆಂಡತಿಯರು ಬಚ್ಚನಾಯಕನನ್ನು ವಿಚಾರಿಸುತ್ತಾರೆ. ಇದನ್ನು ನೋಡಿದ ಸಬ್ಬಗೌಡನು ನಮ್ಮ ಮನೆಗೆ ಯಾರೋ ವಿರೋಧಿಗಳು ಬಂದಿದ್ದಾರೆ ಎಚ್ಚೆತ್ತುಕೊಳ್ಳಿ ಎಂದು ಜೋರಾಗಿ ಕೂಗುತ್ತಾನೆ. ಇದರಿಂದ ಬೆದರಿದ ಬಚ್ಚನಾಯಕನು ವಾಪಾಸು ಹಿಂದುರುಗಲು ಮುಂದಾದಾಗ ಒಂದು ಬಾಣ ಬಚ್ಚನಾಯಕನ ಶರೀರದ ಒಳಗೆ ಹೊಕ್ಕುತ್ತದೆ. ತಕ್ಷಣ ಕುದುರೆಯಿಂದ ಕೆಳಗೆ ಉರುಳಿ ಬೀಳುತ್ತಾನೆ. ಹೀಗೆ ಬಚ್ಚನಾಯಕನ ಜೀವನ ದುರಂತಮಯವಾಗಿ ಅಂತ್ಯವಾಗುತ್ತದೆ. ತದನಂತರ ಬಚ್ಚನಾಯಕನು ದೈವತ್ವಕ್ಕೆ ಏರಿ ಕಾರಣಿಕದ ಶಕ್ತಿಯಾಗಿ ಆರಾಧನೆ ಪಡೆಯುತ್ತಿದ್ದಾನೆ .
( ಭಾಸ್ಕರ ಜೋಗಿಬೆಟ್ಟು ಅವರು ಹವ್ಯಾಸಿ ಬರಹಗಾರ ಹಾಗೂ ದೈವಾರಾಧನೆ ಮತ್ತು ಜಾನಪದ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ. )