ಎತ್ತಿನ ಹೊಳೆ ಯೋಜನೆಯ ಮೂಲಕ ಬರಪೀಡಿತ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿ ಬರದಿಂದ ಸಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು. 2027 ರ ಒಳಗಾಗಿ ಕೋಲಾರ ಭಾಗಕ್ಕೆ ಎತ್ತಿನ ಹೊಳೆ ನೀರನ್ನು ಹರಿಸಬೇಕು ಎಂಬುದು ನಮ್ಮ ಸರ್ಕಾರದ ಸಂಕಲ್ಪ ಎಂದು ಉಪಮಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಗೆ ಅರಣ್ಯ ಇಲಾಖೆಗೆ ಸಂಬಂಧಿತ ಸಮಸ್ಯೆಗಳು, ಭೂ ಸ್ವಾಧೀನ ಪ್ರಕ್ರಿಯೆ, ಬೈರಗೊಂಡಲು, ಲಕ್ಕೇನಹಳ್ಳಿಯಲ್ಲಿ ಸಮತೋಲಿತ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಹಾಗೂ ಆರ್ಥಿಕ ವಿಚಾರವಾಗಿ ಚರ್ಚೆ ನಡೆ
ತುಮಕೂರಿನಲ್ಲಿ ಮಾತನಾಡಿದ ಉಪಮಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರೈತರ ಹಿತ ಕಾಪಾಡಿಕೊಂಡು ಎತ್ತಿನಹೊಳೆ ಯೋಜನೆ ನೀರನ್ನು ಸಂಗ್ರಹಿಸಲು ಕೊರಟಗೆರೆ ತಾಲೂಕಿನ ಬೈರಗೊಂಡಲುವಿನಲ್ಲಿ ಜಲಾಶಯ ನಿರ್ಮಿಸಲಾಗವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗುವ ರೈತರಿಗೆ ಅನ್ಯಾಯವಾಗದಂತೆ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದಕ್ಕೂ ಮೊದಲು ವಿವಿಧೆಡೆ ಎತ್ತಿನ ಹೊಳೆ ಕಾಮಗಾರಿ ಪರಿಶೀಲಿಸಿದರು. ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಜಲಾಶಯ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಆಲಪ್ಪನಹಳ್ಳಿಯಲ್ಲಿ ಲಿಫ್ಟ್ ಪಂಪ್ ಹೌಸ್ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಎತ್ತಿನ ಹೊಳೆ ಯೋಜನೆಯನ್ನು ಆದಷ್ಟು ಶೀಘ್ರ ಜಾರಿಗೆ ತರಲಾಗುವುದು. ಮೊದಲ ಹಂತದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 14.5 ಟಿಎಂಸಿ ನೀರನ್ನು ನೀಡಬೇಕಾಗಿದೆ. ದೊಡ್ಡಬಳ್ಳಾಪುರ ಮತ್ತು ಕೊರಟಗೆರೆ ತಾಲೂಕಿನಲ್ಲಿ ಜಲಾಶಯ ಹಾಗೂ ಲಿಫ್ಟ್ ಪಂಪ್ ಹೌಸ್ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿ ನೀಡಿರುವ ರೈತರ ಹಿತವನ್ನು ಕಾಪಾಡುವುದು ಸರ್ಕಾರದ ಆದ್ಯತೆಯಾಗಿದೆ. ಸ್ಥಳೀಯ ಬೇಡಿಕೆಗಳಿಗೆ ಮೊದಲ ಪ್ರಾಶಸ್ತ್ಯದಲ್ಲಿ ಸ್ಪಂದನೆ ನೀಡಲಾಗುವುದು ಎಂದು ತಿಳಿಸಿದರು.ಎತ್ತಿನ ಹೊಳೆ ಯೋಜನೆಯನ್ನು 2027ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸಿ, ಬಯಲುಸೀಮೆಯ 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಬೆಂಗಳೂರಿನಲ್ಲಿ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಎತ್ತಿನ ಹೊಳೆ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ. 2027ರ ಮಾರ್ಚ್ ವೇಳೆಗೆ ಕಾಮಗಾರಿ ಸಂಪೂರ್ಣಗೊಳಿಸಲು ಕಾಲಾವಧಿ ನಿಗದಿಪಡಿಸಲಾಗಿದೆ. ಯೋಜನೆಯ ಬಯಲುಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಗುರಿ ಹೊಂದಿದೆ ಎಂದರು. ಯೋಜನೆಯ ಅನುಷ್ಠಾನಕ್ಕೆ ಇರುವ ತಾಂತ್ರಿಕ ಅಡಚಣೆಗಳನ್ನು ಶೀಘ್ರ ನಿವಾರಿಸಬೇಕು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.