ಪ್ರತಿಯೊಬ್ಬ ಮನುಷ್ಯನೂ ಆರೋಗ್ಯವಂತನಾಗಿರಲು ಬಯಸುವುದು ಸಹಜವಲ್ಲವೇ? ಸದೃಢ ಶರೀರದೊಂದಿಗೆ , ಮಾನಸಿಕ ಆರೋಗ್ಯ ವೂ ಬಹಳ ಮುಖ್ಯ. ಈ ಎರಡರ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವುದು ಯೋಗ.
ಇಂದು ಯೋಗದೆಡೆಗೆ ನಮ್ಮ ದೃಷ್ಟಿ ಬದಲಾಗಿದೆ. ಯೋಗವೆಂದರೆ ಯೋಗಿಗಳಿಗೆ, ಸಂತರಿಗೆ, ಸಂನ್ಯಾಸಿಗಳಿಗೆ ಎಂಬ ಭಾವನೆ ದೂರವಾಗಿದೆ. ಜನಸಾಮಾನ್ಯರ ಬದುಕಿನ ಅವಿಭಾಜ್ಯ ಅಂಗವಾಗಿದೆ ಯೋಗ. ಕೊರೊನಾ ನಮ್ಮನ್ನು ಯೋಗದತ್ತ ಮುಖಮಾಡುವಂತೆ ಮಾಡಿದೆ.
ನಮ್ಮ ದೇಶದ ಹೆಮ್ಮೆ ಯೋಗ. ಪ್ರಾಚೀನ ಪರಂಪರೆಯ ಕೊಡುಗೆ. ಆಯುರ್ವೇದ ವೈದ್ಯ ಪದ್ಧತಿಯೊಂದಿಗೆ ಯೋಗದ ಕೊಡುಗೆಯೂ ಮಹತ್ವದ್ದು. ಪತಂಜಲಿ ಮಹರ್ಷಿಯೋಗ ಪಿತಾಮಹ. ಯೋಗದ ಸೂತ್ರಗಳನ್ನು ಕ್ರೋಡೀಕರಿಸಿದವರು.ಹತ್ತು ಹದಿನೈದು ವರುಷಗಳಿಂದ ಯೋಗದ ಸ್ವರೂಪ ಬದಲಾಗುತ್ತಿದೆ. ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು ನಮ್ಮ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರು.
ನರೇಂದ್ರ ಮೋದಿಯವರು ನಮ್ಮ ಭಾರತದ ಚಿತ್ರಣವನ್ನು ವಿಶ್ವದ ದೃಷ್ಟಿಯಲ್ಲಿ ಸಂಪೂರ್ಣವಾಗಿ ಬದಲಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾದರು. ಅವುಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡದ್ದು “ಯೋಗ”. ಆರೋಗ್ಯದ ದೃಷ್ಟಿಯಿಂದ ಯೋಗದ ಪ್ರಾಮುಖ್ಯತೆ ಯನ್ನು ಜಗತ್ತು ಗುರುತಿಸುವಂತೆ ಮಾಡಿದರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ಸೂಚಿಸಿದುವು. ಪ್ರಪಂಚದೆಲ್ಲೆಡೆ ಈ ದಿನದಂದು ಯೋಗದಿನವಾಗಿ ಆಚರಿಸಲಾಗುತ್ತದೆ.
ಯೋಗವೆಂದರೆ ಬರಿಯ ವ್ಯಾಯಾಮ ವಲ್ಲ. ಶಿಸ್ತು ಬದ್ಧ ಉಸಿರಾಟದೊಂದಿಗೆ ಕ್ರಮಬದ್ಧ ವಾಗಿ ಮಾಡುವ ಯೋಗವೇ ನಿಜವಾದ ಯೋಗ. ಗುರುಮುಖೇನವೇ ಯೋಗ ಕಲಿಯಬೇಕೆಂಬ ನಿಯಮವಿದೆ. ಶಿಸ್ತು, ಸಂಯಮವನ್ನು ಯೋಗ ಕಲಿಸುತ್ತದೆ. ಮನಸಿನ ನಿಯಂತ್ರಣವನ್ನು ಹೇಗೆ ಮಾಡಬೇಕೆಂದು ಯೋಗ ತಿಳಿಸುತ್ತದೆ. ಮನೋಬಲವನ್ನು ಹೆಚ್ಚಿಸುತ್ತಾ ಶರೀರವನ್ನು ಗಟ್ಟಿಗೊಳಿಸುವ ಶಕ್ತಿ ಯೋಗಕ್ಕಿದೆ. ನಾವು ಏನೇ ಮಾಡಿದರು ನಂಬಿಕೆಯಿದ್ದಾಗ ಮಾತ್ರ ಯಶಸ್ಸಿನ ನಿರೀಕ್ಷೆ ಮಾಡಬಹುದು. ಈ ಮಾತು ಯೋಗದ ವಿಷಯದಲ್ಲಿ ಅಕ್ಷರಶಃ ಸತ್ಯ. ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಪಲಿತಾಂಶ ಖಂಡಿತ. ಯಾವುದನ್ನು ಇಷ್ಟಪಟ್ಟು ಮಾಡುತ್ತೇವೋ ಅದು ಎಷ್ಟು ಕ್ಲಿಷ್ಟಕರವಾದರೂ ನಮಗೊಲಿಯುತ್ತದೆ. ಅದಕ್ಕಾಗಿ ಸಮಯ ಮೀಸಲಿಟ್ಟು ಮಾಡಬೇಕಲ್ಲಾ ಎಂಬ ಭಾವನೆಯಲ್ಲಿ ಮಾಡಿ ಪ್ರಯೋಜನವಿಲ್ಲ, ಯಾವುದೇ ಒತ್ತಡದಲ್ಲೂ ಮಾಡಬಾರದು. ಪ್ರಶಾಂತ ಮನಸಿನಿಂದ ಮಾಡಿದಾಗ ಯೋಗ ಇಷ್ಟವಾಗುತ್ತದೆ.
ಜೂನ್ 21 ರಂದೇ ಯಾಕೆ ಯೋಗ ದಿನದ ಆಚರಣೆ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಕಾರಣ.
ಜೂನ್ 21 ವಿಶೇಷವಾದ ಆಯನ ಸಂಕ್ರಾಂತಿಯ ದಿನ. ಇಂದು ದೀರ್ಘ ಕಾಲದ ಹಗಲಿರುತ್ತದೆ. ಉತ್ತರ ಗೋಲಾರ್ಧದಲ್ಲಿ ದೀರ್ಘವಾಗಿಯು, ದಕ್ಷಿಣ ಗೋಳಾರ್ಧದಲ್ಲಿ ಕಡಿಮೆ ಹಗಲು ಇರುವ ದಿನವಾಗಿದೆ. ಯೋಗದ ದೃಷ್ಟಿ ಯಲ್ಲಿ ಈ ದಿನ ಮಹತ್ವ ಪೂರ್ಣ ವಾದ ದಿನವಾಗಿದೆ. ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸುವ ದಿನವಾಗಿದೆ. ಆಧ್ಯಾತ್ಮಿಕ ಅಭ್ಯಾಸ ಗಳಿಗೆ ದಕ್ಷಿಣ ಯಾನ ನೈಸರ್ಗಿಕ ಬೆಂಬಲವೀಯುವುದರಿಂದ ಈ ದಿನವನ್ನು ಸೂಕ್ತ ವೆಂದು ಆಯ್ದುಕೊಳ್ಳಲಾಗಿದೆ. ದೈವ ಬಲವೂ , ಮನೋಬಲವು ಒಂದಾದರೆ ಯಶಸ್ಬು ಖಂಡಿತ. ಇನ್ನೂ ಯಾಕೆ ತಡ ಮಾಡೋಣ ಬನ್ನಿ ಯೋಗ.
#ಅಶ್ವಿನಿಮೂರ್ತಿ ಅಯ್ಯನಕಟ್ಟೆ