ರಾಷ್ಟ್ರೀಯ ಹೆದ್ದಾರಿ 75 ರಸ್ತೆಯ ದುಃಸ್ಥಿತಿಗೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮಂಗಳೂರು (Mangalore) ನಗರದ ನಂತೂರು ವೃತ್ತದಲ್ಲಿ ಯುವಕನೊಬ್ಬ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪುತ್ತೂರಿನ ಲಿಖಿತ್ ರೈ ಎಂಬ ಯುವಕ ‘ಕಮ್ ಬ್ಯಾಕ್ ಮೋದಿ, ರೋಡ್ ವರ್ಕ್ ಸೀರ್ಫ್ ಮೋದಿ ಹೈ ತೋ ಮುಮ್ಕೀನ್ ಹೈ. ಪಾಟ್ ಹೋಲ್ ಸೇ ಆಜಾದಿ, ವಿ ಡಿಮ್ಯಾಂಡ್ ಸೇಫ್ ರೋಡ್ಸ್ ಎಂಬ ಫಲಕ ಹಿಡಿದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಈ ಸಂದರ್ಭ ಆಡಳಿತವು ಶೀಘ್ರವಾಗಿ ರಸ್ತೆ ಕಾಮಗಾರಿಯನ್ನು ಕೈಗೊಂಡಿತ್ತು. ಆದರೆ ಮೋದಿಯವರು ತೆರಳಿದ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಬಿದ್ದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿದೆ. ಅದಾದ ಬಳಿಕ ಮತ್ತೆ ದುರಸ್ತಿ ಮಾಡಲಾಗಿದೆ. ಆದರೆ ರಸ್ತೆ ಹದಗೆಟ್ಟ ಸ್ಥಿತಿ ಇನ್ನೂ ಹಲವು ಕಡೆ ಇದೆ. ಇದಕ್ಕಾಗಿ ನರೇಂದ್ರ ಮೋದಿಯವರು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುವಂತೆ ಲಿಖಿತ್ ಮನವಿ ಮಾಡಿದ್ದಾರೆ. ಇದಕ್ಕಾಗಿ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್ ನಂತೂರಿನಲ್ಲಿ ಅವರು ಒಂದು ಗಂಟೆಗಳ ಕಾಲ ಈ ಪ್ರತಿಭಟನೆ ನಡೆಸಿದ್ದರು.
ಇದೇ ಆಗಸ್ಟ್ 5 ರಂದು ಬಿಕರ್ನಕಟ್ಟೆ ಬಳಿ ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಪ್ರಾಣ ಕಳೆದುಕೊಂಡ ತನ್ನ ಕಾಲೇಜು ಸಹಪಾಠಿ ಆತಿಶ್‌ಗೆ ನ್ಯಾಯ ಕೋರಿ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಕಚೇರಿ ಎದುರು ಯುವಕ ಲಿಖಿತ್ ರೈ ಪ್ರತಿಭಟನೆ ನಡೆಸಿದ್ದರು. ಅದಾದ ಬಳಿಕ ಮಂಗಳೂರು ಮಹಾನಗರ ಪಾಲಿಕೆ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿತ್ತು. ಇದೀಗ ಮತ್ತೆ ಫಲಕ ಹಿಡಿದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಲಿಖಿತ್ ರೈ, ಹೆದ್ದಾರಿಯಲ್ಲಿ ಹಲವಾರು ಅಪಘಾತಗಳು ನಡೆಯುತ್ತಿವೆ. ರಸ್ತೆ ತೆರಿಗೆ ಕಟ್ಟುತ್ತಿರುವ ಪ್ರಯಾಣಿಕರಿಗೆ ಉತ್ತಮ ರಸ್ತೆ ಕಲ್ಪಿಸಲು ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು ಎಂದು ಆಗ್ರಹಿಸುತ್ತೇವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಸ್ತೆಗಳನ್ನು ದುರಸ್ತಿ ಮಾಡಲಾಗಿತ್ತು. ಈಗ ರಸ್ತೆಗಳ ದಯನೀಯ ಸ್ಥಿತಿಯನ್ನು ತಿಳಿಯಲು ಪ್ರಧಾನಿಯವರು ಸಕಲೇಶಪುರದಿಂದ ಮಂಗಳೂರಿಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸಬೇಕು ಎಂದರು. ಅಧಿಕಾರಿಗಳು ಹೆದ್ದಾರಿ ರಸ್ತೆಗಳಲ್ಲಿ ಸರಿಯಾದ ಬೀದಿ ದೀಪಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.