ಪ್ಲವನಾಮ ಸಂವತ್ಸರವು ಕೊನೆಯಾಗುತ್ತಿರುವ ಸಂದರ್ಭದಲ್ಲಿ, ಶುಭಕೃತ್ ಸಂವತ್ಸರ ಹೊಸ್ತಿಲ್ಲಲ್ಲಿ ಇದ್ದೇವೆ. ಎರಡು ವರ್ಷಗಳಿಂದ ಯುಗಾದಿಯ ಸಂಭ್ರಮಕ್ಕೆ ಕಡಿವಾಣ ಹಾಕಿ ಕೊಂಡು ಕಳೆದಿದ್ದೇವೆ. ಕೊರೋನಾ ಸಮಯದಲ್ಲಿ ಯಾವ ಸಂಭ್ರಮಕ್ಕೂ ಅವಕಾಶವಿರಲಿಲ್ಲ. ಆದರೆ ಈ ಬಾರಿ ಎಲ್ಲವೂ ಮುಕ್ತ ಮುಕ್ತ. ಕೊರೊನಾ ತೀವ್ರತೆ ಕಮ್ಮಿಯಾಗಿದೆ. ಹೊಸ ವರ್ಷದ ಸಂತಸಕ್ಕೆ ಬ್ರೇಕ್ ಇಲ್ಲವೇ ಇಲ್ಲ. ಎಲ್ಲರಿಗೂ ಯುಗಾದಿಯ ಶುಭಾಶಯಗಳು.
ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಈ ಹಬ್ಬವು ಹಿಂದುಗಳ ವರ್ಷಾರಂಭದ ಪವಿತ್ರ ದಿನ. ಯುಗಾದಿ ಎಂದರೆ ನಮಗೆ ಹೊಸವರ್ಷ. ಹೊಸತನಕ್ಕೆ ನಾಂದಿ. ಯುಗಾದಿ ಸಂಸ್ಕೃತ ಶಬ್ದವಾಗಿದೆ. ಯುಗ+ ಆದಿ= ಯುಗಾದಿ . ಯುಗವೆಂದರೆ ಅವಧಿ, ಆದಿ ಎಂದರೆ ಪ್ರಾರಂಭ. ಹೊಸ ಸಂವತ್ಸರದ ಆರಂಭ.
ಪ್ರಕೃತಿಯಲ್ಲಿ ಈ ಪರ್ವ ಕಾಲದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಗಿಡಮರಗಳ ಎಲೆಗಳು ಉದುರಿ ಹೊಸ ಚಿಗುರು ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿ ಹಲವು ರೀತಿಯ ವ್ಯತ್ಯಾಸ ಗೋಚರವಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಶಾಖ ಹೆಚ್ಚಾಗಿ ಇರುವುದರಿಂದ ಅಸಾಧ್ಯವಾದ ಸೆಖೆಯ ಅನುಭವ .
ಯುಗಾದಿಯ ಸುರ್ಯೋದಯವು ಹೊಸ ವರ್ಷದ ಪ್ರಾರಂಭವಾಗಿದೆ. ಯಾಕೆಂದರೆ ಭೂಮಿಯು ಸೂರ್ಯನ ಸುತ್ತ ಸುತ್ತುವಿಕೆಯು ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಗೆ ಒಮ್ಮೆ ಪೂರ್ಣಗೊಂಡಿರುತ್ತದೆ.ಹೊಸ ಕನಸುಗಳು , ನಿರೀಕ್ಷೆಗಳು , ಎಲ್ಲವೂ ಚಿಗುರುವ ಸಂಭ್ರಮ. ಮನೆ ಮನದಲ್ಲಿ ನವಚೈತನ್ಯ ತುಂಬುವ ಕಾಲ. ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ.
ಈ ಹಬ್ಬ ನಮ್ಮ ನಿತ್ಯ ಜೀವನಕ್ಕೆ ಅಗತ್ಯವಾದ ಚೈತನ್ಯ ವನ್ನು ತುಂಬುತ್ತದೆ. ಈ ಸಂದರ್ಭದಲ್ಲಿನ ಎಲ್ಲಾ ಆಚರಣೆಗಳೂ ಮಹತ್ವದ್ದೇ ಆಗಿದೆ. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಮಹತ್ವವಿದೆ. ಆದಿನ ನಾವು ಪ್ರಾತಃಕಾಲದಲ್ಲಿ ಮಾಡುವ ಎಣ್ಣೆ ಮೈಗೆ ಹಚ್ಚಿ ಮಾಡುವ ಅಭ್ಯಂಗವಿರಲಿ, ಆದಿನ ವಿಶೇಷವಾದ ಬೇವು ಬೆಲ್ಲದ ಸೇವನೆಯಾಗಿರಲಿ, ಪಂಚಾಂಗ ಶ್ರವಣವಿರಲಿ ಎಲ್ಲವಕ್ಕೂ ಅದರದ್ದೇ ಆದ ಮಹತ್ವವಿದೆ.