ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯು ಶೀಘ್ರದಲ್ಲೇ ನಡೆಯಲಿದೆ. ಮಾ.31 ರ ಮೊದಲು ಕ್ಷೇತ್ರಗಳ ವೈಜ್ಞಾನಿಕವಾಗಿ ಮರುವಿಂಗಡಣೆಗೆ ಸಭೆ ನಡೆಸಲಾಗುವುದು, ಕ್ಷೇತ್ರಗಳ ವಿಂಗಡಣೆಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಗುರುವಾರ ಬೆಂಗಳೂರಿನಲ್ಲಿ ಸರ್ವ ಪಕ್ಷಗಳ ಮುಖಂಡರ ಸಭೆ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಕಾರ್ಕಳ ಶಾಸಕ ಸುನೀಲ್‌ಕುಮಾರ್ ಈ ವಿಷಯ ಪ್ರಸ್ತಾಪಿಸಿ, ಮುಂದೆ ಜಿಪಂ, ತಾಪಂ ಚುನಾವಣೆ ನಡೆಯಲಿದೆ. ಆದರೆ ಇಲ್ಲಿ ರಾಜ್ಯ ಚುನಾವಣಾ ಆಯೋಗ ಮಾಡಿರುವ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಹಲವಾರು ವ್ಯತ್ಯಾಸಗಳಿವೆ, ಇದರಿಂದ ಅನ್ಯಾಯವಾಗುತ್ತದೆ ಎಂದು ಸುನಿಲ್ ಕುಮಾರ್ ಸರಕಾರದ ಗಮನ ಸೆಳೆದರು.ಇದಕ್ಕೆ ಹಲವು ಶಾಸಕರು ದ್ವನಿಗೂಡಿಸಿದರು, ಈಗಿನ ನಿಯಮಗಳ ಪ್ರಕಾರದ ಮಾರ್ಗಸೂಚಿಗಳು ಸರಿಯಿಲ್ಲ. ಇದರಿಂದ ಹಲವೆಡೆ ಜಿ.ಪಂ. ಕ್ಷೇತ್ರಗಳು ಹೆಚ್ಚಾಗುತ್ತವೆ. ತಾಲೂಕು ಪಂಚಾಯತ್ ಕ್ಷೇತ್ರಗಳು ಕಡಿಮೆಯಾಗುತ್ತವೆ. ಗೊಂದಲಗಳು ಹೆಚ್ಚಾಗುತ್ತವೆ. ಹಾಗಾಗಿ ಮಾರ್ಗಸೂಚಿಗಳ ಪರಿಷ್ಕರಣೆ ಅಗತ್ಯವಿದೆ ಎಂದು ಮನವಿ ಮಾಡಿದರು.
ಈ ಬಗ್ಗೆ ಮಾ.31 ರ ಮೊದಲು ಸಭೆ ನಡೆಸಿ ಬಳಿಕ ಚುನಾವಣಾ ಆಯೋಗಕ್ಕೆ ಕ್ಷೇತ್ರ ವಿಂಗಡಣೆಯನ್ನು ವೈಜ್ಞಾನಿಕವಾಗಿ ನಡೆಸಿ ಪರಿಷ್ಕರಣೆ ಮಾಡಲು ತಿಳಿಸಲಾಗುವುದು. ಯಾವುದೇ ಕಾರಣಕ್ಕೂ ಜಿಪಂ ತಾಪಂ ಚುನಾವಣೆ ಮುಂದೂಡುವುದಿಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಪಡೆಯುವಂತೆ ಸರಕಾರಕ್ಕೆ ಸೂಚಿಸಿದರು. ಆದರೆ, ಸ್ಥಾನಗಳ ಮೀಸಲಾತಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಸರಕಾರಕ್ಕೆ ಮನವಿ ಮಾಡಿದರು.