ಪುತ್ತೂರು : ಬಪ್ಪಳಿಗೆಯ ಅಂಬಿಕಾ ಬಾಲ ವಿದ್ಯಾಲಯದಲ್ಲಿ ನ.11 ರಂದು ಅಜ್ಜ-ಅಜ್ಜಿ ಮೊಮ್ಮಕ್ಕಳ ಸಮ್ಮಿಲನ ಕಾರ್ಯಕ್ರಮವು ಸಂಸ್ಥೆಯ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರೊಫೆಸರ್ ವಿ.ಬಿ ಅರ್ತಿಕಜೆ ,ಮಣ್ಣಿನಲ್ಲಿ ಬೀಜಗಳನ್ನು ಬಿತ್ತಿ ನೀರೆರೆವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮನೆಯೊಂದು ತನ್ನ ಅರ್ಥ ಕಂಡುಕೊಳ್ಳುವುದು, ಮಕ್ಕಳು ಮೊಮ್ಮಕ್ಕಳ ಜೊತೆಗೆ ಮನೆಯ ಹಿರಿಯರು ನೆಮ್ಮದಿಯಿಂದ ಬದುಕು ಸವೆಸಿದಾಗ ಮಾತ್ರಾ. ನಮ್ಮದೇಶ ಅಂತಹ ವಿಶಿಷ್ಟ ಸಂಬಂಧಗಳ ನೆಲೆವೀಡು. ನಮ್ಮ ಜೀವನಾನುಭವಗಳನ್ನು ಧಾರೆಯೆರೆದು ಮುಂದಿನ ಪೀಳಿಗೆ ಬದುಕು ಕಟ್ಟಿಕೊಳ್ಳುವಲ್ಲಿ ನೆರವಾಗೋಣ ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲಾ ವಾಚನಾಲಯಕ್ಕೆ ವಾಲ್ಮೀಕಿ ರಾಮಾಯಣ ಸಂಪುಟವನ್ನು ಕೊಡುಗೆಯಾಗಿ ಅವರು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಯಾವುದೇ ವೃದ್ಧಾಶ್ರಮ ಅನಾಥಾಶ್ರಮಗಳು ಇಲ್ಲದೆ ಇರುವ ನಾಡೊಂದು ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಸಂಚಾಲಕರು ಮುಖ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟಿನ ಖಜಾಂಜಿ ರಾಜಶ್ರೀ ನಟ್ಟೋಜ, ಮುಖ್ಯೋಪಾಧ್ಯಾಯಿನಿ ಸುಜನೀ ಬೋರ್ಕರ್, ಸಹ ಮುಖ್ಯೋಪಾಧ್ಯಾಯಿನಿ ಮಾಲತಿ ಡಿ ಭಟ್ ಉಪಸ್ಥಿತರಿದ್ದರು.
ಕೆ.ಜಿ ವಿಭಾಗದ ಶಿಕ್ಷಕಿ ಮಾಲತಿ ಶೆಟ್ಟಿ ಅತಿಥಿಗಳ ಪರಿಚಯಿಸಿದರು. ಎಲ್.ಕೆ.ಜಿ ಯ ಮೈತ್ರೇಯಿ ಪ್ರಾರ್ಥಿಸಿದರು. ಚಿರಂಜೀವಿ ಮಯೂರ್ ಮಯ್ಯ ಸ್ವಾಗತಿಸಿ, ಖ್ಯಾತಿ ವಂದಿಸಿದರು.
ಕಾರ್ಯಕ್ರಮಕ್ಕೆ ಸಂತಸದಿಂದ ಆಗಮಿಸಿದ ಪುಟಾಣಿಗಳು ಅವರೇ ತಯಾರಿಸಿದ ಗೂಡುದೀಪ , ಅಲಂಕಾರಿಕ ಹಣತೆಗಳಿಂದ ಶೃಂಗರಿಸಿದ ತುಂಬಿದ ಸಭೆಯಲ್ಲಿ ಅಜ್ಜ ಅಜ್ಜಿ ಮೊಮ್ಮಕ್ಕಳ ಸಮಾಗಮದ ವಿಶಿಷ್ಟವಾದ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿತ್ತು. ಸಮಾರಂಭದ ಕೊನೆಯಲ್ಲಿ ಆಜ್ಜ ಅಜ್ಜಿ ಮೊಮ್ಮಕ್ಕಳಿಗಾಗಿ ವಿವಿಧ ಆಟೋಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
Advertisement