ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಹಳದಿ ಎಲೆ ಬಾದಿತ ಪ್ರದೇಶಗಳ ವ್ಯಾಪ್ತಿ ಹಾಗು ತೀವ್ರತೆಗಳ ಅಂಕಿ ಅಂಶಗಳನ್ನು ನಿಖರವಾಗಿ ತಿಳಿಯಲು ಸಮಗ್ರ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಸಮೀಕ್ಷೆ ಆರಂಭಗೊಳ್ಳಲಿದೆ.
ಅಡಕೆ ಹಳದಿ ರೋಗದಿಂದ ತತ್ತರಿಸಿದ ರೈತರಿಗೆ ಪರಿಹಾರ ದೊರಕಿಸಬೇಕು ಎಂಬ ನಿಟ್ಟಿನಲ್ಲಿ ನವೆಂಬರ್ 2ರಂದು ಅರಂತೋಡಿನಲ್ಲಿ ಶಾಸಕ ಎಸ್.ಅಂಗಾರ ಉಪಸ್ಥಿತಿಯಲ್ಲಿ ದ.ಕ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಸೆಲ್ವಮಣಿ ನೇತೃತ್ವದಲ್ಲಿ ಹಳದಿ ಎಲೆ ರೋಗ ಬಾದಿತ ಪ್ರದೇಶಗಳ ರೈತರ ಸಭೆ ನಡೆದಿತ್ತು. ರೈತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಹಳದಿ ರೋಗ ಪೀಡಿತ ಪ್ರದೇಶಗಳ ಸಮಗ್ರ ಸಮೀಕ್ಷೆ ನಡೆಸಲು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಸಮೀಕ್ಷೆ ನಡೆಸಿ ಜಿಲ್ಲೆಯಲ್ಲಿ ಅಡಕೆ ಹಳದಿ ಎಲೆ ರೋಗ ಬಾದಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಯ ಬಗ್ಗೆ ನಿಖರ ಅಂಕಿ ಅಂಶಗಳನ್ನು ಪಡೆದು ರೈತರ ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಕಂದಾಯ, ಪಂಚಾಯತ್ ರಾಜ್ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳನ್ನೊಳಗೊಂಡ ಸಮೀಕ್ಷಾ ತಂಡವನ್ನು ರಚಿಸಲಾಗಿದೆ. ಹಳದಿ ಎಲೆ ರೋಗದಿಂದ ತತ್ತರಿಸಿದ ಸುಳ್ಯ ಮತ್ತು ಪುತ್ತೂರು ತಾಲೂಕಿನ ಆಯ್ದ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ನಿಗದಿತ ನಮೂನೆಯಲ್ಲಿ ಸಮೀಕ್ಷಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಸಮೀಕ್ಷೆ ಕೈಗೊಳ್ಳಬೇಕಾದ ಪ್ರದೇಶಗಳ ಪಟ್ಟಿಗೆ ಮತ್ತು ಸಮೀಕ್ಷೆ ನಡೆಸುವ ಅಧಿಕಾರಿಗಳ ಪಟ್ಟಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ.
15 ದಿನದಲ್ಲಿ ಸಮೀಕ್ಷೆ ಪೂರ್ತಿ ಮಾಡಲು ಸೂಚನೆ: ಡಿಸೆಂಬರ್ ತಿಂಗಳ ಮೂರನೇ ವಾರದಲ್ಲಿ ಸಮೀಕ್ಷೆ ನಡೆಸುವ ಅಧಿಕಾರಿಗಳಿಗೆ ತಜ್ಞರಿಂದ ತಾಂತ್ರಿಕ ಅಂಶಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಿಯೋಜಿತ ಅಧಿಕಾರಿಗಳು ಸಮೀಕ್ಷೆ ಆರಂಭಿಸಿ 15 ದಿನದಲ್ಲಿ ಸಮೀಕ್ಷೆ ಮುಕ್ತಾಯಗೊಳಿಸಿ ವರದಿಯನ್ನು ತೋಟಗಾರಿಕಾ ಉಪನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಇವರಿಗೆ ಸಲ್ಲಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ನೀಡಿದ್ದಾರೆ. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸಮೀಕ್ಷೆಯಲ್ಲಿನ ತಾಂತ್ರಿಕ ಅಂಶಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಲು ಸೂಚಿಸಲಾಗಿದೆ. ರೈತರ ಬೆಳೆ ದಾಖಲಾತಿ ಸಮೀಕ್ಷೆಯಲ್ಲಿ ದೊರಕಿರುವ ದತ್ತಾಂಶವನ್ನು ಸಮೀಕ್ಷಾ ಕಾರ್ಯ ನಡೆಸುವ ಅಧಿಕಾರಿಗಳಿಗೆ ಗ್ರಾಮಾವಾರು ಒದಗಿಸಲು ಜಿಲ್ಲಾ ಸಾಂಖ್ಯಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಮೀಕ್ಷಾ ವರದಿಯನ್ನು ನಿಗದಿತ ನಮೂನೆಯಲ್ಲಿ ಫಲಾನುಭವಿವಾರು ಸಲ್ಲಿಸಲು ತಿಳಿಸಲಾಗಿದೆ. ಸಮೀಕ್ಷಾ ವರದಿಗಳನ್ನು ಕ್ರೂಢೀಕರಿಸಿ ವಿಸ್ತೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಕ್ರಮ ವಹಿಸುವಂತೆ ತೋಟಗಾರಿಕಾ ಇಲಾಖಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.
ಯಾವ ಗ್ರಾಮದಲ್ಲಿ ಸಮೀಕ್ಷೆ: ಅಡಕೆ ಹಳದಿ ಎಲೆ ರೋಗಕ್ಕೆ ತುತ್ತಾದ ಸುಳ್ಯ ಮತ್ತು ಪುತ್ತೂರು ತಾಲೂಕಿನ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಸುಳ್ಯ ತಾಲೂಕಿನ ಹತ್ತು ಮತ್ತು ಪುತ್ತೂರು ತಾಲೂಕಿನ ಒಂದು ಗ್ರಾಮದಲ್ಲಿ ಸಮೀಕ್ಷಾ ಕಾರ್ಯ ನಡೆಯಲಿದೆ. ಸುಳ್ಯ ತಾಲೂಕಿನ ಸಂಪಾಜೆ, ಅತಂತೋಡು(ಅರಂತೋಡು ಮತ್ತು ತೊಡಿಕಾನ), ಆಲೆಟ್ಟಿ, ಕೊಡಿಯಾಲ, ಉಬರಡ್ಕ ಮಿತ್ತೂರು, ಮರ್ಕಂಜ, ಮಡಪ್ಪಾಡಿ, ಕೊಲ್ಲಮೊಗ್ರ(ಕೊಲ್ಲಮೊಗ್ರ ಮತ್ತು ಕಲ್ಮಕ್ಕಾರು), ನೆಲ್ಲೂರು ಕೆಮ್ರಾಜೆ, ಹರಿಹರ ಪಳ್ಳತ್ತಡ್ಕ ಮತ್ತು ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮದಲ್ಲಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು ಸಮೀಕ್ಷಾ ತಂಡವನ್ನು ರಚಿಸಲಾಗಿದೆ.
‘ಅಡಕೆ ಹಳದಿ ಎಲೆ ಬಾದಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಯ ಬಗ್ಗೆ ನಿಖರ ಅಂಕಿ ಅಂಶಗಳನ್ನು ಪಡೆದು ರೈತರ ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಅಡಕೆ ಹಳದಿ ರೋಗ ಇರುವ ಪ್ರದೇಶಗಳ ವಿಸ್ತೃತ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸಮೀಕ್ಷೆ ನಡೆಸಬೇಕಾದ ಪ್ರದೇಶಗಳ ಮತ್ತು ಸಮೀಕ್ಷೆ ನಡೆಸುವ ಅಧಿಕಾರಿಗಳ ಪಟ್ಟಿ ಸಿದ್ಧವಾಗಿದೆ. ಡಿಸೆಂಬರ್ ಕೊನೆಯ ವಾರ ಸಮೀಕ್ಷೆ ಆರಂಭಿಸಿ ಒಂದು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’
-ಡಾ.ಸೆಲ್ವಮಣಿ.ಆರ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದ.ಕ.ಜಿಲ್ಲಾ ಪಂಚಾಯತ್Advertisement