ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ. ಉತ್ತರ ಭಾರತದಲ್ಲೂ ಅಡಿಕೆ ದಾಸ್ತಾನು ಕೊರತೆ ಇದೆ. ಹೀಗಾಗಿ ಚಾಲಿ ಅಡಿಕೆ ಧಾರಣೆ ಸದ್ಯಕ್ಕೆ ಏರಿಕೆಯ ಹಾದಿಯಲ್ಲಿದೆ. 315 ರೂಪಾಯಿಗೆ ಹೊಸ ಅಡಿಕೆ ಹಾಗೂ 330 ರೂಪಾಯಿ ಹಳೆ ಅಡಿಕೆ ಖರೀದಿ ನಡೆಯುತ್ತಿದೆ. ಇದೇ ವೇಳೆ ಅಡಿಕೆ ಕಳ್ಳ ಸಾಗಾಟಕ್ಕೂ ಭಾರೀ ಪ್ರಯತ್ನ ನಡೆಯುತ್ತಿದೆ. ಅಸ್ಸಾಂನಲ್ಲಿ ಸಂಗ್ರಹವಾಗಿದ್ದ ಸುಮಾರು 1550 ಚೀಲ ಅಡಿಕೆಯನ್ನು ಅಸ್ಸಾಂ ಅರೆಸೇನಾ ಪಡೆ ವಶಪಡಿಸಿದೆ. ಹೀಗಾಗಿ ಅಡಿಕೆ ಕಳ್ಳ ಸಾಗಾಟಕ್ಕೆ ಸದ್ಯ ತಡೆಯಾಗಿದೆ. ದೇಶದ ಅಡಿಕೆ ಬೆಳೆಗಾರರಿಗೆ ಖುಷಿಯ ವಾತಾವರಣ ಸದ್ಯಕ್ಕೆ ಮುಂದುವರಿಯಲಿದೆ.
Advertisement
ಅಡಿಕೆ ಮಾರುಕಟ್ಟೆ ದಾಖಲೆಯತ್ತ ಸಾಗುತ್ತಿದೆ. ಇದೇ ವೇಳೆ ಅಡಿಕೆ ಕಳ್ಳ ಸಾಗಾಣಿಕೆಗೆ ಶತಪ್ರಯತ್ನ ನಡೆಯುತ್ತಿದೆ. ಇಂತಹ ಪ್ರಯತ್ನವೊಂದಕ್ಕೆ ಈಗ ಬ್ರೇಕ್ ಬಿದ್ದಿದೆ. ನಾಗಾಲ್ಯಾಂಡ್ ಮೂಲಕ ದೇಶದೊಳಗೆ ಬಂದು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 45.3 ಲಕ್ಷ ರೂ. ಅಡಿಕೆಯನ್ನು ನಾಗಾಲ್ಯಾಂಡ್ ನ ಘಾಸ್ಪಾನಿಯಲ್ಲಿ ಅಸ್ಸಾಂ ಅರೆಸೇನಾ ಪಡೆ ವಶಪಡಿಸಿಕೊಂಡಿತ್ತು.
ನಂತರ ತನಿಖೆ ನಡೆಸಿದಾಗ ಅದಾಗಲೇ ಅಸ್ಸಾಂ ಸೇರಿಂದರೆ ನಾಗಾಲ್ಯಾಂಡ್ ನ ದಿಂಪನೂರ್ ಪ್ರದೇಶದಲ್ಲಿದ್ದ ಒಟ್ಟು 1550 ಬ್ಯಾಗ್ ಅಡಿಕೆಯನ್ನು ವಶಪಡಸಿಕೊಂಡಿದೆ. ಇದರ ಒಟ್ಟು ಮೌಲ್ಯ ಸುಮಾರು 3 ಕೋಟಿ ಎಂದು ಅಂದಾಜಿ್ಲಾಗಿದೆ. ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ದಿಮಾಪುರದ ಕಸ್ಟಮ್ ಸಹಾಯಕ ಆಯುಕ್ತರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಲಲನ್ ಕುಮಾರ್ ಎಂಬವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದರ ಜೊತೆಗೆ ಮುಂಬೈನ ಆಹಾರ ಸುರಕ್ಷತಾ ಅಧಿಕಾರಿಗಳ ವಿಜಿಲೆನ್ಸ್ ತಂಡವು ಎರಡು ಸ್ಥಳಗಳಲ್ಲಿ ದಾಳಿ ನಡೆಸಿ ಕಳಪೆ ಗುಣಮಟ್ಟದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ನಾಗಪುರದ ಕೆಲವು ವ್ಯಾಪಾರಿಗಳು ಕಳಪೆ ಗುಣಮಟ್ಟದ ಅಡಿಕೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಮೇಲೆ ದಾಲಿ ನಡೆಸಿದ ಅಧಿಕಾರಿಗಳ ತಂಡ 39 ಸಾವಿರ ಕೆಜಿಯ ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಪಡಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ಅಡಿಕೆ ಧಾರಣೆ 300-315 ರೂಪಾಯಿಗಿಂತ ಹೆಚ್ಚಾದರೆ ಕಳ್ಳಸಾಗಾಣಿಕೆಯ ಮೂಲಕವಾದರೂ ಅಡಿಕೆ ಆಮದು ಮಾಡಿಕೊಳ್ಳುವ ದಾರಿಯನ್ನು ಪ್ರತೀ ಬಾರಿ ಅಡಿಕೆ ಖರೀದಿದಾರರು ಕಂಡುಕೊಳ್ಳುತ್ತಾರೆ. ಆದರೆ ಈ ಬಾರಿ ಸದ್ಯಕ್ಕೆ ಕೊರೊನಾ ಕಾರಣದಿಂದ ಎಲ್ಲಾ ರಾಜ್ಯಗಳ ಗಡಿಭಾಗದಲ್ಲಿ ಚೆಕ್ ಪಾಯಿಂಟ್ ಗಳಲ್ಲಿ ತಪಾಸಣೆ ಇದೆ. ಈಗ ಚೀನಾದ ವಿವಾದದ ಕಾರಣದಿಂದ ದೇಶದ ಎಲ್ಲಾ ಗಡಿಭಾಗಗಳಲ್ಲೂ ವಿಪರೀತ ತಪಾಸಣೆ ಇರುವುದರಿಂದ ಕಳ್ಳ ದಾರಿಯ, ತಲೆಹೊರೆಯ ಮೂಲಕವೂ ದೇಶದ ಗಡಿ ದಾಟಿ ಅಡಿಕೆ ಬರುವುದು ಕಷ್ಟವಾಗಿದೆ. ಹೀಗಾಗಿ ಧಾರಣೆ ಏರಿಕೆಯ ಓಟ ಸದ್ಯಕ್ಕೆ ಹೀಗೇ ಮುಂದುವರಿಯಲಿದೆ.
ರಾಜ್ಯದಲ್ಲೂ ಅಡಿಕೆಯನ್ನು ತೆರಿಗೆ ತಪ್ಪಿಸಿ, ಬಿಲ್ ರಹಿತವಾಗಿ ಸಾಗಾಟಕ್ಕೆ ಸಾಧ್ಯವಾಗುತ್ತಿಲ್ಲ. ತೆರಿಗೆ ಇಲಾಖೆ ಆಗಾಗ ಧಾಳಿ ನಡೆಸುತ್ತಿದೆ. ಈಗಾಗಲೇ ಸುಮಾರು 4 ಕೊಟಿಗೂ ಅಧಿಕ ತೆರಿಗೆ ವಂಚನೆ ಪ್ರಕರಣ ಪತ್ತೆ ಮಾಡಿದೆ. ಎರಡು ದಿನಗಳ ಹಿಂದೆ ಶುಂಠಿ ಸಾಗಾಣಿಕೆಯ ಹೆಸರಿನಲ್ಲಿ 9 ಟನ್ ಅಡಿಕೆ ಪುಡಿಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿದ ವಾಣಿಜ್ಯ ತೆರಿಗೆ ಇಲಾಖೆ 9 ಲಕ್ಷ ರೂಪಾಯಿ ದಂಡ ವಿಧಿಸಿದೆ. ಬಂಟ್ವಾಳದಲ್ಲಿ ಎರಡು ದಿನಗಳ ಹಿಂದೆ 3.12 ಲಕ್ಷ ರೂಪಾಯಿ ಮೌಲ್ಯದ ದಾಖಲೆ ರಹಿತ ಅಡಿಕೆ ಸಾಗಾಟ ಬೆಳಕಿಗೆ ಬಂದಿದೆ.
ಇದೆಲ್ಲಾ ಅಡಿಕೆ ಬೇಡಿಕೆಯನ್ನು ತಿಳಿಸುತ್ತಿದೆ. ಅದೂ ಚಾಲಿ ಅಡಿಕೆಯೇ ಈಗ ಹೆಚ್ಚು ಬೇಡಿಕೆ ಇರುವುದರಿಂದ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಮಾರುಕಟ್ಟೆಯಲ್ಲಿ ಅಡಿಕೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಅಂದಾಜು ಪ್ರಕಾರ ಶೇ. 40 ಕ್ಕಿಂತಲೂ ಹೆಚ್ಚು ಅಡಿಕೆ ಬೇಡಿಕೆ ಈಗ ಇದೆ.ಪ್ರತೀ ವರ್ಷ ಅಡಿಕೆ ದಾಸ್ತಾನು ಇರಿಸಿಕೊಳ್ಳುವ ಉತ್ತರ ಭಾರತದ ಅಡಿಕೆ ಖರೀದಿದಾರರಿಗೆ ಈ ಬಾರಿ ಶೇ.10 ರಷ್ಟೂ ದಾಸ್ತಾನು ಮಾಡಲು ಸಾಧ್ಯವಾಗಿಲ್ಲ.
ಹೀಗಾಗಿ ಅಡಿಕೆ ಬೆಳೆಗಾರರಿಗೆ ಸದ್ಯಕ್ಕಂತೂ ನೆಮ್ಮದಿಯ ದಿನ ಇದೆ. ಆದರೆ ತೋಟದ ಈಗ ನೋಡಿದರೆ ಅಡಿಕೆ ಹಿಂಗಾರ ಒಣಗುವಿಕೆ, ಎಳೆ ಎಡಿಕೆ ಬೀಳುವುದು ಮುಂದುವರಿದಿದೆ. ಆದರೆ ಈಗಂತೂ ಧಾರಣೆ ದಾಖಲೆಯತ್ತ ಸಾಗುತ್ತಿದೆ. ದೇಶದ ಒಳಗೆ ಬರುವ ಅಕ್ರಮ ಅಡಿಕೆಯನ್ನೂ ತಡೆಯಲಾಗುತ್ತಿದೆ. ಹೀಗಾಗಿ ಅಡಿಕೆ ಧಾರಣೆ ಇನ್ನಷ್ಟು ಏರಿಕೆಯಾಗುವುದು ನಿಶ್ಚಿತ. ಆದರೆ ಇದೇ ಧಾರಣೆ ಶಾಶ್ವತವೂ ಅಲ್ಲ ಎಂಬ ನಿರೀಕ್ಷೆಯೂ ಜೊತೆಯಲ್ಲೇ ಇರಬೇಕಿದೆ.
Advertisement