ಮಂಗಳೂರು: ಅಡಿಕೆ ಹಾನಿಕಾರಕವಲ್ಲ, ಅಡಿಕೆ ಮಾನವ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಬಗ್ಗೆ ಅಡಿಕೆ ಬೆಳೆಗಾರರ ಪ್ರದೇಶದ ಸಂಸದರುಗಳು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಹರ್ಷವರ್ಧನ್ ಅವರಿಗೆ ಮನವರಿಕೆ ಮಾಡಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದ ಸಂಸದರು ಆರೋಗ್ಯ ಸಚಿವರನ್ನು ಭೇಟಿ ಮಾಡಿದರು. ಜುಲೈ 12, 2019 ರಂದು ಅಡಿಕೆ ಬಳಕೆಯ ಕುರಿತು ಚುಕ್ಕೆ ರಹಿತ ಪ್ರಶ್ನೆಗೆ ಸರಕಾರವು ಅಡಿಕೆಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್ ನಲ್ಲಿರುವ ಅಫಿಡವಿಟ್ ನ್ನು ಉಲ್ಲೇಖ ಮಾಡಿ ನೀಡಿದ ಉತ್ತರದ ಬಗ್ಗೆ ಸಚಿವರನ್ನು ಭೇಟಿ ಮಾಡಿ ಅಡಿಕೆಯಿಂದ ಯಾವುದೇ ದುಷ್ಪರಿಣಾಮ ಇಲ್ಲ ಎಂಬುದರ ಬಗ್ಗೆ ಕೇಂದ್ರ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಯು ಅಡಿಕೆ ಮತ್ತು ಮಾನವ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವ ಯಾವುದೇ ಪುರಾವೆಗಳಿಲ್ಲ ಎಂದು ಹೇಳಲಾಗಿದೆ ಎಂಬುವುದು ಸಚಿವರಿಗೆ ಸಂಸದರು ತಿಳಿಸಿದರು.
ಈ ಬಗ್ಗೆ ಸ್ಪಂದಿಸಿದ ಸಚಿವರು ಅಡಿಕೆಯು ಆರೋಗ್ಯಕ್ಕೆ ಹಾನಿಕರ ಎಂದು ಹಿಂದಿನ ಯು.ಪಿ.ಎ ಸರಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವುದರಿಂದ ಈ ಅಫಿಡವಿಟ್ ನ್ನು ಹಿಂದಕ್ಕೆ ಪಡೆದುಕೊಳ್ಳುವ ಬಗ್ಗೆ ಸಚಿವರು ಭರವಸೆ ನೀಡಿದರು ಮತ್ತು ಸುಪ್ರೀಂ ಕೋರ್ಟ್ ನಿಂದ ಅಫಿಡವಿಟ್ ನ್ನು ಹಿಂದಕ್ಕೆ ಪಡೆಯಲು ಈಗಾಗಲೇ 2-3 ಬಾರಿ ಸಭೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಂಸದರ ನಿಯೋಗದಲ್ಲಿ ಉಡುಪಿ – ಚಿಕ್ಕಮಗಳೂರು ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ, ದಾವಣಗೆರೆ ಸಂಸದ ಹಾಗೂ ಮಾಜಿ ಸಚಿವ ಶ್ರೀ.ಜಿ.ಎಂ.ಸಿದ್ದೇಶ್ವರ್, ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಮುಂತಾದವರಿದ್ದರು.
ಕಳೆದ ಬಾರಿಯೂ ಇದೇ ಮಾದರಿಯಲ್ಲಿ ಮನವಿ ಸಲ್ಲಿಸಲಾಗಿತ್ತು. ಆರೋಗ್ಯ ಸಚಿವರನ್ನು ಎರಡು ಬಾರಿ ಭೇಟಿ ಮಾಡಿ ಮನವಿ ನೀಡಲಾಗಿತ್ತು. ಅದಾದ ನಂತರ ಯಾವುದೇ ಬೆಳವಣಿಗೆ ಆಗದೇ ಇರುವ ಕಾರಣದಿಂದ ಈ ಬಾರಿಯೂ ಅದೇ ಉತ್ತರವನ್ನು ಆರೋಗ್ಯ ಸಚಿವಾಲಯ ನೀಡಿದೆ. ಇಲ್ಲಿ ಈಗ ಆರೋಗ್ಯ ಸಚಿವರು ನೀಡಿದ ಹೇಳಿಕೆ ಕೂಡಾ ರಾಜಕೀಯದ ಹಿನ್ನೆಲೆಯಲ್ಲಿ ಕಾಣುತ್ತಿದೆ. ಏಕೆಂದರೆ ಯು ಪಿ ಎ ಸರಕಾರದ ಅವಧಿಯಲ್ಲಿ ಸುಪ್ರೀಂಕೋರ್ಟ್ ಗೆ ಅಫಿಡವಿತ್ ಸಲ್ಲಿಸಿರುವುದಾಗಿದ್ದರೆ ಆ ನಂತರ ಏಕೆ ಇದುವರೆಗೂ ಯಾವುದೇ ಪಕ್ಷಗಳು ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಒಂದು ಕಡೆಯಾದರೆ, ಎರಡೂ ಪಕ್ಷಗಳು ಅಡಿಕೆ ಬೆಳೆಗಾರ ಹಿತಕ್ಕಾಗಿ ಕೆಲಸ ಮಾಡುವುದಿಲ್ಲ, ಕೇವಲ ಅಡಿಕೆ ಹೆಸರಿನಲ್ಲಿ ಪಾದಯಾತ್ರೆ ಮಾಡಿ ಬೆಳೆಗಾರರನ್ನು ಸೆಳೆಯುವ ತಂತ್ರವೇ ಎಂದು ಕೃಷಿ ಸಂಘಟನೆಗಳು ಈಗ ಚರ್ಚೆ ಮಾಡುತ್ತಿವೆ.
ಏನೇ ಆಗಲಿ ರಾಜಕೀಯ ರಹಿತವಾಗಿ ಇಲ್ಲಿ ಕೆಲಸವಾಗಬೇಕು. ಅಡಿಕೆ ಬೆಳೆಗಾರರ ಹಿತ ಕಾಯುವ ಕೆಲಸವಾಗಬೇಕು.