ಪುತ್ತೂರು: ಅಡಿಕೆಯನ್ನು ಅನೇಕ ವರ್ಷಗಳಿಂದ ಉಪಯೋಗಿಸಲಾಗುತ್ತಿದೆ. ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ಸರಕಾರಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶಾಶ್ವತ ಪರಿಹಾರಗಳನ್ನು ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಸರಕಾರವನ್ನು ಒತ್ತಾಯಿಸಿದೆ.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಭೆಯು ಪುತ್ತೂರಿನ ಎಳ್ಮುಡಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಅಡಿಕೆ ಬೆಳೆಗಾರರ ವಿವಿಧ ಸಮಸ್ಯೆಗಳು ಹಾಗೂ ಬೆಳೆಗಾರರಿಗೆ ಅನುಕೂಲವಾಗುವ ವಿವಿಧ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಕಳೆದ ಕೆಲವು ವರ್ಷಗಳಿಂದ ಅಡಿಕೆ ಹಾನಿಕಾರಕ ಎಂಬ ಗುಮ್ಮನನ್ನು ಬಿಟ್ಟು ಬೆಳೆಗಾರರನ್ನು ಭಯಗೊಳಿಸಿ ಮಾರುಕಟ್ಟೆ ಮೇಲೆ ಪರಿಣಾಮ ಉಂಟು ಮಾಡಲಾಗುತ್ತಿದೆ. ಆದರೆ ಹಲವಾರು ವರ್ಷಗಳಿಂದ ವಿವಿದೆಡೆ ಅಡಿಕೆ ಬಳಕೆಯಾಗುತ್ತಿದೆ. ಪೂಜೆಯಿಂದ ತೊಡಗಿ ಬೀಡಾ ತಿನ್ನುವವರೆಗೆ ಉಪಯೋಗವಾಗುತ್ತಿದೆ. ಈಚೆಗೆ ಅಡಿಕೆಯ ವಿವಿಧ ಉತ್ಪನ್ನಗಳೂ ತಯಾರಾಗುತ್ತಿದೆ. ಚಹಾದಂತಹ ಉತ್ಪನ್ನಗಳಿಗೆ ವಿದೇಶದಲ್ಲೂ ಬೇಡಿಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಅಡಿಕೆ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಸಾಬೀತಾಗುತ್ತದೆ. ಆದ್ದರಿಂದ ಸರಕಾರಗಳು ಅಡಿಕೆ ಬೆಳೆಗಾರರ ಹಿತ ಕಾಯಲು ಮುಂದಾಗಬೇಕು ಎಂದು ಒತ್ತಾಯಿಸಲಾಯಿತು.
ಅಡಿಕೆ ಮಾರಾಟ ಮಾಡಿ ಬಿಲ್ ಪಡೆಯುವುದು ಸೂಕ್ತ :
ಅಡಿಕೆ ಬೆಳೆಗಾರರು ಅಡಿಕೆ ಮಾರಾಟ ಮಾಡಿ ಬಿಲ್ ಪಡೆಯುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಇತ್ತೀಚೆಗೆ ತೆರಿಗೆ ಪಾವತಿಸದೇ ಅಡಿಕೆ ಸಾಗಾಟವಾಗುತ್ತಿರುವುದರ ಬಗ್ಗೆ ತೆರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಇದು ಅಡಿಕೆ ಮಾರುಕಟ್ಟೆ ಹಾಗೂ ಧಾರಣೆ ಮೇಲೆ ಯಾವುದೇ ಪರಿಣಾಮ ಬೀರಲಾರದು. ಆದರೆ ಬೆಳೆಗಾರರ ಭವಿಷ್ಯದ ದೃಷ್ಟಿಯಿಂದ, ಮಾರುಕಟ್ಟೆ ಸ್ಥಿರೀಕರಣ ಹಾಗೂ ಸರಕಾರದಿಂದ ಬೆಳೆಗಾರರಿಗೆ ಹೆಚ್ಚಿನ ಸೌಲಭ್ಯ ದೊರೆಯುವ ದೃಷ್ಟಿಯಿಂದ ಬೆಳೆಗಾರರು ಎಲ್ಲೇ ಅಡಿಕೆ ಮಾರಾಟ ಮಾಡಿದರೂ ಬಿಲ್ ಪಡೆಯುವುದು ಸೂಕ್ತ ಎಂಬ ಸಲಹೆ ವ್ಯಕ್ತವಾಯಿತು.
ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವ ಹಾಗೂ ಅಡಿಕೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡುವ , ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು.
ವೇದಿಕೆಯಲ್ಲಿ ಸಂಘದ ಸಂಘದ ನಿಕಟಪೂರ್ವ ಅದ್ಯಕ್ಷ ಮಂಚಿ ಶ್ರೀನಿವಾಸ ಆಚಾರ್, ಉಪಾಧ್ಯಕ್ಷ ಎಂ ಜಿ ಸತ್ಯನಾರಾಯಣ, ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಉಪಸ್ಥಿತರಿದ್ದರು.
ಈ ಸಂದರ್ಭ ಸಂಘದ ಸದಸ್ಯರಾದ ಬಿ ಟಿ ನಾರಾಯಣ ಭಟ್, ಮಹಾಲಿಂಗ ಭಟ್ ವಾಟೆ, ದಯಾನಂದ ಕೋಟೆ, ಶಂಕರ ಸಾರಡ್ಕ, ರಾಮಕಿಶೋರ್ ಮಂಚಿ, ರಾಧಾಕೃಷ್ಣ ಕೋಟೆ, ಸಾಯಿಶೇಖರ್ ಕರಿಕಳ, ಎ ಪಿ ಸುಬ್ರಹ್ಮಣ್ಯ ಮರಿಕೆ, ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ಮೊದಲಾದವರು ಸಲಹೆ ಸೂಚನೆ ನೀಡಿದರು.
ಸಂಘದ ನಿಕಟಪೂರ್ವ ಅದ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಸ್ವಾಗತಿಸಿ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ವಂದಿಸಿದರು.