ಸುಳ್ಯ: ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸುಳ್ಯದಲ್ಲಿ ನಡೆದ ಅಡ್ಡಮತದಾನ ಬಿಜೆಪಿ ಹಾಗೂ ಸಹಕಾರ ಭಾರತಿ, ಸಂಘಪರಿವಾರಕ್ಕೆ ಬಾರೀ ತಲೆನೋವು ತಂದಿದೆ. ಸುಳ್ಯದಂತಹ ಪ್ರದೇಶದಲ್ಲಿ ಅಡ್ಡಮತದಾನ ನಡೆದಿರುವುದು ಪಕ್ಷಕ್ಕೆ ಹಾಗೂ ಸಂಘ ಪರಿವಾರಕ್ಕೆ ಮುಜುಗರ ತಂದಿತ್ತು. ಹೀಗಾಗಿ ಶಿಸ್ತು ಕ್ರಮ ಆಗಲೇಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಹಲವು ಬಾರಿ ಈ ಬಗ್ಗೆ ಪ್ರಯತ್ನ ನಡೆದರೂ ಆಗಿರಲಿಲ್ಲ. ಇದೀಗ ಆಟಿ ತಿಂಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಾ ? ಎಂಬುದನ್ನು ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡುತ್ತಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಮತದಾನ ಮಾಡಿರುವ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಅಧ್ಯಕ್ಷರು ಸೇರಿದಂತೆ ಎಲ್ಲಾ 17 ಮಂದಿ ರಾಜೀನಾಮೆ ನೀಡಬೇಕು ಎಂಬ ಸೂಚನೆ ಬಿಜೆಪಿ, ಸಂಘಪರಿವಾರ ನೀಡಿದರೂ ಜಾರಿಯಾಗಿಲ್ಲ. ಯಾರೊಬ್ಬರೂ ರಾಜೀನಾಮೆ ನೀಡಿಲ್ಲ. ಇದೀಗ ಆಟಿ ತಿಂಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಾ ? ಎಂಬ ಮತ್ತೊಂದು ಪ್ರಶ್ನೆ ಎದ್ದಿದೆ. ಹಲವು ಬಾರಿ ಮುಂದೂಡಿದ್ದ ಶಿಸ್ತು ಕ್ರಮ ಈ ಬಾರಿ ಆಗುತ್ತಾ ಎಂಬ ಪ್ರಶ್ನೆಗಳು ಕಾರ್ಯಕರ್ತರು ಕೇಳುತ್ತಾರೆ. ರಾಜೀನಾಮೆ ನೀಡದೇ ಇರುವವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತದೆ ಎಂದು ಹೇಳಿದರೂ ಸೂಚನೆ ಜಾರಿಯಾಗಿಲ್ಲ.ಇಲ್ಲಿ 17 ಮಂದಿಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಚಲಾವಣೆ ಮಾಡಿದವರಿಗೂ ಅಡ್ಡಮತದಾನ ಮಾಡಿದವರಿಗೂ ಒಂದೇ ಮಾನದಂಡವೇ ಅಥವಾ ಬೇರೆ ಕ್ರಮಗಳು ಇವೆಯೇ ಎಂದೂ ಕಾರ್ಯಕರ್ತರೊಳಗೆ ಈ ಹಿಂದೆ ಚರ್ಚೆಯಾಗಿತ್ತು. ಇದೀಗ ಮತ್ತೆ ಅಡ್ಡಮತದಾನ ಪ್ರಕ್ರಿಯೆ ಚರ್ಚೆಯಾಗುತ್ತಿದೆ.
ಇದಕ್ಕೂ ಮುನ್ನ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಮತದಾನ ಮಾಡಿದ ಎರಡು ಮಂದಿಯನ್ನು ಬಿಜೆಪಿಯು ಪಕ್ಷದ ಎಲ್ಲ ಹುದ್ದೆಗಳಿಂದ ಕೈ ಬಿಡಲಾಗಿದೆ ಎಂದು ಪ್ರಕಟಣೆ ನೀಡಲಾಗಿತ್ತು, ಆದರೆ ನಾವು ಬಿಜೆಪಿಯ ಯಾವುದೇ ಹುದ್ದೆಯಲ್ಲಿ ಇಲ್ಲ ಎನ್ನುವ ಮೂಲಕ ಮತ್ತೊಂದು ತಿರುವನ್ನು ನೀಡಿದ್ದರು.
ಇದೀಗ ಅಡ್ಡ ಮತದಾನ ಮಾಡಿದ ಹಾಗೂ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿದ ಎಲ್ಲರನ್ನೂ ಬಿಜೆಪಿಯು, ಸಂಘಪರಿವಾರವು ಪಕ್ಷದಿಂದ, ಸಂಘಟನೆಯಿಂದ ಉಚ್ಛಾಟನೆ ಯಾವಾಗ ಮಾಡುತ್ತದೆ, ಏನು ಕ್ರಮವಾಗುತ್ತದೆ ಎಂಬುದು ಕುತೂಹಲ ಹಾಗೂ ಪ್ರಶ್ನೆಯಾಗಿಯೇ ಉಳಿದಿದೆ.