” ಬದಲಾವಣೆ ಮಾಡುವ ಉದ್ದೇಶವಿಲ್ಲದ ವಿಷಯಗಳ ಬಗ್ಗೆ ದೂರಬೇಡಿ ಅಥವಾ ಟೀಕೆ ಟಿಪ್ಪಣಿಗಳನ್ನು ಮಾಡಿದರೆ ಪ್ರಯೋಜನ?” ಎಂದು ಮಾರಿಯೋ ಕಾಸ್ಟೆಲ್ಲಾನೋಸ್ ಎಂಬ ಚಿಂತಕ ಹೇಳಿದ್ದಾನೆ. ಆದರೆ ದೂರು ಕೊಟ್ಟು ಬಹುದೊಡ್ಡ ಬದಲಾವಣೆ ಹಾಗೂ ಕೆಲವೊಂದು ವಿಷಯಗಳು ಬಹಿರಂಗಗೊಂಡ ಬಗ್ಗೆ ಅಮೇರಿಕಾದಿಂದ ವರದಿಯಾಗಿದೆ. ಅದು 76 ವರ್ಷದ ಭಾರತೀಯ ಸಂಜಾತರಾದ , ಈಗ ಅಮೆರಿಕಾದಲ್ಲಿರುವ ಫಾರ್ಮಸ್ಯೂಟಿಕಲ್ ಕಂಪೆನಿಯೊಂದರ ಮುಖ್ಯಸ್ಥರ ಕುರಿತಾದದ್ದು. ಅವರ ಹೆಸರು ಜಾನ್ ನಾಥ್ ಕಪೂರ್.
ಅಮೆರಿಕಾದಲ್ಲಿನ ವೈದ್ಯರಿಗೆ ಲಂಚ ಕೊಟ್ಟು, ಕೊಡುಗೆಗಳ ಆಮಿಷ ನೀಡಿ, ಅಡ್ಡಿಕ್ಷನ್ ಅಥವಾ ಚಟವನ್ನು ಉಂಟುಮಾಡುವ ನೋವು ನಿವಾರಕ ಮಾತ್ರೆಗಳನ್ನು ಬರೆಯುವಂತೆ ಮಾಡಿದ ಆರೋಪವನ್ನು ಹೊಂದಿದ್ದಾರೆ. ಲಕ್ಷಗಟ್ಟಲೆ ಜನರನ್ನು ಬಲಿತೆಗೆದುಕೊಂಡ ಈ ಪ್ರಕರಣವನ್ನು ಅಮೇರಿಕಾ ರಾಷ್ಟ್ರೀಯ ಅಪಾಯ ಎಂದು ಗುರುತಿಸಿದೆ. ಅರಿಜೋನಾದಲ್ಲಿ ನ ಇನ್ಸಿಸ್ ಥೆರಪ್ಯೂಟಿಕ್ ಫಾರ್ಮಾಸ್ಯುಟಿಕಲ್ ಇದರ ಸ್ಥಾಪಕರು ಈ ಕಪೂರ್ ಎಂಬ ವ್ಯಕ್ತಿ. ಬಾಸ್ಟನ್ ನಗರದ ಇಲ್ಲಿನ ನ್ಯಾಯಾಧೀಶರು ಇದನ್ನು ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಿದ್ದಾರೆ. ಮಾತ್ರವಲ್ಲದೆ ಕಪೂರ್ ಎಷ್ಟು ಶ್ರೀಮಂತನೆಂದರೆ ಬಿಲಿಯಗಟ್ಟಲೆ ಸಂಪತ್ತಿನ ಒಡೆಯ.ಆ ಕಂಪೆನಿಯ ಇತರ ವ್ಯವಸ್ಥಾಪಕ ರೊಂದಿಗೆ ಈತನು ಅಪರಾಧಿಯೆಂದು ಗುರುತಿಸಲ್ಪಟ್ಟಿದ್ದಾನೆ.
ಅಷ್ಟೇ ಅಲ್ಲ, 20 ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸಲಿದ್ದಾರೆ. ಈ ಇಡೀ ತಂಡವು ಅಮೆರಿಕದಾದ್ಯಂತ ಲಂಚದ ಆಮಿಷ ನೀಡುವ ಯೋಜನೆಯನ್ನು ಬಹಳ ವ್ಯವಸ್ಥಿತವಾಗಿ ವರ್ಷಗಟ್ಟಲೆ ನಡೆಸಿಕೊಂಡು ಬಂದಿದೆ. 1990 ರಲ್ಲಿ ಈ ಕಂಪನಿ ಸ್ಥಾಪನೆಯಾಗಿತ್ತು. 2012 ಮತ್ತು 2015 ರ ನಡುವೆ ಈ ಕಂಪೆನಿಯು ವೈದ್ಯರುಗಳಿಗೆ ನಿರಂತರ ಹಣ ನೀಡುವುದರೊಂದಿಗೆ ತಮ್ಮ ಕಂಪೆನಿಯ ಓಪಿಯಾಯ್ಡ್ ನೋವಿನ ಮಾತ್ರೆಗಳನ್ನು ರೋಗಿಗಳಿಗೆ ನೀಡುವಂತೆ ತಂತ್ರಗಳ ಮೂಲಕ ,ಆಮಿಷ ನೀಡುವುದರ ಮೂಲಕ ಚಿತಾವಣೆಗೊಳಿಸುತ್ತಿದ್ದರು. ನಂತರ ಆರೋಗ್ಯ ವಿಮಾ ಕಂಪೆನಿಗಳಿಗೆ ಅತ್ಯಂತ ವೆಚ್ಚದಾಯಕವಾದ ಈ ಫೆಂಟಾನಿಲ್ ಮೂಲದ, ಆಧಾರಿತ ನೋವಿನ ಮಾತ್ರೆಗಳ ಖರ್ಚು ವೆಚ್ಚಗಳನ್ನು ಭರಿಸುವಂತೆ ಒತ್ತಡ ಹೇರುತ್ತಿದ್ದರು.
ವಿಚಾರಣೆ ಕೈಗೊಂಡ ನ್ಯಾಯಾಧೀಶರು ಕಂಡುಕೊಂಡ ಪ್ರಕಾರ , ಈ ಔಷಧಗಳನ್ನು ವೈದ್ಯರು ಎಗ್ಗಿಲ್ಲದೆ ಆಮಿಷಕ್ಕೆ ಒಳಗಾಗಿ ಬರೆಯುತ್ತಿದ್ದರು. ಸಬ್ಸಿಸ್ ಎಂಬ ಹೆಸರಿನ ಈ ಮಾತ್ರೆಯು 2012 ರಲ್ಲಿ ಅಮೆರಿಕಾದ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿಯಿಂದ ಅಧಿಕೃತವಾಗಿ ಅನುಮತಿಗೆ ಒಳಗಾಗಿತ್ತು. ಆದರೆ ಕೇವಲ ಕ್ಯಾನ್ಸರ್ ನಂತಹ ತೀವ್ರ ಸ್ವರೂಪದ ಕಾಯಿಲೆಗಳ ಸಂದರ್ಭದಲ್ಲಿ ಬರುವ ನೋವಿಗೆ ಮಾತ್ರ ಬಳಸುವಂತೆ ಅನುಮತಿ ನೀಡಲಾಗಿತ್ತು. ಹಾಗಿದ್ದರೂ, ವೈದ್ಯರು ಕ್ಯಾನ್ಸರ್ ನ ಹೊರತಾದ ಸಾಮಾನ್ಯವಾದ ನೋವಿನ ಸಂದರ್ಭಗಳಲ್ಲೂ ಇದನ್ನು ಬಳಸುವ ಪ್ರಕರಣಗಳು ಯಥೇಚ್ಛವಾಗಿ ಬೆಳಕಿಗೆ ಬಂದವು. ಇದರಿಂದಾಗಿ ಕಪೂರ್ ಕಂಪನಿಯ ವ್ಯಾಪಾರವು ವೇಗವನ್ನು ಪಡೆದುಕೊಂಡು ಅತ್ಯಂತ ಲಾಭದಾಯಕ ಉದ್ಯಮವಾಗಿ ಬೆಳೆಯಿತು.
ಅಮೆರಿಕಾದ ಅಧ್ಯಕ್ಷ ರಾದ ಡೊನಾಲ್ಡ್ ಟ್ರಂಪ್ 2017 ರಲ್ಲಿ ಈ ಮಾದಕವಾದ ನೋವಿನ ಮಾತ್ರೆಗಳ ಅಪಾಯದ ತುರ್ತು ಸಂದರ್ಭವನ್ನು ಘೋಷಿಸಿದ ಕೂಡಲೇ, ಈ ಕಪೂರ್ ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು. ಈ ಮಾತ್ರೆಗಳ ಅತಿ ಸೇವನೆಯ ದೆಸೆಯಿಂದಾಗಿ ವರ್ಷಕ್ಕೆ ಸಾವಿರಾರು ಜನ ಸತ್ತು ಹೋದ ಪ್ರಸಂಗಗಳು ಬೆಳಕಿಗೆ ಬಂದವು. ಇದೇ ಕಾರಣಕ್ಕಾಗಿ ಅಲ್ಲಿ ಇದನ್ನು ರಾಷ್ಟ್ರೀಯ ಅಪಾಯದ ತುರ್ತು ಸಂದರ್ಭ ಎಂದು ಪರಿಗಣಿಸಲಾಯಿತು. ಅಲ್ಲಿನ ರೋಗ ಪ್ರತಿಬಂಧಕ ಮತ್ತು ನಿಯಂತ್ರಕ ಕೇಂದ್ರಗಳ ವರದಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಮಾದಕ ನೋವಿನ ಮಾತ್ರೆಗಳ ಅತಿಯಾದ ಪ್ರಮಾಣದ ಸೇವನೆಯಿಂದ ನಾಲ್ಕು ಲಕ್ಷ ಜನ ಅಲ್ಲಿ ಮರಣವನ್ನು ಹೊಂದಿದ್ದಾರೆ. 2017 ರಲ್ಲಿ ಅದೇ ಮಾತ್ರೆಗಳ ದೆಸೆಯಿಂದ 48 ಸಾವಿರ ಜನ ಸಾವನ್ನಪ್ಪಿದ್ದಾರೆ.
ಈ ಪ್ರಕರಣದಲ್ಲಿ ಬಂದ ತೀರ್ಪು, “ನೋವಿನ ಮಾತ್ರೆಗಳ ಅನಧಿಕೃತ ಮಾರಾಟ ಹಾಗೂ ತತ್ಸಂಬಂಧಿ ಅಪರಾಧಗಳ ಕುರಿತಾದ, ಬಹುದೊಡ್ಡ ಕಂಪನಿಯ ಉನ್ನತಸ್ಥರದ ಮುಖ್ಯಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಿದ, ಪ್ರಥಮ ಹಾಗೂ ಯಶಸ್ವಿಯಾದ ನಿರ್ಣಾಯಕ ತೀರ್ಪು ” ಎಂದು ಅಮೇರಿಕಾದ ಅಟಾರ್ನಿ ಆಂಡ್ರೂ ಲೆಲ್ಲಿಂಗ್ ಹೇಳಿಕೆ ಕೊಟ್ಟಿದ್ದಾರೆ.
ನಾವು ಇಷ್ಟರವರೆಗೆ ನಮ್ಮ ದೇಶದಲ್ಲಿ ಮಾತ್ರ ಇಂತಹ ಪ್ರಕರಣಗಳನ್ನು ಕೇಳಿ ಬಲ್ಲೆವು. ಆದರೆ ಅಮೇರಿಕಾದಂತಹ, ಔಷಧ ಹಾಗೂ ವೈದ್ಯಕೀಯ ಕಾನೂನುಗಳು ಕಟ್ಟು ನಿಟ್ಟಾಗಿ ರುವ ದೇಶದಲ್ಲೂ ಇಂತಹ ಅಪರಾಧ ವ್ಯಾಪಕವಾಗಿ ನಡೆದಿರುವುದು ಆಶ್ಚರ್ಯವನ್ನು ತರುತ್ತದೆ. ಆದರೆ ಇದನ್ನು ಗುರುತಿಸಿದ ತಕ್ಷಣ ಅಮೇರಿಕಾದ ಅಧ್ಯಕ್ಷರು ಅದನ್ನು ಸರಿಪಡಿಸುವುದಕ್ಕೆ ಹಾಗೂ ಅಪರಾಧಿಗಳನ್ನು ತನಿಖೆಗೆ ಒಳಪಡಿಸುವುದಕ್ಕೆ ಆದೇಶಿಸಿದ್ದು ಅಲ್ಲಿನ ಕಾನೂನು ವ್ಯವಸ್ಥೆಯ ಬಿಗಿಯನ್ನು ವಿಶದಪಡಿಸುತ್ತದೆ.
ಜೊತೆಗೆ, ನಮ್ಮ ದೇಶದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿಯಿಂದ ಇಂಥ ಒಂದು ಅಪರಾಧ ನಡೆದಿರುವುದು ಮತ್ತು ಮೂಲಕ ನಮ್ಮ ದೇಶದ ಘನತೆಗೆ ಕಳಂಕ ತಂದಿರುವುದು ದುಃಖವನ್ನೂ ತರುತ್ತದೆ. ಅಷ್ಟೇ ಅಲ್ಲ, ಒಂದು ಔಷಧ ದುರ್ಬಳಕೆ ಹಾಗೂ ಅತಿಬಳಕೆ ಆದಾಗ ಎಷ್ಟರ ಮಟ್ಟಿಗೆ ಇಡೀ ಜನಾಂಗಕ್ಕೆ ಮಾರಕವಾಗಬಹುದು ಎಂಬ ಪ್ರಾಥಮಿಕ ಪಾಠವನ್ನೂ ಹೇಳುತ್ತದೆ. ಭಾರತದಲ್ಲಿ ಕಂಡುಬರುವ ಕಿಡ್ನಿ ವೈಫಲ್ಯಗಳ ಪ್ರಕರಣಗಳನ್ನು ರಾಷ್ಟ್ರದಾದ್ಯಂತ ಅಧ್ಯಯನಕ್ಕೆ ಒಳಪಡಿಸಿದರೆ ನೋವಿನ ಮಾತ್ರೆಗಳ ಅತಿಬಳಕೆಯ ವಿಕೃತ ಲೋಕ ತೆರೆದುಕೊಳ್ಳಬಹುದೋ ಏನೋ……