* ಸ್ಪೆಷಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ
ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರಾಜಿನಾಮೆ ಬೆನ್ನಲ್ಲೇ ಸುಳ್ಯಕ್ಕೆ ಇದ್ದ ಕೆಪಿಸಿಸಿ ಕಾರ್ಯದರ್ಶಿ ಹುದ್ದೆಗಳು ಕೂಡ ನಷ್ಟವಾಗಿದೆ.
ಲೋಕಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನೂ ವಿಸರ್ಜಿಸಲಾಗಿದೆ. ಈ ಹಿನ್ನಲೆಯಲ್ಲಿ ಸುಳ್ಯಕ್ಕೆ ಇದ್ದ ಮೂರು ಕೆಪಿಸಿಸಿ ಕಾರ್ಯದರ್ಶಿ ಹುದ್ದೆಗಳು ನಷ್ಟವಾಗಲಿದೆ. ಸುಳ್ಯದ ಹಿರಿಯ ಮುಖಂಡರಾದ ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ಟಿ.ಎಂ.ಶಹೀದ್ ಕೆಪಿಸಿಸಿ ಕಾರ್ಯದರ್ಶಿಗಳಾಗಿದ್ದರು.
ಲೋಕಸಭೆ, ನಗರ ಪಂಚಾಯತ್ ಚುನಾವಣೆಯ ಸೋಲಿನ ಬೆನ್ನಲ್ಲೇ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ವಿದೇಶ ಪ್ರಯಾಣದ ಕಾರಣ ನೀಡಿ ಅವರು ರಾಜಿನಾಮೆ ನೀಡಿದ್ದರು. ಆದರೆ ಪಕ್ಷದೊಳಗಿನ ಭಿನ್ನಮತ ರಾಜಿನಾಮೆಗೆ ಕಾರಣವಾಗಿತ್ತು ಎಂದು ಹೇಳಲಾಗಿತ್ತು. ಇದಾದ ಕೆಲ ದಿನಗಳಲ್ಲಿಯೇ ಕಾಂಗ್ರೆಸ್ ರಾಜ್ಯ ನಾಯಕರ ಎದುರಿನಲ್ಲೇ ಸಭೆಯಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟಗೊಂಡಿತ್ತು. ನಾಯಕರ ಮಧ್ಯೆ ಎರಡು ವರ್ಷಗಳಿಂದ ಇದ್ದ ಶೀತಲ ಸಮರ ಒಮ್ಮೆಲೇ ಸ್ಪೋಟಗೊಂಡು ಹೊರ ಬಂದಿತ್ತು. ಎರಡು ವರ್ಷಗಳ ಹಿಂದೆ ಜಯಪ್ರಕಾಶ್ ರೈ ಅವರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಮಾಡಿದಾಗ ದೊಡ್ಡ ಮಟ್ಟದ ಭಿನ್ನಮತ ಮತ್ತು ವಿರೋಧ ಉಂಟಾಗಿತ್ತು. ಇಲ್ಲಿನ ಪ್ರಬಲ ಸಮುದಾಯವನ್ನು ಕಡೆಗಣಸಲಾಗಿದೆ ಎಂದು ಕೆಲವು ನಾಯಕರು ಪ್ರತ್ಯೇಕ ಸಭೆ ಸೇರಿ ಅಸಮಾಧಾನವನ್ನು ಸಾರ್ವಜನಿಕವಾಗಿ ಹೊರ ಹಾಕಿದ್ದರು. ಈ ಹಿನ್ನಲೆಯಲ್ಲಿ ಹೈಕಮಾಂಡ್ ಮಧ್ಯ ಪ್ರವೃಶಿಸಿ ಅವರನ್ನು ಸಮಾಧಾನಪಡಿಸಲು ಇಲ್ಲಿನ ಪ್ರಮುಖ ನಾಯಕರಿಗೆ ಕೆಪಿಸಿಸಿಯಲ್ಲಿ ಉನ್ನತ ಹುದ್ದೆ ನೀಡಲಾಗಿತ್ತು. ಇದೀಗ ಅಧ್ಯಕ್ಷರು ರಾಜಿನಾಮೆ ನೀಡಿದ ಬೆನ್ನಲ್ಲೇ ಸುಳ್ಯಕ್ಕಿದ್ದ ಕೆಪಿಸಿಸಿ ಕಾರ್ಯದರ್ಶಿ ಹುದ್ದೆಗಳು ನಷ್ಟವಾಗುತ್ತಿರುವುದು ಕಾಕತಾಳಿಯ ಎಂದೇ ಹೇಳಬೇಕಾಗಿದೆ.
ಎರಡು ವರ್ಷಗಳ ಅವಧಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳಾಗಿ ಉತ್ತಮ ಕೆಲಸ ಮಾಡಿದ್ದೇವೆ. ಮುಂದೆ ನಡೆಯುವ ಹೊಸ ಸಮಿತಿಯಲ್ಲಿಯೂ ಸುಳ್ಯದವರಿಗೆ ಸ್ಥಾನಗಳು ದೊರೆಯುವ ನಿರೀಕ್ಷೆ ಇದೆ ಎಂದು ಎಂ.ವೆಂಕಪ್ಪ ಗೌಡ ಪ್ರತಿಕ್ರಿಯಸಿದ್ದಾರೆ.
ವಿಸರ್ಜನೆ ಯಾಕೆ.?
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೊರತುಪಡಿಸಿ ಸಮಿತಿಯ ಉಳಿದ ಎಲ್ಲಾ ಹುದ್ದೆಗಳನ್ನೂ ವಿಸರ್ಜನೆ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಿಸಿದ್ದಾರೆ.
ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧ್ಯವಾಗದ ಹಿನ್ನಲೆಯಲ್ಲಿ ಮತ್ತು ಕೆಲವೊಂದು ಆಂತರಿಕ ಕಲಹ ಕೆಪಿಸಿಸಿ ವಿಸರ್ಜನೆಗೆ ಕಾರಣವಾಯಿತು ಎಂದು ಹೇಳಲಾಗುತಿದೆ.