ಸುಬ್ರಹ್ಮಣ್ಯ: ಅರಣ್ಯದಿಂದ ಮರ ಕಳವು ಆಗಿರುವ ಬಗ್ಗೆ ಅಮಾಯಕ ವ್ಯಕ್ತಿಯ ಮೇಲೆ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬಂದಿಗಳು ಹಲ್ಲೆ ನಡೆಸಿರುವ ಬಗ್ಗೆ ಇದೀಗ ತೀವ್ರ ಚರ್ಚೆಯಾಗುತ್ತಿದೆ. ಹಲ್ಲೆಯಿಂದ ಗಾಯಗೊಳಗಾಗಿರುವ ವ್ಯಕ್ತಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ನೀತಿ ತಂಡವು ಈ ಘಟನೆಯನ್ನು ಖಂಡಿಸಿದ್ದು ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದೆ.
ಸುಬ್ರಹ್ಮಣ್ಯ ಅರಣ್ಯ ವಿಭಾಗದ ಭಾಗಿಮಲೆ ಮೀಸಲು ಅರಣ್ಯದಿಂದ ಹೆಬ್ಬಲಸು ಮರ ಕಳವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಲೋಕೇಶ್ ಎಂಬವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು 25 ಸಾವಿರ ರಶೀದಿ ಸಹಿತ ದಂಡ ಪಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಲೋಕೇಶ್ ಅಮಾಯಕನಾಗಿದ್ದು ಈ ಪ್ರಕರಣದಲ್ಲಿ ಮರ ಕಳ್ಳತನದಲ್ಲಿ ಭಾಗಿಯಾಗಿರಲಿಲ್ಲ ಎಂದು ಈಗ ಹೇಳಲಾಗಿದೆ. ಅರಣ್ಯದಲ್ಲಿ ಯಾರೋ ಕದ್ದುಕೊಂಡು ಹೋದ ಪ್ರಕರಣದಲ್ಲಿ ಲೋಕೇಶ ಅವರೇ ಕದ್ದಿದ್ದಾರೆ ಎಂದು ಹೇಳುವುದ ಸರಿಯಲ್ಲ ಎಂಬ ವಾದವಾದರೆ ಅರಣ್ಯ ಇಲಾಖೆಯ ಸಿಬಂದಿಗಳು ಹಲ್ಲೆ ನಡೆಸಿದ್ದೂ ಅಲ್ಲದೆ ಖಾಲಿ ಪೇಪರಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಇದೂ ಅಲ್ಲದೆ ಯಾವುದೇ ಪ್ರಕರಣ ದಾಖಲಿಸದೆ 25 ಸಾವಿರ ದಂಡ ಯಾವ ಕಾರಣಕ್ಕೆ ಎಂಬುದು ಪ್ರಶ್ನೆಯಾಗಿದೆ. ಇದೀಗ ಹಲ್ಲೆಗೊಳಗಾಗಿರುವ ಲೋಕೇಶ್ ಅವರಿಗೆ ಗಾಯವಾಗಿದ್ದು ಮೂತ್ರ ಕೋಶದ ಮೇಲೆ ಸಮಸ್ಯೆಯಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.ನೀತಿ ತಂಡವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.
ಇದೇ ವೇಳೆ ಅರಣ್ಯ ಇಲಾಖೆಯು ಹಲ್ಲೆ ಆರೋಪವನ್ನು ತಳ್ಳಿ ಹಾಕಿದೆ. ಸಾಕ್ಷಿ ಆಧರಿಸಿಯೇ ಲೋಕೇಶ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ , ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.