ಸುಳ್ಯ: ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕ ಇಲ್ಲಿನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ.25ರಿಂದ ಜ. 27ರ ತನಕ ಹಾಗೂ ಅಯ್ಯನಕಟ್ಟೆ ಜಾತ್ರೆಯು ಜ. 27ರಿಂದ 30ರ ತನಕ ಜರಗಲಿದೆ ಎಂದು ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿಜಿಎಸ್ಎನ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ. 26ರಂದು ತಂಟೆಪ್ಪಾಡಿಯಲ್ಲಿ ಪೂ.10.48ಕ್ಕೆ ನಾಗಪ್ರತಿಷ್ಠೆ -ಶ್ರೀ ಶಿರಾಡಿ ದೈವ ಪ್ರತಿಷ್ಠಾ ಕಾರ್ಯಕ್ರಮ, ಕಲಶಾಭಿಷೇಕ ನಡೆಯಲಿದೆ. ಮೂರುಕಲ್ಲಡ್ಕದಲ್ಲಿ ಪೂ. 10.48ಕ್ಕೆ ನಾಗಪ್ರತಿಷ್ಠೆ ನಡೆಯಲಿದೆ. 27ರಂದು ಮೂರುಕಲ್ಲಡ್ಕದಲ್ಲಿ ಪೂ. 9.50ಕ್ಕೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಕಾರ್ಯಕ್ರಮ, ಕಲ್ಲಮಾಡದ ಶುದ್ಧಿ ಕಲಶಾಭಿಷೇಕ ಜರಗಲಿದೆ.
27 ರಿಂದ 30ರವರೆಗೆ ಅಯ್ಯನಕಟ್ಟೆ ಜಾತ್ರೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು, ಉಳ್ಳಾಕುಲು ಶ್ರೀಮುಡಿ ದೈವಗಳ ನೇಮ, ಶಿರಾಡಿ, ಧೂಮಾವತಿ ಹಾಗು ಕೊಡಮಣಿತ್ತಾಯ ದೈವಗಳ ನೇಮ ಜರುಗಲಿದೆ. ಜ. 26 ಮತ್ತು 27ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಎ.ಎಂ. ಸುಧಾಕರ ರೈ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎನ್.ವಿಶ್ವನಾಥ ರೈ ಕಳಂಜ, ಕಾರ್ಯಾಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಅಧ್ಯಕ್ಷ ಮಾಧವ ಗೌಡ.ಕೆ. ಅಯ್ಯನಕಟ್ಟೆ, ಉಪಾಧ್ಯಕ್ಷ ರುಕ್ಮಯ್ಯ ಗೌಡ ಕಳಂಜ ಉಪಸ್ಥಿತರಿದ್ದರು.