ಸುಳ್ಯ: ಅರೆಭಾಷೆಯ ಜೊತೆಗೆ ನಾಡಿನಾದ್ಯಂತ ಪಸರಿಸಬೇಕು. ಅದರ ಜೊತೆಗೆ ಅರೆಭಾಷೆ ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಯಾಗಬೇಕು. ಈ ನಿಟ್ಟಿನಲ್ಲಿನ ಯೋಜನೆ ಹಾಗೂ ಯೋಚನೆ ಹಾಕಿಕೊಳ್ಳಲಾಗುವುದು ಎಂದು ಅರೆಭಾಷೆ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಸುಳ್ಯನ್ಯೂಸ್.ಕಾಂ” ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾಷೆ ಹಾಗೂ ಸಂಸ್ಕೃತಿ ನಾಡಿನಾದ್ಯಂತ ಬೆಳೆಯಲು ನಾಟಕ ಸೇರಿದಂತೆ ಇತರ ಮಾದ್ಯಮಗಳ ಅಗತ್ಯವೂ ಇದೆ. ಇದರ ಜೊತೆಗೆ ನಗರ ಪ್ರದೇಶದಲ್ಲಿ ಇರುವ ಅರೆಭಾಷೆದ ಸಮುದಾಯದ ಮಂದಿಯ ಮಕ್ಕಳು ಅರೆಭಾಷೆ ಮಾತನಾಡುವಂತೆ ಆಗಬೇಕು. ಇದಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಚನೆ ಇದೆ ಎಂದರು.
ಹಿರಿಯರ ಮಾರ್ಗದರ್ಶನ, ಸಹಕಾರದಲ್ಲಿ ಯುವಕರನ್ನು ಜೊತೆಸೇರಿಸಿ ಸಂಘಟನೆ ಮಾಡುವುದಾಗಿ ಹೇಳಿದ ಲಕ್ಷ್ಮೀನಾರಾಯಣ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸ್ಥಾನ ನಿರೀಕ್ಷೆ ಮಾಡಿರಲಿಲ್ಲ. ಇದಕ್ಕಾಗಿ ಯಾವುದೇ ಪ್ರಯತ್ನವೂ ಮಾಡಲಿಲ್ಲ. ಆದರೆ ಗುರುತಿಸಿ ಈ ಸ್ಥಾನ ನೀಡಿರುವುದಕ್ಕೆ ಎಲ್ಲಾ ಹಿರಿಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಅಕಾಡೆಮಿ ಕೆಲಸ ಹೊಸದು. ಆದರೆ ಅನುದಾನಗಳನ್ನು ತರಿಸಿ ಕಾರ್ಯಕ್ರಮ ಮಾಡಿರುತ್ತೇವೆ. ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಕೆಲಸ ಮಾಡಿದ ಅನುಭವ ಇದೆ. ಹೀಗಾಗಿ ಅಕಾಡೆಮಿಗಳ ಪರಿಚಯ ಇದೆ ಎನ್ನುತ್ತಾರೆ.
ಅಕಾಡೆಮಿಗಳು ಒಂದು ಉದ್ದೇಶ ಹೊಂದಿರುತ್ತದೆ. ಇದೇ ಉದ್ದೇಶ ಎಲ್ಲರದ್ದೂ ಆಗಿರುತ್ತದೆ. ಇಲ್ಲಿ ವ್ಯಕ್ತಿಯಲ್ಲ ಉದ್ದೇಶ ಮುಖ್ಯವಾಗುತ್ತದೆ. ಹೀಗಾಗಿ ಅರೆಭಾಷೆ , ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಯೇ ಎಲ್ಲರ ಉದ್ದೇಶ ಆಗಿರುವುದರಿಂದ ಎಲ್ಲೂ ಭಿನ್ನಾಭಿಪ್ರಾಯ ಇರಲಾರದು. ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು ಉದ್ದೇಶಕ್ಕಾಗಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಸಂಘಟನೆಯ, ಅರೆಭಾಷಿಕರ , ಎಲ್ಲಾ ಹಿರಿಯರ, ಎಲ್ಲಾ ಭಾಷಿಕರನ್ನು ಜೊತೆ ಸೇರಿಸಿ ಮುಂದುವರಿಯುವೆ ಎಂದು ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳುತ್ತಾರೆ.
Advertisement