ಅಸ್ಸಾಂ: ಭಾರೀ ಮಳೆಯಿಂದ ಅಸ್ಸಾಂ ರಾಜ್ಯ ತತ್ತರಿಸಿದೆ. ಭಾರೀ ಮಳೆಯಿಂದ ಪ್ರವಾಹ ಸ್ಥಿತಿ ಉಂಟಾಗಿದ್ದು ಇದುವರೆಗೆ 107 ಜನರು ಮೃತಪಟ್ಟಿದ್ದಾರೆ. ಪ್ರವಾಹದ ಹೊಡೆತಕ್ಕೆ ಕಾಡು ಪ್ರಾಣಿಗಳೂ ಕೂಡ ಸಾವನ್ನಪ್ಪಿವೆ ಎಂದು ಸರ್ಕಾರದ ವರದಿ ತಿಳಿಸಿದೆ.
ಅಸ್ಸಾಂನ 30 ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ನೆರೆಯಿಂದಾಗಿ ಭೂ ಕುಸಿತ ಉಂಟಾಗಿ 26 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲಾಡಳಿತದೊಂದಿಗೆ ರಾಜ್ಯ ವಿಪತ್ತು ದಳದ ಸಿಬ್ಬಂದಿ 2,389 ಜನರನ್ನು ರಕ್ಷಿಸಲಾಗಿದೆ. ಪ್ರಸ್ತುತ ಅಸ್ಸಾಂನ 3,014 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದ್ದು, 1,27,955,33 ಹೆಕ್ಟೇರ್ ಕೃಷಿ ಭೂಮಿ ನೀರಿನಿಂದ ಜಲಾವೃತಗೊಂಡಿದೆ. 487 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 1.25 ಲಕ್ಷ ಜನರು ಆಶ್ರಯ ಪಡೆದಿದ್ದಾರೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮುಳುಗಡೆಯಾಗಿದ್ದು, 76 ಪ್ರಾಣಿಗಳು ಮೃತಪಟ್ಟಿವೆ. 170 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಖಡ್ಗಮೃಗಗಳ ಮುಖ್ಯ ಆವಾಸ ಸ್ಥಾನ ಎನಿಸಿರುವ ಉದ್ಯಾನದಲ್ಲಿ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. 82 ಕೃಷ್ಣಮೃಗಗಳು ಸಾವನ್ನಪ್ಪಿವೆ.