ಸುಳ್ಯ: ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.)ಸುಳ್ಯ ಇದರ ಆಶ್ರಯದಲ್ಲಿ ಆಗಸ್ಟ್ 25 ರಂದು ಸಂಜೆ 5.15 ರಿಂದ ಯಕ್ಷ ಸಂಭ್ರಮ ಹಾಗೂ ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
ಸಮಾರಂಭವನ್ನು ಸುಳ್ಯ ವಿಧಾನ ಸಭಾ ಶಾಸಕ ಎಸ್.ಅಂಗಾರ ಇವರ ಅಧ್ಯಕ್ಷತೆಯಲ್ಲಿ, ಹಿರಿಯ ಕಲಾ ಪೋಷಕರು, ಮೂಡುಬಿದಿರೆಯ ಧನಲಕ್ಷ್ಮೀ ಕ್ಯಾಶ್ಯೂ ಎಕ್ಸ್ ಪೋರ್ಟ್ ಇದರ ಅಧ್ಯಕ್ಷ ಕೆ. ಶ್ರೀಪತಿ ಭಟ್ ಉದ್ಘಾಟಿಸಲಿದ್ದಾರೆ. 2019 ನೇ ಸಾಲಿನ ವನಜ ರಂಗಮನೆ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತೆ ಲೀಲಾವತಿ ಬೈಪಾಡಿತ್ತಾಯರಿಗೆ ನೀಡಿ ಗೌರವಿಸಲಾಗುವುದು.
ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಶುಭಾಶಂಸನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕ ರಾಜೇಶ್ ಬಿ.ಭಾಗವಹಿಸಲಿದ್ದಾರೆ. ಹಿರಿಯ ಯಕ್ಷ ಕಲಾವಿದ ರಂಗಮನೆಯ ಸುಜನಾ ಸುಳ್ಯ ಉಪಸ್ಥಿತರಿರುತ್ತಾರೆ.
ಆರಂಭದಲ್ಲಿ ಲೀಲಾವತಿ ಬೈಪಾಡಿತ್ತಾಯ ಇವರಿಂದ ಪರಂಪರೆಯ ಯಕ್ಷ ಗಾಯನ ನಡೆಯಲಿದೆ.ಇದಕ್ಕೆ ಅವರ ಪತಿ ಹರಿನಾರಾಯಣ ಬೈಪಾಡಿತ್ತಾಯರು ಮದ್ದಲೆಯಲ್ಲಿ ಸಹಕರಿಸಲಿದ್ದಾರೆ.
ಬಳಿಕ ಸನಾತನ ಯಕ್ಷಾಲಯ ಮಂಗಳೂರು ಇದರ ಮಹಿಳಾ ಕಲಾವಿದೆಯರಿಂದ,ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ, ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ ಮಾ ನಿಷಾದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು,ಮದ್ದಳೆಯಲ್ಲಿ ಮುರಾರಿ ಕಡಂಬಳಿತ್ತಾಯ,ಚೆಂಡೆಯಲ್ಲಿ ನೆಕ್ಕರೆಮೂಲೆ ಗಣೇಶ್ ಭಟ್ ಭಾಗವಹಿಸಲಿದ್ದಾರೆ.
ಮುಮ್ಮೇಳದಲ್ಲಿ ಪ್ರತಿಭಾನ್ವಿತ ಮಹಿಳಾ ಯಕ್ಷ ಕಲಾವಿದೆಯರಾದ ವಸುಂಧರ ಹರೀಶ್,ಮಾಲಿನಿ ಅಂಚನ್,ಸತ್ಯ ಜೀವನ್, ವೃಂದಾ ಕೊನ್ನಾರ್,ಮಾಲತಿ ವಿ.ರಾವ್,ಬಿಂದಿಯಾ ಮುಂತಾದವರು ಭಾಗವಹಿಸಲಿದ್ದಾರೆ.
ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ಯಕ್ಷ ಸಂಭ್ರಮಕ್ಕೆ ಪ್ರವೇಶ ಉಚಿತವಾಗಿದ್ದು,ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.