ಇಂದು world earth day – “ವಿಶ್ವ ಭೂ ದಿನ”
Advertisement
ಭೂಮಿ ಇಂದು ನಮಗೆಲ್ಲಾ ಚೆನ್ನಾಗಿ ಪಾಠ ಕಲಿಸಿದೆ. ಅನಪೇಕ್ಷಿತ ಬೆಳವಣಿಗೆಯಿಂದ ಇಡೀ ಜಗತ್ತು ಸ್ಥಬ್ದವಾಗಿದೆ. ಅನಗತ್ಯ ತಿರುಗಾಟಗಳಿಗೆ ಕಡಿವಾಣ ಹಾಕಿದೆ. ಪರಿಸರ ಮಾಲಿನ್ಯ ನಿಯಂತ್ರಣ ತಾನೇ ತಾನಾಗಿ ನಡೆಯುತ್ತಿದೆ. ಎಲ್ಲೆಡೆಯೂ ಆಗಸ ಶುಭ್ರವಾಗುತ್ತಿದೆ. ನೀರು ಸ್ವಚ್ಛವಾಗುತ್ತಿದೆ. ಒಳ್ಳೆಯ ಉದ್ದೇಶದಿಂದ ಆರಂಭವಾದ ‘ವಿಶ್ವ ಭೂದಿನ’ಕ್ಕೆ ನ್ಯಾಯ ಒದಗಿಸಲು ನಾವೆಲ್ಲರೂ ಸೇರಿ ಪ್ರಯತ್ನ ಪಡೋಣ. ನಮಗಿರುವುದೊಂದೇ ಭೂಮಿ.
Advertisement
ಒಂದು ದಿನ ತರಗತಿಯಲ್ಲಿ ಪಾಠ ಮಾಡುತ್ತಾ ಟೀಚರ್ ಹೇಳಿದರು, “ಮಕ್ಕಳೆ ಒಂದು ಕತ್ತಿ ತಗೊಂಡು ಬಂದು ಅಲ್ಲಿರುವ ಗಿಡಗಳನ್ನೆಲ್ಲಾ ಕಡಿದು ಹಾಕುವ . ಏನನ್ನುತ್ತೀರಾ ಮಕ್ಕಳೇ?” ಎಂಬ ಪ್ರಶ್ನೆಗೆ ಮಕ್ಕಳು ಉತ್ಸುಕರಾಗಿ ಸರಿ ಟೀಚರ್ ಈಗಲೇ ಮಾಡುವ. ಇಲ್ಲಿರುವ ಎಲ್ಲಾ ಗಿಡಗಳನ್ನು ಕಡಿದು ಹಾಕಿದರೆ ಜಾಗ ಚೊಕ್ಕಟ ಸುಂದರವಾಗಿ ಕಾಣುತ್ತದಲ್ಲವೆ ಎಂಬುದು ಮಕ್ಕಳ ಆಲೋಚನೆ.
ಸೊಪ್ಪು ಸೌದೆಗಳನ್ನು ಸವರಿ ಗುಡಿಸಿದರೆ ಎಲ್ಲಾ ಸುಂದರ ಎಂಬುದು ಮಕ್ಕಳ ಕಲ್ಪನೆ. ಆದರೆ ಟೀಚರ್ ಅಲ್ಲಿಗೆ ಸುಮ್ಮನಾಗಲಿಲ್ಲ.
ನೋಡಿ ಮಕ್ಕಳೆ ವಿಷಯ ಹಾಗಲ್ಲ, ನಿಮ್ಮ ಕೈ,ಕಾಲುಗಳಿಗೇನಾದರು ಗಾಯಗಳಾದರೆ ನೀವು ಏನು ಮಾಡುತ್ತೀರಿ? ಮೊದಲು ಅಳುತ್ತೇವೆ, ಆಮೇಲೆ ಮದ್ದು ಹಾಕುತ್ತೇವೆ. ಹಾಗಾದರೆ ಗಿಡ ಮರಗಳನ್ನು ಕಡಿದು ಹಾಕಿದರೆ ಏನು ಮಾಡುತ್ತವೆ? ಏನಿಲ್ಲ ಅದು ಮತ್ತೆ ಅದರಷ್ಟಕೆ ಚಿಗುರುತ್ತದೆ . ಗಿಡ ಅಳುವುದಿಲ್ಲ, ಬಯ್ಯುವುದಿಲ್ಲ, ಶಿಕ್ಷಿಸುವುದಿಲ್ಲ. ಏನು ಮಾಡುವುದಿಲ್ಲ. ಮತ್ತೆ ಟೀಚರ್ ಕೇಳಿದರು , ನಮ್ಮ ಈ ನೆಲವನ್ನು ಅಗೆಯುತ್ತೀರಿ, ದೊಡ್ಡ ಗಾತ್ರದ ಯಂತ್ರಗಳನ್ನು ಬಳಸಿ ಬೇಕಾದಂತೆ ಪರಿವರ್ತಿಸಿಕೊಳ್ಳುತ್ತೀರಿ. ಮಹಡಿ ಮೇಲೆ ಮಹಡಿ ಕಟ್ಟಿ ಮೆರೆಯುತ್ತೀರಿ . ಈ ಭೂಮಿಗೆ ನೋವಾಗುತ್ತಿದೆಯಾ ಎಂದು ಒಂದು ದಿನವಾದರೂ ಯೋಚಿಸಿದ್ದೀರಾ? ಸಿಕ್ಕಾಬಟ್ಟೆ ಬಳಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಅಳಿವಿನ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇಲ್ಲವಲ್ಲಾ. ಈ ಭೂಮಿ ಏನೂ ಮಾತಾಡುವುದಿಲ್ಲ ತಾನೇ? ನಾವೇನು ಮಾಡಿದರೂ ಈ ಭೂಮಿತಾಯಿ ಸಹಿಸಿಕೊಳ್ಳುತ್ತಾಳೆ. ಕಡೇ ಪಕ್ಷ ಆಕೆಗೊಂದು ಕೃತಜ್ಞತೆಯನ್ನಾದರೂ ಹೇಳಬಹುದಲ್ಲಾ ಎಂಬ ಟೀಚರ ಮಾತಿಗೆ ಏನೆನ್ನಬೇಕು ಎಂದರಿಯದೆ ಮುಖಮುಖ ನೋಡಿಕೊಂಡವು ಮಕ್ಕಳು.
ಇಂದು ಎಲ್ಲದಕ್ಕೂ ಒಂದೊಂದು ನೆನಪಿನ ಹಬ್ಬಗಳಿವೆ. ಅದರಂತೆ ಭೂಮಿಗೂ ಒಂದು ನೆನಪಿನ ದಿನವಿದೆ. ಅದುವೇ’ ವಿಶ್ವ ಭೂದಿನ’. ಎಪ್ರಿಲ್ 22 ರಂದು ವಿಶ್ವದ ಸುಮಾರು 193 ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. 1970 ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಏಪ್ರಿಲ್ 22 ರಂದು ಆರಂಭವಾಯಿತು.
ಭೂಮಿಯ ಮೇಲೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ದ ವಿರುದ್ಧ ಧ್ವನಿ ಎತ್ತುವ ನಿಟ್ಟಿನಲ್ಲಿ ಈ ಆಚರಣೆ ಚಾಲ್ತಿಗೆ ಬಂತು. ದಿನದಿಂದ ದಿನಕ್ಕೆ ವಿಶ್ವದೆಲ್ಲೆಡೆ ಈ ಚಳುವಳಿ ಆರಂಭವಾಗಿ ಇಂದು 193 ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಯಾವಯಾವದೋ ಕೆಲಸಕ್ಕೆ ಬಾರದ ದಿನಗಳನ್ನು ವಿಜೃಂಭಣೆಯಿಂದ ಆಚರಿಸುವ ನಮಗೆ ಈ ವಿಶ್ವ ಭೂದಿನದ ಮಹತ್ವ ಅರಿಯದೇ ಹೋದುದು ವಿಪರ್ಯಾಸವೆಂದರೆ ತಪ್ಪಾಗಲಾರದು. ಬೇರೆಲ್ಲಾ ದಿನಗಳು ವ್ಯಾವಹಾರಿಕ ದೃಷ್ಟಿಯಿಂದ ವಾಣಿಜ್ಯೀಕರಣ ಗೊಂಡಿವೆ. ಆದರೆ ವಿಶ್ವ ಭೂದಿನದ ಆಚರಣೆ ವ್ಯಾಪಾರೀಕರಣಗೊಂಡಿಲ್ಲ. ಹಾಗಾಗಿ ಪ್ರಚಾರ ಸಿಗಲಿಲ್ಲ ಯಾಕೆಂದರೆ ಭೂಮಿ ಯಾವುದನ್ನೂ ಬಯಸುತ್ತಿಲ್ಲವಲ್ಲ. ಈ ರೀತಿ ನಿರಂತರ ದಬ್ಬಾಳಿಕೆಯು ಭೂಮಿಯ ಮೇಲೆ ನಡೆಯುತ್ತಿರವುದರ ಘೋರ ಪರಿಣಾಮ ನಮ್ಮ ಎದುರಿಗೇ ಇದೆ. ಪರಿಸರ ತೀವ್ರವಾಗಿ ಕಲುಷಿತಗೊಂಡಿದೆ. ಈ ಸಂಬಂದ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ 1962 ರಲ್ಲೇ ಹೋರಾಟ ಚಳುವಳಿಗಳು ಆರಂಭಗೊಂಡವು. 22 ಏಪ್ರಿಲ್ 1970 ರಂದು ಮೊದಲ ಬಾರಿಗೆ ‘ವಿಶ್ವ ಭೂದಿನ’ ಆಚರಿಸಲಾಯಿತು. ಈ ಆಚರಣೆ ಆರಂಭ ವಾಗಿ ಇಂದಿಗೆ 50 ವರುಷಗಳಾಯಿತು. ಪ್ರತಿ ವರುಷವೂ ಒಂದೊಂದು ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ”ಬದಲಾಗುತ್ತಿರುವ ಹವಾಗುಣವನ್ನು ತಡೆಯಲು ಕ್ರಮ ಕೈಗೊಳ್ಳೋಣ'( ಕ್ಲೈಮೇಟ್ ಆ್ಯಕ್ಷನ್) ಎಂಬ ಅರ್ಥಪೂರ್ಣ ವಾಕ್ಯವಾಗಿದೆ.
ಇತ್ತೀಚಿನ ಅನಪೇಕ್ಷಿತ ಬೆಳವಣಿಗೆಯಿಂದ ಒಂದು ರೀತಿಯಲ್ಲಿ ಜಗತ್ತು ಸ್ಥಬ್ದವಾಗಿದೆ. ಅನಗತ್ಯ ತಿರುಗಾಟಗಳಿಗೆ ಕಡಿವಾಣ ಹಾಕಿದಂತಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ತಾನೇ ತಾನಾಗಿ ನಡೆಯುತ್ತಿದೆ. ಆರ್ಥಿಕ ಕೆಲಸ ಕಾರ್ಯಗಳು ತಾತ್ಕಾಲಿಕವಾಗಿ ನಿಂತಿವೆ. ಆದರೆ ಸಮಯಕ್ಕಾಗ ಬೇಕಾದ ಕೃಷಿ ಕಾರ್ಯಗಳು ನಿಲ್ಲುವಂತಿಲ್ಲವಲ್ಲ. ಆಯಾ ಕಾಲಕ್ಕೇನು ಆಗ ಬೇಕೋ ಅದು ಮಾಡಲೇ ಬೇಕು. ಸ್ವಲ್ಪ ಆಚೀಚೆಯಾದರೂ ಬೆಳೆ ಕೈಗೆ ಸಿಗದೆ ನೆಲಕಚ್ಚುವ ಭಯ. ಬೆಳೆ ಕೈಗೆ ಬಂದಾಗ ಅವುಗಳ ವಿಲೇವಾರಿ ಮಾಡುವ ಕೈಂಕರ್ಯ. ಇದೆಲ್ಲಾ ಭೂಮಿ, ಪರಿಸರಕ್ಕೆ ಅಂಟಿಕೊಂಡ ಸಂಬಂಧಗಳು. ಹೀಗೆ ಒಂದಕ್ಕೊಂದು ಸಂಬಂಧ ಹೊಂದಿದವುಗಳೇ . ಸಮಯವೇ ಉತ್ತರ ಒದಗಿಸುವ ನಿರೀಕ್ಷೆ ಯಲ್ಲಿ.
ಒಂದು ಒಳ್ಳೆಯ ಉದ್ದೇಶದಿಂದ ಆರಂಭವಾದ ‘ವಿಶ್ವ ಭೂದಿನ’ಕ್ಕೆ ನ್ಯಾಯ ಒದಗಿಸಲು ನಾವೆಲ್ಲರೂ ಸೇರಿ ಪ್ರಯತ್ನ ಪಡೋಣ. ನಮಗಿರುವುದೊಂದೇ ಭೂಮಿ. ನಮ್ಮ ಮುಂದಿನ ಜನಾಂಗಕ್ಕೂ ಭೂಮಿ ಭೂಮಿಯಾಗಿಯೇ ಹಸ್ತಾಂತರಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆಯಲ್ಲವೇ.
@ ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement