ಸುಳ್ಯ: ಒಬ್ಬರಿಗೊಂದೇ ಆಧಾರ . ದೇಶಕ್ಕೊಂದು ಆಧಾರ್, ವ್ಯಕ್ತಿಗೊಂದು ಆಧಾರ್ ನಂಬರ್…!. ಹೀಗಾಗಿ ಈಗ ಎಲ್ಲಾ ದಾಖಲೆಗಳಿಗೂ ಆಧಾರ್ ಲಿಂಕ್. ಒಂದರ್ಥದಲ್ಲಿ ಬದುಕಿಗೇ ಆಧಾರ್ ಲಿಂಕ್..!. ಈ ಲಿಂಕ್.. ಲಿಂಕ್.. ಮಾಡಿ ಜನಸಾಮಾನ್ಯರು ಸುಲಭದ ಹಾದಿಯಲ್ಲಿದ್ದಾರೆ. ಕೆಲವರಿಗೆ ಆಧಾರ್ ಲಿಂಕ್ ಮಾಡುವುದಕ್ಕೂ ಆಧಾರ ಇಲ್ಲವಾಗಿದೆ. ಅವರಿಗೆ ಸಂಕಷ್ಟ ತಪ್ಪಿಲ್ಲ. ಈಗ ಲಿಂಕೂ ಇಲ್ಲ… ಕನೆಕ್ಟೂ ಇಲ್ಲ..! ಈ ಹಂತದಲ್ಲಿದ್ದಾರೆ ಇಬ್ಬರು ಬಡ ಮಹಿಳೆಯರು. ಇವರ ಸಮಸ್ಯೆ ಹೀಗಿದೆ… ಸಾಧ್ಯವಾದರೆ ಪರಿಹಾರ ಮಾಡಿಸಿಕೊಡಿ ಅಂತ ದು:ಖ ತೋಡುತ್ತಾರೆ.ಅಚ್ಚರಿ ಎಂದರೆ ಇವರು ಅತ್ತೆ-ಸೊಸೆ. ಹೀಗಾಗಿ ಅತ್ತೆ-ಸೊಸೆಗೊಂದೇ ಆಧಾರ್…!
ಅವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ನಿವಾಸಿಗಳು. ಅವರಿಬ್ಬರೂ ಅತ್ತೆ-ಸೊಸೆ. ಈಗ ಒಂದೇ ಮನೆಯಲ್ಲಿದ್ದಾರೆ. ಅಚ್ಚರಿ ಎಂದರೆ ಇವರಿಗೆ ಆಧಾರ್ ನಂಬರೂ ಒಂದೇ…!. ಹಿಂದೆ ತಿಳಿದಿರಲಿಲ್ಲ. ಈ ಬಗ್ಗೆ ಗಮನಿಸಲೂ ಇಲ್ಲ. ಪ್ರತೀ ವ್ಯಕ್ತಿಗೆ ಬೇರೆ ಬೇರೆ ಆಧಾರ್ ನಂಬರ್ ಎಂಬ ಅರಿವು ಇರಲಿಲ್ಲ. ಈಚೆಗೆ ಯಾವುದೋ ಸೌಲಭ್ಯಕ್ಕೆ ಹೋದಾಗ, ರೇಶನ್ ಪಡೆಯುವುದಕ್ಕೆ ಹೋದಾಗ ತಿಳಿದಿದೆ. ಈಗ ಸಮಸ್ಯೆಯಾಗಿದೆ. ಸಮಸ್ಯೆ ತಿಳಿದ ಬಳಿಕ ಇಬ್ಬರೂ ಮಹಿಳೆಯರೂ ಕಚೇರಿಗಳಿಗೆ, ಆಧಾರ್ ಕೇಂದ್ರಗಳಿಗೆ ಅಲೆದಾಡಿದ್ದು 6 ಬಾರಿ..! ಇಂದಿಗೂ ಸರಿಯಾಗಿಲ್ಲ. ಈ ಮಹಿಳೆಯರಲ್ಲಿ ಒಬ್ಬರು 70 ವರ್ಷ ಮೇಲ್ಪಟ್ಟವರು, ಇನ್ನೊಬ್ಬರು 50 ವರ್ಷ ಮೇಲ್ಪಟ್ಟವರು. ಒಬ್ಬರ ಹೆಸರು ಕೆಂಚಮ್ಮ ಇನ್ನೊಬ್ಬರ ಹೆಸರು ಹೊನ್ನಮ್ಮ. ಮಹಿಳೆಯರ ಮನೆಯವರು ಪ್ರಯತ್ನ ಮಾಡಿದರು. ಎಲ್ಲಾ ಸರಿ ಮಾಡಿಸಿ ಮನೆಗೆ ಬಂದ ಬಳಿಕ ಮತ್ತೆ ಅದೇ ಆಧಾರ್ ನಂಬರ್ ಇರುವ ಕಾರ್ಡ್ ಅಂಚೆ ಮೂಲಕ ಬರುತ್ತದೆ…! ಈಗ ಸಾಕಾಗಿ ಹೋಗಿದೆ ಎಂದು ದು:ಖ ತೋಡುತ್ತಾರೆ. ಈಗ ಸಮೀಪದಲ್ಲಿ ಆಧಾರ್ ಕೇಂದ್ರವೂ ಇಲ್ಲ. ದೂರದ ಕಡೆಗೆ ತೆರಳಲು ಇವರಿಗೇ ಒಬ್ಬರು ಆಧಾರ ಕ್ಕೆ ಜನ ಬೇಕು. ಎಷ್ಟು ಬಾರಿ ಅಂತ ಬರುವುದು ನಿಮಗೆ ಆಧಾರಕ್ಕೆ ಅಂತ ಕೇಳಿದರೆ ಎಂದು ಮಹಿಳೆಯರು ಹೇಳುತ್ತಾರೆ.
ಹೀಗಾಗಿ ಈಗ ಸಮಸ್ಯೆಯ ಮಾತುಗಳ ಬದಲಾಗಿ ಈ ಮಹಿಳೆಯರಿಗೆ ಆಧಾರ್ ಪರಿಹಾರದ ಬಗ್ಗೆ ಸಲಹೆಗಳು ಬೇಕಾಗಿದೆ. ಇಲಾಖೆಗಳು ಈ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ನೀಡಿ ಆಧಾರ್ ಕಾರ್ಡ್ ವ್ಯವಸ್ಥೆ ಮಾಡಿಸಿ ಕೊಡಬೇಕಾಗಿದೆ. ಇಲಾಖೆಗಳ ವ್ಯವಸ್ಥೆ ಈ ಬಡ ಮಹಿಳೆಯರಿಗೆ ಗೊತ್ತಿಲ್ಲ, ಒಂದಲ್ಲ ಹಲವು ಬಾರಿ ಹೋಗಿದ್ದಾರೆ, ತಕ್ಷಣ ಪರಿಹಾರ ಬೇಕಾಗಿದೆ. ಅಧಿಕಾರಿಗಳು ಮಾಡಿಸಿಕೊಡುವರೇ ?