ಗಣೇಶನ ಹಬ್ಬ ಬಂದಿದೆ. ಈ ಬಾರಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಕಡೆಗೆ ಗಮನಹರಿಸಬೇಕಿದೆ. ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ. ಗಣೇಶೋತ್ಸವಗಳಲ್ಲಿ ಡಿಜೆ ಹಾಡು ನೃತ್ಯ, ಭಜನೆ ಇತ್ಯಾದಿಗಳು ಇರುತ್ತವೆ. ಅದರ ಜೊತೆಗೆ ಪರಿಸರ ಸ್ನೇಹಿ ಗಣೇಶೋತ್ಸವ ಈ ಬಾರಿ ನಮ್ಮಲ್ಲಿ ಆಚರಣೆ ಎಂಬ ಸಂಕಲ್ಪ ಮಾಡಬಹುದೇ ? ಈ ಬಗ್ಗೆ ಜಾಗೃತಿ ಆಂದೋಲನ ನಡೆಯಬೇಕಿದೆ. ಈಗಾಗಲೇ ಮಡಿಕೇರಿಯಲ್ಲಿ ಮಕ್ಕಳಿಂದ ಇಂತಹದ್ದೊಂದು ಆಂದೋಲನ ನಡೆದಿದೆ. ಈ ಕಡೆಗೆ ನಮ್ಮ ಬೆಳಕು….
ಗಣೇಶ ಹಬ್ಬಕ್ಕೆ ಪೂರ್ವಭಾವಿಯಾಗಿ ಸ್ವಚ್ಛ ಭಾರತ ಅಭಿಯಾನ ಹಾಗೂ ‘ಹಸಿರೆಡೆಗೆ ನಮ್ಮ ನಡೆ-ಹಸಿರು ಯಾತ್ರೆ ಅಭಿಯಾನ’ ಕಾರ್ಯಕ್ರಮದಡಿ ಮಡಿಕೇರಿಯಲ್ಲಿ ‘ಪರಿಸರ ಸ್ನೇಹಿ’ ಹಸಿರು ಗಣೇಶ ಉತ್ಸವ ಆಚರಣೆ ಕುರಿತಂತೆ ಜಿಲ್ಲಾ ಮಟ್ಟದ ಪರಿಸರ ಜಾಗೃತಿ ಆಂದೋಲನ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಚೇರಿ, ರಾಷ್ಟ್ರೀಯ ಹಸಿರು ಪಡೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರಸಭೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ‘ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ’ ಕುರಿತ ಮಾಹಿತಿ ಪತ್ರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಗಾಯತ್ರಿ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಗಣೇಶ ಹಬ್ಬದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ತಡೆಯುವ ದಿಸೆಯಲ್ಲಿ ಬಣ್ಣ ರಹಿತ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಬೇಕು. ಈ ದಿಸೆಯಲ್ಲಿ ಜನಜಾಗೃತಿ ಮೂಡಿಸಲು ಇಂತಹ ಪರಿಸರ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ವಿಷಕಾರಿ ರಾಸಾಯನಿಕ ಮತ್ತು ಲೋಹ ಲೇಪಿತ ಬಣ್ಣ ಬಳಸಿ ತಯಾರಿಸಿದ ಗಣೇಶ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಜಲಚರಗಳಿಗಲ್ಲದೆ, ಪರಿಸರಕ್ಕೂ ಹಾನಿಯುಂಟಾಗುತ್ತಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಮಾತ್ರ ಬಳಕೆ ಮಾಡುವ ಮೂಲಕ ಹಸಿರು ಗಣೇಶೋತ್ಸವ ಆಚರಣೆಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರು ಹಾಗೂ ಕಾರ್ಯಕ್ರಮ ಸಂಘಟಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ‘ಹಸಿರು ಗಣೇಶೋತ್ಸವ ಆಚರಿಸುವ ಮೂಲಕ ಜಲಮಾಲಿನ್ಯ ತಡೆದು ಜಲಮೂಲಗಳನ್ನು ರಕ್ಷಿಸುವ ದಿಸೆಯಲ್ಲಿ ಶಾಲಾ ಮಕ್ಕಳು ಮತ್ತು ಸಮುದಾಯದಲ್ಲಿ ‘ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹ ತಯಾರಿಕೆ ಮತ್ತು ಪ್ರತಿಷ್ಠಾಪನೆಯ ಅಗತ್ಯತೆ’ ಕುರಿತು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ವ್ಯಾಪಕವಾಗಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.ರಾಷ್ಟ್ರೀಯ ಹಸಿರು ಪಡೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಶಾಲೆಗಳಲ್ಲಿ ಪರಿಸರ ಕಾರ್ಯಕ್ರಮದಡಿ ಇಕೋ-ಕ್ಲಬ್ ಮೂಲಕ ಗಣೇಶ ಹಬ್ಬಕ್ಕೂ ಮುನ್ನ ‘ಹಸಿರು ಗಣೇಶೋತ್ಸವ ಆಚರಣೆಯ ಅಗತ್ಯತೆ’ ಕುರಿತು ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರದ ಅರಿವು ಮೂಡಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸ್ಪಂದಿಸುತ್ತಿರುವ ಜಿಲ್ಲೆಯ ನಾಗರಿಕರು ಮಣ್ಣಿನ ಗಣೇಶ ಮೂರ್ತಿ ಖರೀದಿಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಕಂಡುಬಂದಿದೆ ಎಂದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ, ಜಿಲ್ಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಕಾಳಜಿಯಿಂದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಪರಿಸರ ಜಾಗೃತಿ ಆಂದೋಲನವನ್ನು ಉತ್ತಮವಾಗಿ ಸಂಘಟಿಸಲಾಗುತ್ತಿದೆ ಎಂದು ಶ್ಲಾಘಿಸಿದರು.
ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಪರಿಸರ ಪ್ರಜ್ಞೆ ಬೆಳೆಸಿಕೊಂಡು ಇಂತಹ ಆಂದೋಲನದ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಯೋಜನಾ ಸಹಾಯಕ ಎಚ್.ಎಂ.ಅಲೋಕ್, ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕ ವಿಲ್‍ಫ್ರೆಡ್ ಕ್ರಾಸ್ತಾ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ಶಿಕ್ಷಕರಾದ ಶಾರದ, ಕವಿತ, ಸಂಧ್ಯಾ, ಸಗಾಯಮೇರಿ, ಪ್ರೇಮ್‍ಸಾಂತ್ ಮೇಯರ್ ಇತರರು ಹಾಜರಿದ್ದರು.
ಜಿಲ್ಲಾ ಮಟ್ಟದ ಪರಿಸರ ಜನಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಮಣ್ಣಿನ ಗಣೇಶ ವಿಗ್ರಹ ತಯಾರು ಮಾಡುವ ಮೂಲಕ ಜನರ ಗಮನ ಸೆಳೆದರು. ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕ ವಿಲ್‍ಫ್ರೆಡ್ ಕ್ರಾಸ್ತಾ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಶಾಲಾ ಅಂಗಳದಲ್ಲಿ ಜೇಡಿ ಮಣ್ಣಿನಿಂದ ವಿವಿಧ ನಮೂನೆಯ ಗಣೇಶ ಮೂರ್ತಿಯನ್ನು ತುಂಬಾ ಖುಷಿಯಿಂದ ತಯಾರಿಸಿದರು. ಮಾಡಲಿಂಗ್ ಸ್ಪರ್ಧೆಯಲ್ಲಿ ಶಾಲೆಯ ಇಕೋ ಕ್ಲಬ್‍ನ ಹಸಿರುಪಡೆಯ 40 ಮಕ್ಕಳು ಭಾಗವಹಿಸಿದ್ದರು. ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಪರಿಸರ ಘೋಷಣೆ ಮೊಳಗಿಸುವ ಮೂಲಕ ಜನರ ಗಮನ ಸೆಳೆದರು. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ-ಜಲಮಾಲಿನ್ಯ ತಡೆಯಿರಿ, ಮಣ್ಣಿನ ಗಣಪ ತಯಾರಿಸೋಣ–ಜಲಮೂಲ ಉಳಿಸೋಣ, ಕೆರೆ, ಬಾವಿ, ನದಿ ಜಲಮೂಲಗಳಲ್ಲಿ ಗಣೇಶ ವಿಸರ್ಜನೆ ಬೇಡ, ತ್ಯಜಿಸಿ ತ್ಯಜಿಸಿ ವಿಷಕಾರಿ ರಾಸಾಯನಿಕ ಬಣ್ಣದ ಗಣೇಶಮೂರ್ತಿ ತ್ಯಜಿಸಿ ಘೋಷಣೆಗಳನ್ನು ಕೂಗಿದರು.