ಸುಳ್ಯ: ರಾಜ್ಯದಲ್ಲಿ ಋಣಮುಕ್ತ ಕಾಯಿದೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ತೋರ್ಪಡಿಸಲಿ ಎಂದು ಜಿಲ್ಲಾ ಋಣಮುಕ್ತ ಕಾಯಿದೆ ಅನುಷ್ಠಾನ ಕ್ರಿಯಾ ಸಮಿತಿಯ ಅಧ್ಯಕ್ಷ ಎಂ.ಬಿ.ಸದಾಶಿವ ಆಗ್ರಹಿಸಿದ್ದಾರೆ.
ಋಣಮುಕ್ತ ಕಾಯಿದೆ ಅನುಷ್ಠಾನ ಕ್ರಿಯಾ ಸಮಿತಿಯ ವತಿಯಿಂದ ಸುಳ್ಯದಲ್ಲಿ ನಡೆದ ವಿವಿಧ ಕಿರು ಹಣಕಾಸು ಸಂಸ್ಥೆಗಳ ಸಾಲಗಾರ ಸದಸ್ಯರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಿರು ಹಣಕಾಸು ಸಂಸ್ಥೆಗಳನ್ನು ಋಣಮುಕ್ತ ಕಾಯಿದೆಯಡಿಯಲ್ಲಿ ತರಬೇಕು, ಕಿರು ಹಣಕಾಸು ಸಂಸ್ಥೆಗಳಿಂದ ಮಹಿಳೆಯರು ಮತ್ತು ಬಡವರು ಪಡೆದ ಎಲ್ಲಾ ಸಾಲವನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಿ ಇವರನ್ನು ಋಣ ಮುಕ್ತರನ್ನಾಗಿ ಮಾಡಬೇಕು. ಜೊತೆಗೆ ಸರಕಾರವು ಎನ್‍ಆರ್ ಎಲ್ ಎಂ ಯೋಜನೆಯನ್ನು ಅನುಷ್ಠಾನ ಮಾಡುವ ಮೂಲಕ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಗುಂಪು ಸಾಲಗಳನ್ನು ನೀಡುವ ವ್ಯವಸ್ಥೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಈಗ ಆರ್ಥಿಕ ಹಿಂಜರಿತದಿಂದ ಉದ್ಯೋಗ, ಆದಾಯ ಇಲ್ಲದೆ ಕಿರು ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮರು ಪಾವತಿ ಮಾಡಲಾಗದೆ ಜನರು ಹತಾಶೆಯಲ್ಲಿದ್ದಾರೆ. ಹಾಗಿದ್ದರೂ ಕಿರು ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ಕ್ರಮ ಅಮಾನವೀಯವಾಗಿದೆ. ಇದನ್ನು ನಿಯಂತ್ರಿಸಬೇಕು ಎಂದು ಅವರು ಹೇಳಿದರು. ಎನ್‍ಆರ್ ಎಲ್ ಎಂ ಯೋಜನೆಯ ಬಗ್ಗೆ ಮಾಹಿತಿ ನೀಡಲು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸುಳ್ಯ ತಾಲೂಕಿನಲ್ಲಿ ನಾಲ್ಕು ಕಡೆಗಳಲ್ಲಿ ಸಭೆ ನಡೆಸಲಾಗುವುದು ಎಂದರು.
ಸಿಪಿಐಎಂ ಮುಖಂಡ ಬಿ.ಎಂ.ಭಟ್ ಸಮಾವೇಶವನ್ನು ಉದ್ಘಾಟಿಸಿ ಋಣ ಮುಕ್ತ ಕಾನೂನಿನ ಕುರಿತು ಮಾಹಿತಿ ನೀಡಿದರು. ಋಣ ಮುಕ್ತ ಕಾನೂನು ಯಶಸ್ವಿಯಾಗಿ ಅನುಷ್ಠಾನ ಆಗಿ ಬಡ ಮತ್ತು ಮಧ್ಯಮ ವರ್ಗದ ಜನರು ಸಂಪೂರ್ಣ ಋಣ ಮುಕ್ತರಾಗಿಸುವ ನೆಲೆಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಸಂಚಾಲಕ ಅಶೋಕ್ ಎಡಮಲೆ ಮಾತನಾಡಿ `ಋಣಮುಕ್ತ ಕಾಯಿದೆ ಅನುಷ್ಠಾನಕ್ಕೆ ಮತ್ತು ಸಾಲದ ಶೂಲದಿಂದ ಹೊರ ಬರಲು ಜನರು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಅರಿತು ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿಯ ಮುಖಂಡ ಆನಂದ ಬೆಳ್ಳಾರೆ, ಪ್ರಮುಖರಾದ ಸಚಿನ್ ರಾಜ್ ಶೆಟ್ಟಿ, ಡಿ.ಎಂ.ಶಾರೀಖ್, ಮಜೀದ್, ನೇಮಿರಾಜ್, ಮಂಜುನಾಥ್, ಇಸ್ಮಾಯಿಲ್, ಮಹಾಬಲ ರೈ, ರಝಾಕ್ ಮಾತನಾಡಿದರು. ಋಣಮುಕ್ತ ಕಾಯಿದೆ ಅನುಷ್ಠಾನ ಕ್ರಿಯಾ ಸಮಿತಿಯ ಸುಳ್ಯ ತಾಲೂಕು ಸಂಚಾಲಕ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.