ಎಲಿಮಲೆ: ಹಲವು ವರ್ಷಗಳಿಂದ ಅಭಿವೃದ್ಧಿಗಾಗಿ ಕಾಯುತ್ತಿರುವ ಮಡಿಕೇರಿ, ಮೈಸೂರು ಭಾಗಗಳಿಗೆ ನೇರ ಸಂಪರ್ಕ ಕಲ್ಪಿಸುವ ಎಲಿಮಲೆ-ಮರ್ಕಂಜ-ಅರಂತೋಡು ರಸ್ತೆಯ ಅಗಲೀಕರಣ ಕಾಮಗಾರಿ ಪ್ರಸ್ತಾವನೆ ಕಡತದಲ್ಲಿಯೇ ಬಾಕಿಯಾಗಿದೆ.
ಪ್ರಸಿದ್ದ ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಯಾತ್ರಾರ್ಥಿಗಳು ಓಡಾಡುತ್ತಾರೆ. ಮಡಿಕೇರಿ, ಮೈಸೂರುಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಅತ್ಯಂತ ಕಡಿದಾಗಿದ್ದು, ಭಾರೀ ವಾಹನಗಳು ಮುಖಾಮುಖಿಯಾದರೆ ದಾರಿ ಬಿಟ್ಟುಕೊಡಲು ಕಷ್ಟವಾಗುತ್ತದೆ. ರಸ್ತೆ ತಿರುವುನಿಂದ ಕೂಡಿದ್ದು, ಎದುರಿನಿಂದ ಬರುವ ವಾಹನಗಳು ಎದುರಾಗಿ ಅಪಘಾತಗಳೂ ಸಂಭವಿಸಿವೆ.
15 ಕಿ.ಮೀ ಉಳಿಕೆ:
ಸುಬ್ರಹ್ಮಣ್ಯಕ್ಕೆ ಹೋಗಲು ಸುಳ್ಯ ಬಳಸಿ ಪ್ರಯಾಣಿಸಿದರೆ ಸುಮಾರು 74 ಕಿ.ಮೀ ಇದ್ದು ಅರಂತೋಡಿನಿಂದ ಅಡ್ತಲೆ ಮರ್ಕಂಜ ಮಾರ್ಗವಾಗಿ ಪ್ರಯಾಣಿಸಿದರೆ ಸುಮಾರು 15 ಕಿಮೀನಷ್ಟು ಉಳಿತಾಯವಾಗುತ್ತದೆ. ಆದ್ದರಿಂದ ಬಹುತೇಕ ಪ್ರವಾಸಿಗರು ಇದೇ ಮಾರ್ಗವನ್ನು ಬಳಸುತ್ತಾರೆ. ಆದರೆ ಇದರಲ್ಲಿ ಪ್ರಯಾಣಿಸುವುದು ಮಾತ್ರ ಬಹಳ ಪ್ರಯಾಸವೇ ಸರಿ.
ಅಗಲೀಕರಣ ಕಡತದಲ್ಲಿಯೇ ಬಾಕಿ:
ಬಹುಪಯೋಗಿ ಎಲಿಮಲೆ- ಮರ್ಕಂಜ -ಅರಂತೋಡು ರಸ್ತೆ ಅಗಲೀಕರಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇದ್ದು 2 ವರ್ಷಗಳ ಹಿಂದೆ ಪ್ರಸ್ತಾವನೆ ನೀಡಲಾಗಿತ್ತು. ಆದರೆ ಅನುದಾನ ಮಂಜೂರುಗೊಳ್ಳದೇ ಪ್ರಸ್ತಾವನೆ ಕಡತದಲ್ಲಿಯೇ ಬಾಕಿಯಾಗಿದೆ. ರಸ್ತೆಯನ್ನು ಎಲಿಮಲೆಯಿಂದ ಮರ್ಕಂಜದವರೆಗೆ 5 ಕಿ.ಮೀನಷ್ಟು ಅಗಲೀಕರಣ ಮಾಡಲು ಈ ಹಿಂದೆ ಸಿಆರ್‍ಏಫ್‍ನಿಂದ 3 ಕೋ.ರೂ ಮಂಜೂರುಗೊಂಡು ಟೆಂಡರ್ ಪ್ರಕ್ರಿಯೆ ಕೂಡಾ ಮುಗಿದಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಯಬೇಕಿದ್ದ ಈ ಕಾಮಗಾರಿಯ ಟೆಂಡರ್ ಪಡೆದುಕೊಂಡ ಗುತ್ತಿಗೆದಾರ ನಿಧನ ಹೊಂದಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ ಇದೀಗ ಕಾಮಗಾರಿ ಮತ್ತೆ ಪ್ರಾರಂಭಿಸಲು ರಿಟೆಂಡರ್ ಮಾಡಬೇಕಿದೆ.
ಸೇವಾಜೆಯಲ್ಲಿ ನಿರ್ಮಾಣವಾಗಲಿದೆ ಹೊಸ ಸೇತುವೆ:
ಅತ್ಯಂತ ಕಡಿದಾಗಿರುವ ಹಳೆಯ ಸೇತುವೆಯನ್ನು ಕೆಡವಿ ಸೇವಾಜೆಯಲ್ಲಿ ನೂತನ ಸೇತುವೆ ನಿರ್ಮಾಣವಾಗಲಿದೆ. ಇದಕ್ಕಗಿ 2.25 ಕೋಟಿ ರೂ.ಗಳ ಪ್ರಸ್ತಾವನೆ ಮಂಜೂರುಗೊಂಡಿದ್ದು ಕಾಮಗಾರಿ ಅತೀ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಲೋಕೋಪಯೋಗಿ ಇಂಜಿನಿಯರ್ ಸಣ್ಣೇ ಗೌಡ ತಿಳಿಸಿದ್ದಾರೆ.
- ಕೃಷ್ಣಪ್ರಸಾದ್ ಕೊಲ್ಚಾರ್