ಸುಳ್ಯ: ಮೊದಲು ನಾನು ಸ್ವಚ್ಛವಾಗಬೇಕು, ಆ ಮೂಲಕ ನನ್ನ ಮನೆ, ಸಮಾಜ, ಗ್ರಾಮ, ಸ್ವಚ್ಛ ಸ್ವಸ್ಥ ದೇಶ. ಅಂದು ಕನಸು ಕಂಡ ಗಾಂಧಿಯವರಿಂದ ಸ್ವಚ್ಛ ಭಾರತದ ಕನಸು ನನಸಾಗಿಸಲಾಗಲಿಲ್ಲ. ಇಂದು ಹೊರಟಿರುವ ಮೋದಿಯವರೊಬ್ಬರಿಂದಲೂ ಸಾಧ್ಯವಿಲ್ಲ. ನಾವೆಲ್ಲರೂ ಕೈ ಜೋಡಿಸಿದಾಗ ಮಾತ್ರ ಸ್ವಚ್ಛ ಭಾರತದ ಕನಸು ನನಸಾಗಿಸಲು ಸಾಧ್ಯ. ಆ ನಿಟ್ಟಿನಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಒಳ್ಳೆಯ ಒಂದು ಕಾರ್ಯಕ್ರಮವನ್ನು ನಮ್ಮ ಪರಿಸರದಲ್ಲಿ ಹಮ್ಮಿಕೊಂಡಿದ್ದೀರಾ? ಇಲ್ಲಿ ಸಿಕ್ಕ ಮಾಹಿತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕಅಭಿಪ್ರಾಯಪಟ್ಟರು.
ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕದವರು ಅಜ್ಜಾವರದ ಬಯಂಬು ಕಾಲನಿಯಲ್ಲಿ ಹಮ್ಮಿಕೊಂಡ “ಸ್ವಚ್ಛತೆ ಮತ್ತು ಆರೋಗ್ಯ”ದ ಕುರಿತ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪ್ರಭಾಕರ ಶಿಶಿಲ ಮಾತನಾಡಿ, ಸ್ವಚ್ಛತೆಯ ಅರಿವು ಮನೆಯಿಂದಲೇ ಬರಬೇಕು. ಆ ಮೂಲಕ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ ಎಂದು ಹೇಳಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಬೇಕು ಎಂದರು.
ಇನ್ನೋರ್ವ ಮುಖ್ಯ ಅತಿಥಿ ರಮೇಶ್ ಬಯಂಬು ಮಾತನಾಡಿ, ಸ್ವಚ್ಛತೆ ಒಂದು ದಿನಕ್ಕೆ ಸೀಮಿತವಾಗಬಾರದು. ದಿನ ನಿತ್ಯ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಇಂತಹ ಕಾರ್ಯಕ್ರಮಗಳ ಆಯೋಜನೆ ಸಾರ್ಥಕ. ಮಕ್ಕಳಿಗೆ ಎಳವೆಯಿಂದಲೇ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಪರಿಸರದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡದ್ದು ಶ್ಲಾಘನೀಯ ಎಂದರು. ಮುಖ್ಯ ಅತಿಥಿ ಮುದ್ದಪ್ಪ ಬಯಂಬು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುಳ್ಯ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಮಾತನಾಡಿ, ಸ್ವಚ್ಛತೆ ಎಂದರೆ ಮನಸ್ಸು, ಶರೀರ, ಮನೆ, ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗಲೇ ನಿಜವಾದ ಸ್ವಚ್ಛತೆ. ವೈಯಕ್ತಿಕ ಸ್ವಚ್ಛತೆಯ ಮೂಲಕ ಆರೋಗ್ಯವಂತ ಜೀವನವನ್ನು ನಡೆಸಲು ಸಾಧ್ಯ. ಆ ನಿಟ್ಟಿನಲ್ಲಿ ಇವತ್ತಿನ ಕಾರ್ಯಕ್ರಮ ನಿಮ್ಮಆರೋಗ್ಯವರ್ಧನೆಗೆ ಸಹಕಾರಿ ಎಂದರು.
ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಯಾರೋ ಹಾಕಿದ ಕಸವನ್ನು ಯಾರೋ ಹೆಕ್ಕುವ ಮೂಲಕ ಇಂದು ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸುವುದು ಸರ್ವೇ ಸಾಮಾನ್ಯವಾಗಿದೆ. ಬದಲಾಗಿ ನಾನು ಕಸ ಹಾಕಬಾರದು ಎಂಬ ಅರಿವು ಪ್ರತಿಯೊಬ್ಬನಲ್ಲೂ ಬರಬೇಕು ಎನ್ನುವ ನಿಟ್ಟಿನಲ್ಲಿ ಇಂದು ಸಮುದಾಯಕ್ಕೆ ತೆರಳಿ ಅದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರೆಡ್‍ಕ್ರಾಸ್ ವತಿಯಿಂದ ಆಯೋಜಿಸುತ್ತಿದ್ದೇವೆ ಎಂದರು.