ಏನೆಕಲ್ಲು : ಏನೆಕಲ್ಲು ಗ್ರಾಮದ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಿಂದ ಅನ್ಯಾಯ ನಡೆದಿದೆ ಎಂದು ಆರೋಪಿಸಿ ಏಕಾಂಗಿಯಾಗಿ ಸಹಕಾರಿ ಸಂಘದ ಬಳಿ ಶೆಡ್ ನಿರ್ಮಿಸಿ 3 ದಿನಗಳಿಂದ ಸತ್ಯಾಗ್ರಹ ನಡೆಸಿ ಗುರುವಾರ ಸಂಜೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ನ್ಯಾಯಕ್ಕಾಗಿ 3 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದವರು ಏನೆಕಲ್ಲು ಗ್ರಾಮದ ಪಿ ಆರ್ ಯಶೋಚಂದ್ರ. ಕಾರಣ, ಏನೆಕಲ್ಲು ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ಜಮೀನು ಅತಿಕ್ರಮಣ ಹಾಗು ಕಿರುಕುಳ ವಿರೋಧಿಸಿ.
ಉಪವಾಸ ಸತ್ಯಾಗ್ರಹದ ಬಗ್ಗೆ ಮಾತನಾಡಿದ ಯಶೋಚಂದ್ರ ಅವರು, ಏನೆಕಲ್ ಸೇವಾ ಸಹಕಾರಿ ಸಂಘದ ಸ್ಥಾಪಕರು ನನ್ನ ತಂದೆಯವರಾದ ಪಿ ಎಸ್ ರಾಮಣ್ಣ ಮಾಸ್ಟರ್ ರವರು. ಆರಂಭದಲ್ಲಿ ಸ್ವಂತ ಕಟ್ಟಡ ಇಲ್ಲದ ಕಾರಣ ನಮ್ಮ ಮನೆಯಲ್ಲೇ ಅವಕಾಶ ಕೊಟ್ಟು ಸಂಘ ಕೆಲಸ ಮಾಡಲು ಅನುವು ಮಾಡಿ ಕೊಟ್ಟಿದ್ದರು.ಆ ಬಳಿಕ 1955 ರಲ್ಲಿ 23 ಸೆಂಟ್ಸ್ ಜಾಗ ದಾನ ಮಾಡಿ ಈಗ ಗೋದಾಮು ಆಗಿರುವ ಮೂಲ ಕಟ್ಟಡ ನಿರ್ಮಿಸಿದರು. ಬಡತನವೇ ‘ಬಂಡವಾಳ’ವಾಗಿದ್ದ ಆ ಕಾಲದಲ್ಲಿ ಅತಿ ಕಷ್ಟದಿಂದ ಸಂಘದ ನಿರ್ವಹಣೆ ಮಾಡಿದ್ದರು.ಸಂಘಕ್ಕೆ ಭೇಟಿಕೊಡುವ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಊಟೋಪಚಾರವೂ ನಮ್ಮ ಮನೆಯಲ್ಲೇ ಉಚಿತವಾಗಿತ್ತು. ದಿ ಕುಕ್ಕಪ್ಪನ ಮನೆ ಮುತ್ತಪ್ಪ ಮಾಸ್ತರ್ ಬೇಂಕಿನ ಲೆಕ್ಕಪತ್ರ ಬರೆಯುವ ಕೆಲಸ ಉಚಿತವಾಗಿ ಮಾಡಿದ್ದರು.ನಂತರ ಬಂದ ಆಡಳಿತ ಮಂಡಳಿ ರಾಜಕೀಯ ದ್ವೇಷದಿಂದ ನಮ್ಮ ತಂದೆಯವರಿಗೆ ಕಿರುಕುಳ ಕೊಟ್ಟಿದ್ದರು. ಸಂಘಕ್ಕೆ ನಮ್ಮ ಮನೆಯ ತ್ಯಾಗದ ಹಿನ್ನೆಲೆ ಲವಲೇಶವೂ ಅರಿಯದ ಈಗಿನ ಆಡಳಿತ ಮಂಡಳಿಯೂ ಸ್ವ ಪ್ರತಿಷ್ಠೆ ಮತ್ತು ಉಡಾಪೆಯಿಂದ ವರ್ತಿಸುತ್ತಿದ್ದು ನನ್ನ ಒಪ್ಪಿಗೆಯಿಲ್ಲದೆ ಮೂಲ 23 ಸೆಂಟ್ಸ್ ಜಾಗವನ್ನು ವಿಸ್ತರಿಸಿ ಪಟ್ಟಾ ಮತ್ತು ಕುಮ್ಕಿ ಸೇರಿ ಅರ್ಧ ಎಕರೆಯಷ್ಟು ಜಾಗ ಅತಿಕ್ರಮಿಸಿದೆ. ಹಾಗಿದ್ದರೂ ದರ್ಪ ಮತ್ತು ಗೌರವ ರಹಿತವಾಗಿ ವರ್ತಿಸಿದೆ. ಇದನ್ನು ಪ್ರತಿಭಟಿಸಿ ಡಿ.31 ರಿಂದು ಆರಂಭಿಸಿದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇನೆ ಎಂದು ತಿಳಿಸಿದ್ದಾರೆ. ಸದ್ಯ ಕೆಲವು ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ, ಅದರ ಜೊತೆಗೆ ಉಪವಾಸ ಸತ್ಯಾಗ್ರಹದ ಬಗ್ಗೆ ಇಲಾಖೆಗಳಿಗೆ ಪೂರ್ವ ಮಾಹಿತಿ ನೀಡಿರಲಿಲ್ಲ. ಇದೀಗ ಸಹಕಾರಿ ಸಂಘದ ಚುನಾವಣೆಯೂ ಇರುವುದರಿಂದ ಚುನಾವಣೆ ನಂತರ ಮುಂದಿನ ಹೋರಾಟ ನಡೆಸಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.