ಸುಳ್ಯ: ಸುಳ್ಯ ಹೋಬಳಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಸಂಬಂಧಪಟ್ಟಂತೆ ಕಂದಾಯ ಅದಾಲತ್ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು. ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿ ಇರುವ ಅನೇಕ ಸಮಸ್ಯೆಗಳಿಗೆ ಆದಾಲತ್ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಯೋಜನೆ ಮಾಡಲಾಗಿದೆ. ಪಹಣಿ ಮೊದಲಾಗಿ ಕಂದಾಯ ವಿಭಾಗಕ್ಕೆ ಸಂಬಂದಿಸಿ ಇರುವ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಇದು ಪ್ರಯೋಜನಕಾರಿಯಾಗಲಿ ಎಂದರು.
ತಹಶೀಲ್ದಾರ್ ಅನಂತಶಂಕರ ಮಾತನಾಡಿ, ಖಾತೆ, ಆರ್‍ಆರ್‍ಟಿ, ಪಹಣಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರು ವರ್ಷದ ಹಿಂದೆ ಸರಕಾರ ಕಂದಾಯ ಆದಾಲತ್ ಕಾರ್ಯಕ್ರಮ ಆರಂಭಿಸಿತ್ತು. ಆಡಳಿತ ವ್ಯವಸ್ಥೆ ಗ್ರಾಮಕ್ಕೆ ಬಂದು ಅಹವಾಲು ಸ್ವೀಕರಿಸಿ ಪರಿಹಾರ ಕಲ್ಪಿಸುವ ಪ್ರಯತ್ನ ಇದಾಗಿದೆ ಎಂದರು.
ಈ ಸಂದರ್ಭ ಐವರ್ನಾಡು ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಉಪ ತಹಶೀಲ್ದಾರ್ ಚಂದ್ರಕಾಂತ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಿಡಿಓ ಯು.ಡಿ.ಶೇಖರ್ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮಕರಣಿಕ ಕಾರ್ತಿಕ್ ಕೆ.ಎಸ್.ನಿರೂಪಿಸಿದರು. ಅನಾರೋಗ್ಯ ಪೀಡಿತರಾಗಿ ನಡೆಯಲಾಗದ ಸ್ಥಿತಿಯಲ್ಲಿರುವ ವ್ಯಕ್ತಿಗೆ 1998-99 ರಲ್ಲಿ ಅಕ್ರಮ ಸಕ್ರಮ ಮಂಜೂರಾತಿ ಆಗಿದ್ದು, ಸಿಟ್ಟಿಂಗ್ ಆಗಿದ್ದರೂ ಹಕ್ಕುಪತ್ರ ದೊರೆಯದಿರುವ ಬಗ್ಗೆ ಜಿ.ಪಂ.ಸದಸ್ಯ ಮನ್ಮಥ ಸಭೆಯಲ್ಲಿ ಪ್ರಸ್ತಾವಿಸಿದರು. ಸಮಸ್ಯೆ ಆಲಿಸಿ ಈ ಬಗ್ಗೆ ಪರಿಶೀಲಿಸುವಂತೆ ತಹಶೀಲ್ದಾರ್ ಗ್ರಾಮಕರಣಿಕರಿಗೆ ಸೂಚನೆ ನೀಡಿದರು.
ಐವರ್ನಾಡಿನಲ್ಲಿ ಸಬ್‍ಸ್ಟೇಷನ್ ನಿರ್ಮಾಣಕ್ಕೆ 2 ಎಕ್ರೆ ಸ್ಥಳ ಕಾದಿರಿಸುವಂತೆ ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಅವರು ತಹಶೀಲ್ದಾರ್ ಅವರ ಗಮನಕ್ಕೆ ತಂದರು. ಸೂಕ್ತ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಅವರು ಭರವಸೆ ನೀಡಿದರು. ಇದೇ ಸಂದರ್ಭ ಗ್ರಾಮಸ್ಥರು ವಿವಿಧ ಅಹವಾಲು ಸಲ್ಲಿಸಿದರು.