ಓಣಂ ಹಬ್ಬದ ಸಂಭ್ರಮ, ಸಮೃದ್ಧಿ ಸದಾ ಬದುಕಿನ ಭಾಗವಾಗಲಿ

September 11, 2019
8:00 AM

ಜಾತಿ, ಧರ್ಮ, ರಾಜಕೀಯ, ಮೇಲು ಕೀಳು ಎಂಬ ಭೇದ ಭಾವದ ಅಡ್ಡಗೋಡೆ ಇಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವ, ನಾಡಿಗೆ ನಾಡೇ ಸಂಭ್ರಮಿಸುವ, ಸಮೃದ್ಧಿ, ಸಂತೋಷದ ಹಬ್ಬ ಓಣಂ ಹಬ್ಬ. ಓಣಂ ಎಂದೊಡನೆ ಹೃದಯಕ್ಕೆ ಸಂಭ್ರಮದ ಅಲೆಗಳು ಓಡೋಡಿ ಬರುತ್ತವೆ.ದೇಶದಲ್ಲಿ ಮಾತ್ರವಲ್ಲ ಬಹುಷಃ ಇಡೀ ಜಗತ್ತಿನಲ್ಲಿಯೇ ಈ ರೀತಿಯ ಸಂಭ್ರಮವನ್ನು ನೀಡುವ ಹಬ್ಬ ಮತ್ತೊಂದಿಲ್ಲ ಎಂದೇ ಹೇಳಬಹುದು.

Advertisement
Advertisement

ಪುರಾತನ ಕಾಲದಲ್ಲಿ ದೇಶವನ್ನು ಆಳಿದ್ದ ದಯಾಮಯನೂ ಪ್ರಜಾಹಿತ ಪಾಲಕನೂ ಆಗಿದ್ದ ಮಹಾಬಲಿ ಎಂಬ ಅಸುರ ರಾಜನ ಆಳ್ವಿಕೆಯ ಕಾಲದಲ್ಲಿ ನಾಡು ಸಂಪತ್ತು, ಸಂತಸದ ಮೇರು ಶಿಖರವನ್ನೇರಿತ್ತು. ಆಗ ಸುಳ್ಳು, ವಂಚನೆ, ಮೋಸ ಎಂಬುದೇ ಇರಲಿಲ್ಲ. ಎಲ್ಲೆಡೆ ಸಮೃದ್ಧಿ, ಸಂಭ್ರಮವೇ ನೆಲೆಸಿತ್ತು. ವಾಮನನಿಂದ ಪಾತಾಳಕ್ಕೆ ತುಳಿಯಲ್ಪಟ್ಟ ಮಹಾಬಲಿಯು ಅಂದು ಪಡೆದ ವರದಂತೆ ಪ್ರತಿ ವರ್ಷ ಓಣಂ ಸಮಯದಲ್ಲಿ 10 ದಿನಗಳ ಕಾಲ ತನ್ನ ಪ್ರಜೆಗಳನ್ನು ಭೇಟಿಯಾಗಲು ಬರುತ್ತಾನೆ ಎಂಬುದು ಐತಿಹ್ಯ. ದೈವಾಂಶ ಸಂಭೂತನಾದ ಮಹಾಬಲಿಯು ನಾಡಿಗೆ ಬರುವ ಆ ಹತ್ತು ದಿನ ಓಣಂ ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಕೇರಳ ಎಂಬ ಪುಟ್ಟ ರಾಜ್ಯ ಅಕ್ಷರಷಃ ಮಹಾಬಲಿಯ ಆಡಳಿತ ಕಾಲದ ದಿನಗಳನ್ನು ಮರಳಿ ಪಡೆಯುತ್ತದೆ. ಎಲ್ಲಿ ನೋಡಿದರೂ ಗಿಡ ಮರಗಳಲ್ಲಿ ‌ನಳ ನಳಿಸುವ ಹೂವುಗಳು. ಮನೆ ಮನೆಗಳ ಮುಂಭಾಗದಲ್ಲಿ ಚಿತ್ತಾಕರ್ಷಕ ಹೂ ರಂಗೋಲಿಯ ವರ್ಣ ವೈಭವ. ಗ್ರಾಮ, ಪಟ್ಟಣ ಭೇಧವಿಲ್ಲದೆ ಮೂಲೆ ಮೂಲೆಗಳಲ್ಲಿ ಕಲೆ, ಕ್ರೀಡೆ, ಸಂಸ್ಕೃತಿಯ ಅನಾವರಣ, ನದಿಗಳಲ್ಲಿ, ಹಿನ್ನೀರಿನಲ್ಲಿ ಜಲೋತ್ಸವ(ವಳ್ಳಂಕಳಿ)ದ ಕಲ ರವ. ಹೀಗೆ ಆಬಾಲ ವೃದ್ಧ ಜನರು ಒಟ್ಟಾಗಿ ಸಂಭ್ರಮಿಸುವ ಹಬ್ಬ. ಭೂಮಿ, ಪ್ರಕೃತಿ, ಹೊಲಗಳು, ಕೃಷಿಭೂಮಿ ಎಲ್ಲವೂ ಸಮೃದ್ಧವಾಗಿ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುವ ದಿನಗಳು.

ಜಗತ್ತಿನ ಎಲ್ಲೇ ಇದ್ದರೂ ಕುಟುಂಬ ವರ್ಗದವರು ಎಲ್ಲರೂ ಬಂದು ಸೇರಿ ಹೊಸ ಬಟ್ಟೆ ಧರಿಸಿ, ಹೂ ರಂಗೋಲಿ ಹಾಕಿ, ವಿವಿಧ ಆಟಗಳನ್ನು ಆಡಿ, ಒಟ್ಟಾಗಿ ಊಟ ಮಾಡಿ(ಓಣಂ ಸದ್ಯ) ಸಂಭ್ರಮಿಸುವ ಸುದಿನ. ಇನ್ನು ಮನೆಯಿಂದ ಹೊರ ಬಂದರೆ ಇಡೀ ನಾಡಿಗೆ ನಾಡೇ ಒಟ್ಟಾಗಿ ಕಲೆ, ಕ್ರೀಡೆ, ಸಂಸ್ಕೃತಿಯ ಮೂಲಕ ಮೇಳೈಸುತ್ತಾರೆ. ಜಲೋತ್ಸವ, ಹುಲಿವೇಷಗಳು, ಕಥಕಳಿ, ನೃತ್ಯ ವೈವಿಧ್ಯಗಳು, ಹೀಗೆ ಸಂಸ್ಕೃತಿ, ಸಾಂಸ್ಕೃತಿಕತೆಯ ಲೋಕವೇ ತೆರೆದು ಕೊಳ್ಳುತ್ತದೆ.

Advertisement

ಓಣಂ ಎಂದರೆ ಕೃಷಿ ಸಂಸ್ಕೃತಿಯ ಹಬ್ಬವೂ ಹೌದು. ಹಿಂದಿನ ಕಾಲದಲ್ಲಿ ಭತ್ತದ ಕಟಾವು ಮುಗಿದ ಕೂಡಲೇ ಬರುವ ಓಣಂ ಹಬ್ಬವನ್ನು ಕೃಷಿಕರು ಸಮೃದ್ಧಿ, ಸಂತಸದಿಂದ ಸ್ವಾಗತಿಸಿ ಆಚರಿಸುತ್ತಿದ್ದರು. ಕೃಷಿ ಬದುಕಿನ ಭಾಗವೂ ಆಗಿದ್ದು ಸರ್ವರ ಬಾಳಿನ ಸಂತಸ ಸಡಗರದ ಪ್ರತೀಕವಾಗಿದೆ ಓಣಂ ಹಬ್ಬ.

 

ಆಷಾಡದ ಕಷ್ಟದ ದಿನಗಳು ಮುಗಿದು ಸಿಂಹ ಮಾಸ ಆರಂಭವಾಗುತ್ತಿದ್ದಂತೆ ಓಣಂ ಹಬ್ಬದ ಸ್ವಾಗತಕ್ಕೆ ಪ್ರಕೃತಿ ಮತ್ತು ಜನತೆ ಅಣಿಯಾಗುತ್ತಾರೆ. ಪ್ರಕೃತಿಯು ತನ್ನ ಒಡಲಿನಲ್ಲಿ ವೈವಿಧ್ಯಮಯ ಹೂವುಗಳನ್ನು ಅರಳಿಸಿದರೆ, ಮಾನವರು ತಮ್ಮ ಮನೆಯಂಗಳದಲ್ಲಿ ಹೂರಂಗೋಲಿಗಳನ್ನು ಹಾಕಿ ಓಣಂ ಸ್ವಾಗತಿಸಲು ಸಿದ್ಧರಾಗುತ್ತಾರೆ. ಅತ್ತಂ(ಹಸ್ತಾ) ನಕ್ಷತ್ರದಿಂದ ತಿರುವೋಣಂ ನಕ್ಷತ್ರದವರೆಗೆ ಹತ್ತು ದಿನ ಓಣಂ ವೈಭವ. ತಿರುವೋಣಂ ದಿನ ಎಲ್ಲಾ ಆಚರಣೆಗೆ ಮೂರ್ತರೂಪವನ್ನಿಡುತ್ತದೆ. ಓಣಂ ಹಬ್ಬದ ಈ ಹತ್ತು ದಿನಗಳಲ್ಲಿ ಪ್ರಕೃತಿಯು ವೈವಿಧ್ಯ ಪುಷ್ಪಗಳ ರಾಶಿಯನ್ನೇ ತೆರೆದಿಟ್ಟರೆ ಮನೆಯ ಎದುರು ಒಳಗೆ ಪೂರ್ತಿ ಹೂ ರಂಗೋಲಿ (ಪೂಕಳಂ)ಗಳ ವೈವಿಧ್ಯತೆ ಎದ್ದು ಕಾಣುತ್ತದೆ. ಕೆಲವು ಮನೆಗಳಲ್ಲಿ ಸಾಂಪ್ರದಾಯಿಕವಾಗಿ ತಿಂಗಳು ಪೂರ್ತಿ ಹೂ ರಂಗೋಲಿ ಬಿಡಿಸುತ್ತಾರೆ.

Advertisement

ಹೀಗೆ ಓಣಂ ಹಬ್ಬ ಸಮೃದ್ಧಿ, ಸಡಗರದ ಜೊತೆಗೆ ಸಮಾನತೆಯ, ಸಹೋದರತೆಯ ದೊಡ್ಡ ಸಂದೇಶವನ್ನೂ ನೀಡುತ್ತದೆ. ತನ್ನ ನಾಡಿನ ಸಮೃದ್ಧಿಯನ್ನು ನೋಡಿ ಮಹಾಬಲಿಯು ಸಂತಸಗೊಂಡು ಮನ ತುಂಬಿ ಹಿಂತಿರುಗುತ್ತಾನೆ ಎಂಬುದು ಜನರ ನಂಬಿಕೆ. ಓಣಂ ಹಬ್ಬವನ್ನು ಇಂದು ಜಗತ್ತಿನಾದ್ಯಂತ ಕೊಂಡಾಡುತ್ತಾರೆ. ಸುಳ್ಯವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಓಣಂ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಓಣಂ ಮತ್ತು ದೀಪಾವಳಿಯ ಆಚರಣೆಯ ಐತಿಹ್ಯಗಳು ಸಮನಾಗಿವೆ. ಮಲಯಾಳಿಗಳು ಓಣಂ ಹಬ್ಬದ ಮೂಲಕ ಮಹಾಬಲಿಯನ್ನು ಸ್ವಾಗತಿಸಿದರೆ, ಕನ್ನಡಿಗರು ದೀಪಗಳ ಹಬ್ಬ ದೀಪಾವಳಿಯ ಮೂಲಕ ಮಹಾಬಲಿಯನ್ಬು ಬರ ಮಾಡಿಕೊಳ್ಳುತ್ತಾರೆ. ಓಣಂ ಮುಗಿದ ಕೆಲವೇ ದಿನಗಳಲ್ಲಿ ದೀಪಾವಳಿಯ ಆಗಮನವಾಗುತ್ತದೆ. ಪ್ರದೇಶಗಳಿಂದ ಪ್ರದೇಶಕ್ಕೆ ಆಚರಣೆಗಳು ಭಿನ್ನವಾಗಿದ್ದರೂ ಹಬ್ಬಗಳು ನೀಡುವ ಸಂತಸ ಮತ್ತು ಆಶಯಗಳು ಅಗಣಿತ.

ಆಚರಣೆಗಳ ಹಿಂದಿನ ಆಶಯಗಳು ಅನಾವರಣಗೊಂಡು ಜನರ ಬದುಕು ಸಮೃದ್ಧಿ, ಸಂತಸದಿಂದ ಕೂಡಿ ಮಹಾಬಲಿಯ ಕಾಲದಂತಹ ನಾಡು ಸದಾ ಇರಲಿ ಎಂಬುದೇ ಆಶಯ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ಆಧಾರಿತ ಬೆಳೆ ವಿಮೆಗೆ ಸಮಸ್ಯೆ | ಮಳೆ ಮಾಪನ ಯಂತ್ರಗಳ ನಿರ್ವಹಣೆ ಅವ್ಯವಸ್ಥೆ ಸರಿಪಡಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ
July 23, 2025
7:21 AM
by: The Rural Mirror ಸುದ್ದಿಜಾಲ
ಅರಣ್ಯ ಪ್ರದೇಶದೊಳಗೆ ದನ-ಕರು, ಕುರಿ ಮೇಯಿಸುವುದಕ್ಕೆ ನಿಷೇಧ ಹೇರಿದ ಅರಣ್ಯ ಇಲಾಖೆ
July 23, 2025
7:09 AM
by: The Rural Mirror ಸುದ್ದಿಜಾಲ
ಕೋಲಾರದಲ್ಲಿ ರೈತರಿಗೆ ವರದಾನವಾದ ತೋಟಗಾರಿಕಾ ಯೋಜನೆ | ಪಾಲಿ ಹೌಸ್‌ ಮೂಲಕ ವಿವಿಧ ಬೆಳೆ |
July 23, 2025
7:03 AM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಯಲ್ಲಿ ಡಿಜಿಟಲ್ ಲೈಬ್ರರಿ | ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲ |
July 23, 2025
6:49 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group