ಪುತ್ತೂರು : ಕಲಿಕೆ ಎಂಬುವುದು ಒತ್ತಾಯದಿಂದ ಹೇರುವ ಪ್ರಕ್ರಿಯೆ ಅಲ್ಲ. ಅದು ಮಕ್ಕಳಲ್ಲಿ ಸಹಜವಾಗಿ ಮೂಡಿಬರಬೇಕಾದ ಪ್ರಕ್ರಿಯೆ. ಮಕ್ಕಳು ಸ್ವತಂತ್ರವಾಗಿ ಕಲಿತಾಗ ಮಾತ್ರ ಕಲಿಕೆ ಹೆಚ್ಚಿನ ಮೂರ್ತ ಸ್ವರೂಪ ಪಡೆದುಕೊಳ್ಳಲು ಸಾಧ್ಯ ಎಂದು ಸಾಹಿತಿ, ಸಂಜಯ ನಗರ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಉಳಯ ಅವರು ಹೇಳಿದರು.
ಪುತ್ತೂರು ತಾಲೂಕಿನ ಕೆಮ್ಮಿಂಜೆ ಸರಕಾರಿ ಶಾಲೆಯಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆರಂಭಗೊಂಡ ಬರ ಪೀಡಿತ ಪ್ರದೇಶಗಳಲ್ಲಿ ನಡೆಯುವ `ಸ್ವಲ್ಪ ಮೋಜು-ಸ್ವಲ್ಪ ಕಲಿಕೆ’ ಬೇಸಿಗೆ ಸಂಭ್ರಮ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶಾಲಿನಿ ಶೆಟ್ಟಿ ಅವರು ಉದ್ಘಾಟಿಸಿದರು.
ಕೆಮ್ಮಿಂಜೆ ಶಾಲಾ ಎಸ್‍ಡಿಎಂಸಿ ಸದಸ್ಯ ಗಣೇಶ್, ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಅವರು ಮಾತನಾಡಿದರು. ಸಾಮೆತ್ತಡ್ಕ ಶಾಲಾ ಶಿಕ್ಷಕಿ ಪ್ರಶಾಂತಿ, ನೆಲ್ಲಿಕಟ್ಟೆ ಶಾಲಾ ಸಂಗೀತ ಶಿಕ್ಷಕ ಭಗವಂತ ಮತ್ತಿತರರು ಉಪಸ್ಥಿತರಿದ್ದರು. ಬೇಸಿಗೆ ಶಿಬಿರದ ನೋಡೆಲ್ ಶಿಕ್ಷಕಿ ಅರ್ಚನಾ ವಂದಿಸಿದರು. ಶಿಬಿರದ ನೋಡೆಲ್ ಶಿಕ್ಷಕಿ ಸುಮತಿ ನಿರೂಪಿಸಿದರು.