ಸುಳ್ಯ: ಕಳೆದ ವರ್ಷ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಕಲ್ಮಕಾರು ಪ್ರದೇಶಕ್ಕೆ ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ವರ್ಷ ಗುಡ್ಡ ಬಿರುಕು ಬಿಟ್ಟ ಸ್ಥಳಕ್ಕೆ ಮತ್ತು ಗುಡ್ಡ ಕುಸಿಯುವ ಭೀತಿಯಲ್ಲಿದ್ದ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಿ ಅವರಿಗೆ ಧೈರ್ಯ ತುಂಬಿದರು. ಮಳೆ ಜಾಸ್ತಿಯಾದರೆ ಅಲ್ಲಿ ವಾಸಿಸುವ ಕುಟುಂಬಗಳನ್ನು ಕಲ್ಮಕಾರಿನ ಶಾಲೆ ಮತ್ತು ಅಂಗನವಾಡಿ ಕಟ್ಟಡಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಗುಡ್ಡ ಕುಸಿಯುವ ಭೀತಿಯಿರುವ ಪ್ರದೇಶದ ಕುಟುಂಬಗಳಿಗೆ ಬೇರೆ ಕಡೆ ಸರಕಾರಿ ಜಮೀನು ಕಾಯ್ದಿರಿಸಿ ಪಂಚಾಯತ್ ವತಿಯಿಂದ ಮನೆ ನಿರ್ಮಿಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಸೇತುವೆ ನಿರ್ಮಾಣವಾಗದ ಹಿನ್ನಲೆಯಲ್ಲಿ ಕಲ್ಮಕಾರಿನ ಜನ ಚುನಾವಣಾ ಬಹಿಷ್ಕಾರ ಘೋಷಿಸಿದ್ದಲ್ಲಿ ಸೇತುವೆ ಕಾಮಗಾರಿ ನಡೆಯುವ ಸ್ಥಳಕ್ಕೂ ಅವರು ಭೇಟಿ ನೀಡಿದರು. ಚುನಾವಣಾ ಸಂದರ್ಭದಲ್ಲಿ ತಹಶೀಲ್ದಾರ್ ಭೇಟಿ ನೀಡಿ ಸೇತುವೆ ನಿರ್ಮಾಣ ಮಾಡಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಮತದಾನ ಬಹಿಷ್ಕಾರ ಹಿಂಪಡೆದಿದ್ದರು. ಬಳಿಕ ಸೇತುವೆಯ ಕಾಮಗಾರಿ ಆರಂಭವಾಗಿತ್ತು. ಸೇತುವೆ ಕಾಮಗಾರಿಯನ್ನು ತಹಶೀಲ್ದಾರ್ ಪರಿಶೀಲಿಸಿದರು.
ಕಂದಾಯ ನಿರೀಕ್ಷಕ ಶಂಕರ್ ಎಂ.ಎಲ್, ಗ್ರಾಮ ಲೆಕ್ಕಾಧಿಕಾರಿ ಶರತ್ ಎಸ್.ಆರ್., ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ಮತ್ತಿತರರು ಉಪಸ್ಥಿತರಿದ್ದರು. ಪ್ರಕೃತಿ ವಿಕೋಪ ಉಂಟಾದಲ್ಲಿ ಗ್ರಾಮ ಮಟ್ಟದಲ್ಲಿ ರಕ್ಷಣಾ ತಂಡಗಳನ್ನು ರಚಿಸಲಾಗಿದೆ ಎಂದು ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ತಿಳಿಸಿದ್ದಾರೆ.