ಸುಳ್ಯ:ಸುಳ್ಯ ನಗರದಲ್ಲಿ ಕಸ ವಿಲೇವಾರಿಯಲ್ಲಿ ಮತ್ತೆ ಅವ್ಯವಸ್ಥೆ ತಾಂಡವವಾಡುತ್ತಿದೆ. ನಗರದ ಹಲವು ಕಡೆಗಳಲ್ಲಿ ಕಸ ಸಂಗ್ರಹ ಮಾಡದೆ, ಕಸದ ವಾಹನ ಬಾರದೆ ಹಲವು ದಿನಗಳು ಕಳೆದಿದೆ.
ಸುಳ್ಯದ ಕುರುಂಜಿಭಾಗ್ ಗೆ ಕಸದ ವಾಹನ ಬಾರದೇ ನಾಲ್ಕು ದಿನಗಳಾಯಿತು. ಹಳೆಗೇಟಿಗೆ, ಜಯನಗರಕ್ಕೆ ಕಸ ಸಂಗ್ರಹ ವಾಹನ ಬಾರದೇ ವಾರವೇ ಕಳೆಯಿತು. ಹೀಗೆ ಹಲವು ವಾರ್ಡ್ ಗಳಲ್ಲಿ ಇದೇ ಪರಿಸ್ಥಿತಿ ಇದೆ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ತುಂಬಿ ತುಳುಕುತಿದೆ. ಸಾರ್ವಜನಿಕರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ನಗರದ ಕಸ ಸಂಗ್ರಹಿಸದೆ, ಕಸ ವಿಲೇವಾರಿ ನಡೆಸದೆ ನಗರಾಡಳಿತ ಏನು ಮಾಡುತಿದೆ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಕಸ ಸಂಗ್ರಹಿಸುವ ವಾಹನಗಳು, ಕಾರ್ಮಿಕರು ಎಲ್ಲಿ ಹೋಗಿದ್ದಾರೆ..? ಸ್ವಚ್ಛ ನಗರ, ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಹೊರಟಿರುವ ನಗರ ಪಂಚಾಯತ್ ಗೆ ಯಕಶ್ಚಿತ್ ಮನೆ ಮನೆಗಳಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಕೂಡ ಸಾಧ್ಯವಾಗುವುದಿಲ್ಲವಾ.? ಹಾಗಾದರೆ ಯಾವ ರೀತಿಯ ಸ್ವಚ್ಛ ನಗರ ಮಾಡಲು ಸಾಧ್ಯ? ಸ್ವಚ್ಛ ನಗರ ಎಂಬುದು ಕೇವಲ ಪ್ರಚಾರದ ಪ್ರಹಸನವಾ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಒಂದು ವರುಷದಿಂದ ನಗರದ ಹಸಿ ಕಸವನ್ನು ಗೊಬ್ಬರ ಮಾಡಲು ಕೃಷಿಕರ ತೋಟಕ್ಕೆ ಹೋಗುತ್ತಿತ್ತು. ಆದರೆ ಅದು ಈಗ ಸ್ಥಗಿತಗೊಂಡಿದೆ. ಕಲ್ಚರ್ಪೆಗೆ ಕಸ ಸಾಗಿಸಲಾಗಿದ್ದರೂ ಅಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಎಲ್ಲರೂ ಕೈಚೆಲ್ಲಿ ಕುಳಿತಿದ್ದಾರೆ: ನಗರದಲ್ಲಿ ಕಸ ಸಂಗ್ರಹ ಮಾಡದ ಬಗ್ಗೆ ನಗರ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದಾಗ ‘ಕೂಡಲೇ ಕ್ರಮ ವಹಿಸುತ್ತೇವೆ’ ಎಂದು ಹೇಳಿ ಸುಮ್ಮನಾಗಿದ್ದಾರೆ. ನಗರ ಪಂಚಾಯತ್ ಗೆ 20 ವಾರ್ಡ್ ಗಳಿಗೆ ಸದಸ್ಯರ ಆಯ್ಕೆಯಾಗಿ 5 ತಿಂಗಳಾದರೂ ನಮಗೆ ಅಧಿಕಾರ ಸಿಕ್ಕಿಲ್ಲ ಎಂದು ಅವರು ಮೌನ ತಾಳಿದ್ದಾರೆ. ಒಟ್ಟಿನಲ್ಲಿ ನಗರಲ್ಲಿ ಕಸ ತುಂಬಿ ದುರ್ವಾಸನೆ ಬೀರುತ್ತಿದ್ದರೂ, ಕಸ ಸಂಗ್ರಹಿಸದೆ, ತ್ಯಾಜ್ಯ ಸಮಸ್ಯೆ ಪರಿಹರಿಸಲಾಗದೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ. ಸಾರ್ವಜನಿಕರು ಮಾತ್ರ ಕಸವನ್ನು ಏನು ಮಾಡಬೇಕು ಎಂದು ತೋಚದೆ ಹಿಡಿ ಶಾಪ ಹಾಕುತ್ತಿದ್ದಾರೆ.