ಮಂಗಳೂರು: ಕಾಞಂಗಾಡ್- ಕಾಣಿಯೂರು ರೈಲ್ವೆ ಮಾರ್ಗದ ಸರ್ವೇ ಕಾರ್ಯ ಸಂಬಂಧಿಸಿ ಶೀಘ್ರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಜತೆ ರೈಲ್ವೆ ಅಧಿಕಾರಿಗಳ ಸಭೆ ನಡೆಯಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.
ದ.ಕ. ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ರೈಲ್ವೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಕಾಞಂಗಾಡ್‌ನಿಂದ ಕರ್ನಾಟಕ ಗಡಿಭಾಗದ ವರೆಗೆ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಆದರೆ ರಾಜ್ಯದ ವ್ಯಾಪ್ತಿಯ ಸರ್ವೇಗೆ ಅರಣ್ಯ ಪ್ರದೇಶ ಅಡ್ಡಿಯಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳ ಸಭೆ ನಡೆಸುವ ಭರವಸೆ ಸಿಎಂ ನೀಡಿದ್ದಾರೆ ಎಂದರು.
ಸ್ಥಳ ಪರಿಶೀಲನೆಗೆ ಸೂಚನೆ: ಫರಂಗಿಪೇಟೆಯಲ್ಲಿ ರೈಲ್ವೆ ಕೆಳಸೇತುವೆಗೆ ಸಂಪರ್ಕ ರಸ್ತೆಯಾಗಿಲ್ಲ. ಇದರಿಂದ ರೈಲು ಹಳಿಯನ್ನು ದಾಟುತ್ತಿದ್ದಾರೆ. ಇದು ಅಪಾಯಕ್ಕೆ ಆಹ್ವಾನವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಸಂಪರ್ಕ ರಸ್ತೆಗೆ ಸ್ಥಳ ಪರಿಶೀಲನೆ ನಡೆಸುವಂತೆ ಸಂಸದರು ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ಗೆ ಸೂಚನೆ ನೀಡಿದರು.
ಪುತ್ತೂರು ಎಪಿಎಂಸಿ ಬಳಿ 12.70 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಕೆಳಸೇತುವೆ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಮಗಾರಿಯ ಶೇ.50ರಷ್ಟು ಮೊತ್ತವನ್ನು ರೈಲ್ವೆ ಇಲಾಖೆ ಭರಿಸಲಿದ್ದು, ಉಳಿದ ಮೊತ್ತವನ್ನು ಎಪಿಎಂಸಿ, ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳ ನಿಧಿಯಿಂದ ಭರಿಸಲಾಗುವುದು. ಪುತ್ತೂರಿನ ವಿವೇಕಾನಂದ ಕಾಲೇಜು ಸಂಪರ್ಕಿಸುವ ರಸ್ತೆಯ ರೈಲ್ವೆ ಮೇಲ್ಸೇತುವೆಯನ್ನು ಅಗಲಗೊಳಿಸುವ ಬಗ್ಗೆ ಹೊಸ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ನಳಿನ್ ತಿಳಿಸಿದರು.
ನೀರಿನ ಸೌಲಭ್ಯ ಕೊರತೆ: ಸಾಯಂಕಾಲ ಪುತ್ತೂರಿನಲ್ಲಿ ತಂಗುವ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಮಾರ್ಗದವರೆಗೆ ವಿಸ್ತರಿಸುವ ಕೋರಿಕೆ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ರೈಲ್ವೆ ವಿಭಾಗೀಯ ಪ್ರಬಂಧಕಿ ಅಪರ್ಣಾ ಗರ್ಗ್, ಸದ್ಯ ಸುಬ್ರಹ್ಮಣ್ಯ ಮಾರ್ಗ ನಿಲ್ದಾಣದಲ್ಲಿ ನೀರಿನ ಸೌಲಭ್ಯ ಇಲ್ಲ. ಮೂಲಸೌಲಭ್ಯದ ಕೊರತೆ ಇದೆ. ನೀರಿನ ಸೌಲಭ್ಯ ಸಹಿತ್ಯ ಅವಶ್ಯ ಸೌಲಭ್ಯ ಒದಗಿಸಿದ ಬಳಿಕ ಸುಬ್ರಹ್ಮಣ್ಯ ಮಾರ್ಗಕ್ಕೆ ಪ್ಯಾಸೆಂಜರ್ ರೈಲು ವಿಸ್ತರಣೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಪ್ರಿ ಪೇಯ್ಡ ಕೌಂಟರ್: ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣದಲ್ಲಿ ಪೊಲೀಸ್ ಉಸ್ತುವಾರಿಯಲ್ಲಿ ಪ್ರಿಪೇಯ್ಡಿ ಆಟೋ ರಿಕ್ಷಾ ಕೌಂಟರ್ ಆರಂಭಿಸಬೇಕು. ಭದ್ರತೆ ಸಲುವಾಗಿ ಎರಡು ನಿಲ್ದಾಣದಲ್ಲಿ ಸ್ಕ್ಯಾನರ್ ಮಷಿನ್ ಬಳಕೆ ಮಾಡಬೇಕು. ಪಾಂಡೇಶ್ವರದಲ್ಲಿರುವ ರೈಲ್ವೆ ಗೂಡ್ಸ್ ಶೆಡ್ ಉಳ್ಳಾಲಕ್ಕೆ ಸ್ಥಳಾಂತರಿಸಬೇಕು ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಹನುಮಂತ ಕಾಮತ್ ಒತ್ತಾಯಿಸಿದರು.
ಕಡಬ ತಾಲೂಕು ಕೇಂದ್ರಕ್ಕೆ ಸಮೀಪದಲ್ಲಿರುವ ಕೋಡಿಂಬಾಳ ರೈಲ್ವೆ ಸ್ಟೇಷನ್‌ಗೆ ಮೂಲಭೂತ ಸೌಲಭ್ಯ ಒದಗಿಸಿ ಮೇಲ್ದರ್ಜೇಗೇರಿಸುವಂತೆ ಜಿಪಂ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ವಿನಂತಿಸಿದರು.ಕೊಂಕಣ ರೈಲ್ವೆಯ ಪ್ರಾದೇಶಿಕ ಪ್ರಬಂಧಕ ಬಿ.ಬಿ.ನಿಕಂ ಉಪಸ್ಥಿತರಿದ್ದರು.
ರೈಲ್ವೆ ಸಚಿವರ ಸಭೆ: ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ್ ಅಂಗಡಿ 15 ದಿನದಲ್ಲಿ ಮಂಗಳೂರಿನಲ್ಲಿ ಕರಾವಳಿ ಜಿಲ್ಲೆಗಳ ರೈಲ್ವೆ ಸಮಸ್ಯೆ ಬಗ್ಗೆ ಸಭೆ ನಡೆಸಲಿದ್ದಾರೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ವಿಶ್ವದರ್ಜೆ, ಕೊಂಕಣ ರೈಲ್ವೆ ಪ್ರಾದೇಶಿಕ ವಿಭಾಗ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದೆಂದು ಸಂಸದರು ತಿಳಿಸಿದರು. ಫಾಲ್ಘಾಟ್ ವಿಭಾಗದ ರೈಲ್ವೆ ಕುಂದುಕೊರತೆ ಸಂಬಂಧಿಸಿ ವಿಭಾಗ ವ್ಯಾಪ್ತಿಯ ಎಲ್ಲ ಸಂಸದರ ಜತೆಗೆ ಸೆ.18ರಂದು ತಿರುವನಂತಪುರದಲ್ಲಿ ರೈಲ್ವೆ ಅಧಿಕಾರಿಗಳ ಸಭೆ ನಡೆಯಲಿದೆ ಎಂದು ಫಾಲ್ಘಾಟ್ ವಿಭಾಗೀಯ ಪ್ರಬಂಧಕ ಪ್ರತಾಪ್‌ಸಿಂಗ್ ಶಮಿ ತಿಳಿಸಿದರು.
ಇನ್ನು ಟಿಕೆಟ್ ಕೌಂಟರ್ ಇರಲ್ಲ: ರೈಲ್ವೆ ಇಲಾಖೆಯಲ್ಲಿ ಇ-ಟಿಕೆಟ್ ನೀಡುತ್ತಿರುವುದರಿಂದ ಇನ್ನು ಮುದ್ರಿತ ಟಿಕೆಟ್ ಇರುವುದಿಲ್ಲ. ರೈಲು ಟಿಕೆಟ್‌ಗಳನ್ನು ಮೊಬೈಲ್ ಮೂಲಕ ಆನ್‌ಲೈನ್ ಮೂಲಕ ಕಾದಿರಿಸುವ ಸೌಲಭ್ಯಕ್ಕೆ ಉತ್ತೇಜನ ನೀಡಲಾಗುತ್ತಿದೆ. ಈಗ ಇರುವ ಟಿಕೆಟ್ ಕೌಂಟರ್‌ಗಳನ್ನು ಹಂತ ಹಂತವಾಗಿ ಮುಚ್ಚಲಾಗುವುದು. ಮಾರ್ಚ್ ವೇಳೆಗೆ ಟಿಕೆಟ್ ಮುದ್ರಿಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಹೊಸ ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗುತ್ತಿಲ್ಲ. ಭವಿಷ್ಯದಲ್ಲಿ ಪೂರ್ಣವಾಗಿ ಇ-ಟಿಕೆಟ್ ಚಾಲನೆಗೆ ಬರಲಿದೆ ಎಂದು ಪ್ರತಾಪ್‌ಸಿಂಗ್ ಶಮಿ ತಿಳಿಸಿದರು.
ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ರೈಲು ನಿಲ್ದಾಣದಲ್ಲಿ ಎಟಿಎಂ ಅಳವಡಿಸುವ ಬಗ್ಗೆ ಮೂರು ಬಾರಿ ಟೆಂಡರ್ ಕರೆದರೂ ಯಾವುದೇ ಬ್ಯಾಂಕ್ ಆಸಕ್ತಿ ವಹಿಸಿಲ್ಲ. ಯಾವುದೇ ಠೇವಣಿ ಇರಿಸದೆ ಟೆಂಡರ್ ಹಾಕುವಂತೆ ಪ್ರಕಟಣೆ ನೀಡಿದರೂ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ಬಗ್ಗೆ ಗಮನ ಹರಿಸುವಂತೆ ರೈಲ್ವೆ ಹೋರಾಟಗಾರರು ಸಂಸದರನ್ನು ವಿನಂತಿಸಿದರು.