ಮಡಿಕೇರಿ : ಅರೆಕಾಲಿಕ ಕಾನೂನು ಸ್ವಯಂ ಸೇವಕರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ನೊಂದವರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವಿ.ವಿ ಮಲ್ಲಾಪುರ ಅವರು ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿ, ವಕೀಲರ ಸಂಘ ಮತ್ತು ಮಡಿಕೇರಿ ರೋಟರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ರೋಟರಿ ಸಭಾಂಗಣದಲ್ಲಿ ಸೋಮವಾರ ನಡೆದ ‘ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ’ ಗುರುತಿನ ಚೀಟಿ ವಿತರಣೆ ಹಾಗೂ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅರೆಕಾಲಿಕ ಕಾನೂನು ಸ್ವಯಂ ಸೇವಕರು ತಮ್ಮ ಕಾರ್ಯದ ಜೊತೆಗೆ ಕಾನೂನಿನ ಬಗ್ಗೆ ಮಾಹಿತಿ ನೀಡಿದಾಗ ಸಮಾಜದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ಇರುವುದಿಲ್ಲ. ಹಾಗೆಯೇ ಪ್ರಕೃತಿ ವಿಕೋಪ ಸಂದರ್ಭದಲ್ಲಿ ನೊಂದವರನ್ನು ರಕ್ಷಣೆ ಮಾಡುವಂತಾಗಬೇಕು ಎಂದು ಅವರು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ ಅವರು ಮಾತನಾಡಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ತಮ್ಮ ತಮ್ಮ ಗ್ರಾಮಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವಂತಾಗಬೇಕು. ಸಮಸ್ಯೆಗಳಿದ್ದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತರುವಂತಾಗಬೇಕು ಎಂದು ಅವರು ನುಡಿದರು.
ವಕೀಲರಾದ ಎಂ.ಎ.ನಿರಂಜನ್ ಅವರು ಮಾತನಾಡಿ ಪ್ರತಿಯೊಬ್ಬರಲ್ಲೂ ಸಹ ಕಾನೂನಿನ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಅತ್ಯಗತ್ಯ ಎಂಬುದನ್ನು ಮರೆಯಬಾರದು ಎಂದು ಅವರು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನ, ಆಸ್ತಿಯ ಹಕ್ಕು ಹೀಗೆ ಹಲವು ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವರ್ಷದಲ್ಲಿ 150 ರಿಂದ 200 ವೈವಾಹಿಕ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ವಿಭಕ್ತ ಕುಟುಂಬವೇ ಕಾರಣವೆಂದರೆ ತಪ್ಪಾಗಲಾರದು ಎಂದು ಅವರು ಪ್ರತಿಪಾದಿಸಿದರು.
ಅವಿಭಕ್ತ ಕುಟುಂಬದಲ್ಲಿ ಅನ್ಯೋನ್ಯತೆಯಿಂದ ಬದುಕಿದರೆ ಉತ್ತಮ ಜೀವನ ನಡೆಸಬಹುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಿದೆ ಎಂದರು.
ಪ್ರಮುಖರಾದ ಸುರೇಶ್ ಚಂಗಪ್ಪ ಅವರು ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಬೇಕು. ಶಾಂತಿ, ಸಹನೆ, ಸಹಭಾಳ್ವೆಯಿಂದ ಪ್ರತಿಯೊಬ್ಬರೂ ಬದುಕು ಕಟ್ಟಿಕೊಳ್ಳುವಂತಾಗಬೇಕು. ಹಾಗಾದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲರು ಹಾಗೂ ಮಡಿಕೇರಿ ರೋಟರಿ ಅಧ್ಯಕ್ಷರಾದ ರತನ್ ತಮ್ಮಯ್ಯ ಅವರು ಸ್ವಾಗತಿಸಿ ಮಾತನಾಡಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಕಾನೂನಿನ ಗುರುತಿನ ಚೀಟಿ ಪಡೆದು ಸಮಾಜದಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ವಕೀಲರಾದ ಪಿ.ಯು.ಪ್ರೀತಂ ಮತ್ತು ಕೆ.ಎಂ.ಮೀನಾಕುಮಾರಿ ಅವರು ಮಾತನಾಡಿದರು. ಪ್ರಮುಖರಾದ ಈಶ್ವರ್ ಭಟ್, ಕಾರ್ಯಪ್ಪ, ಸದಾಶಿವ, ಸಿಡಿಪಿಒ ಸವಿತಾ ಇತರರು ಇದ್ದರು. ಒಡಿಪಿ ಸಂಸ್ಥೆಯ ಪ್ರತಿನಿಧಿಗಳು ಪ್ರಾರ್ಥಿಸಿದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿ, ವಂದಿಸಿದರು.