ಕಾಣಿಯೂರು : ನಾಲ್ಕಂದ ಉಳ್ಲಾಲ್ತಿ ಮೂಲ ಕ್ಷೇತ್ರ ಮಾಚಿಲ ಶ್ರೀ ಉಳ್ಳಾಲ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವದವರೆಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ಕೂಡಿಕಟ್ಟಿನವರು ವೃತಚಾರಣೆಯನ್ನು ಆಚರಿಸಿಕೊಂಡು ಬರುವ ಮೂಲಕ ಶ್ರೀ ದೇವರ ಪುಣ್ಯ ಕಾರ್ಯಗಳಲ್ಲಿ ಭಾಗವಹಿಬೇಕು. ಈ ನಿಟ್ಟಿನಲ್ಲಿ ಶ್ರೀ ದೇವರ ಸನ್ನಿಯಲ್ಲಿ ವಿಶೇಷ ಸಂಕಲ್ಪದೊಂದಿಗೆ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಎಲ್ಲರೂ ಸಹಕರಿಸಬೇಕು ಎಂದು ಕುಂಬ್ಲಾಡಿ, ಮಾಚಿಲ ಶ್ರೀ ನಾಲ್ಕಂದ ಉಳ್ಳಾಲ್ತಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನ್ಯಾಯವಾದಿ ವೆಂಕಪ್ಪ ಗೌಡ ಮಾಚಿಲರವರು ಹೇಳಿದರು.
ಅವರು ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2020ನೇ ಜ.30, 31 ರಂದು ನಡೆಯಲಿರುವ ಶ್ರೀ ನಾಲ್ಕಂದ ಉಳ್ಳಾಲ್ತಿ ಮೂಲಕ್ಷೇತ್ರ ಮಾಚಿಲ ಕುಂಬ್ಲಾಡಿ ಮತ್ತು ನಾಗ ಸಾನಿಧ್ಯ, ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ 1ರಂದು ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯು.ಪಿ ರಾಮಕೃಷ್ಣ ಗೌಡ ಮಾತನಾಡಿ, ಬ್ರಹ್ಮಕಲಶೋತ್ಸವದಲ್ಲಿ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಶಕ್ತಿಮೀರಿ ಪಾಲ್ಗೊಂಡು ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲರು ಮುಂದಾಗಬೇಕು ಎಂದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾನ ಮಾತನಾಡಿ, ಬ್ರಹ್ಮಕಲಶಕ್ಕೆ ದಿನ ನಿಗದಿಯಾಗಿದೆ. ಈ ಮೂಲಕ ಎಲ್ಲರ ಜವಾಬ್ದಾರಿಯೂ ಹೆಚ್ಚಾಗಿದೆ. ದೇವರ ಸಾನಿಧ್ಯದ ಜೀರ್ಣೋದ್ದಾರ ಕಾರ್ಯದಲ್ಲಿ ಎಲ್ಲರೂ ಸಹಕಾರ ನೀಡಬೇಕು. ಶ್ರಮದಾನದ ಮೂಲಕವೂ ಅಭಿವೃದ್ದಿ ಕಾರ್ಯಗಳಲ್ಲಿ ಕೈ ಜೋಡಿಸುವ ನಿಟ್ಟಿನಲ್ಲಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಬ್ರಹ್ಮಕಲಶೋತ್ಸವ ಸಂಭ್ರಮ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಶ್ರೀ ನಾಲ್ಕಂದ ಉಳ್ಳಾಲ್ತಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷೆ ಸಿ.ಜೆ. ಚಂದ್ರಕಲಾ ಅರುವಗುತ್ತು, ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಉಳವ, ಶ್ರೀ ನಾಲ್ಕಂದ ಉಳ್ಳಾಲ್ತಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಿಶ್ವನಾಥ ಗೌಡ ಅಂಬುಲ, ಶ್ರೀ ನಾಲ್ಕಂದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಳದ ಮೊಕ್ತೇಸರರಾದ ಮಾಚಿಲ ನಾರ್ಣಪ್ಪ ಗೌಡ, ಶ್ರೀ ನಾಲ್ಕಂದ ಉಳ್ಳಾಲ್ತಿ ಕ್ಷೇತ್ರದ ಕ್ಷೇತ್ರಶರಾದ ಮಾಚಿಲ ಪೆರ್ಗಡೆ ಗೌಡ, ಆಡಳಿತ ಪಂಗಡ ಸಂಚಾಲಕ ವಿಶ್ವನಾಥ ಕಂಪ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಮಾಧವ ಕೆ.ವಿ. ಕರಂದ್ಲಾಜೆ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯು.ಪಿ ರಾಮಕೃಷ್ಣ ಗೌಡ ವಂದಿಸಿದರು. ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಮುಖ್ಯಸ್ಥರು ಸೇರಿದಂತೆ ಇನ್ನೂರಕ್ಕೂ ಹೆಚ್ಚಿನ ಭಕ್ತಾಗಳು ಉಪಸ್ಥಿತರಿದ್ದರು.
ನಾಲ್ಕಂದ ಉಳ್ಳಾಲ್ತಿ ಮೂಲ ಕ್ಷೇತ್ರ ಮಾಚಿಲ ಕುಂಬ್ಲಾಡಿ ಇದರ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ – ನೇಮೋತ್ಸವ ಕುರಿತು ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಠಾರದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿಗಳ ಸಭೆಯು ನಡೆಯಿತು. ಜ 28ರಂದು ಪ್ರಾರಂಭಗೊಂಡು ಒಂದು ವಾರದ ತನಕ ನಡೆಯುವ ಜಾತ್ರೆ ಹಾಗೂ ಬ್ರಹ್ಮಕಲಶ ಕಾರ್ಯಕ್ರಮದ ಪ್ರಯುಕ್ತ ದೇವಸ್ಥಾನದ ಕೂಡುಕಟ್ಟಿನ ಭಕ್ತಾದಿಗಳ ಸಭೆಯಲ್ಲಿ ಬ್ರಹ್ಮಕಲಶ ಪೂರ್ವ ತಯಾರಿ ಬಗ್ಗೆ ವಿವಿಧ ಸಮಿತಿಗಳ ಮುಖ್ಯಸ್ಥರುಗಳಿಗೆ ಜವಬ್ದಾರಿಗಳನ್ನು ಹಂಚಲಾಯಿತು. ಅದೇ ಪ್ರಕಾರ ಪ್ರತಿಷ್ಠೆಯ ನಿಮಿತ್ತ ಜ. 3ರವರೆಗೆ ದೇವಸ್ಥಾನದ ಕೂಡುಕಟ್ಟಿನ ಮನೆಯವರು ಸಂಪೂರ್ಣವಾಗಿ ವೃತಚಾರವನ್ನು ಆಚರಿಸಿಕೊಂಡು ಬರುವಂತೆ ತೀರ್ಮಾನಿಸಿ ದೇವರ ಸನ್ನಿಯಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಲಾಯಿತು. ವೃತಚಾರಣೆಯ ಸಂಕಲ್ಪವನ್ನು ದೇವಸ್ಥಾನದ ಅರ್ಚಕ ಗಣಪತಿ ಭಟ್ ನೆರವೇರಿಸಿದರು.