ಸುಳ್ಯ: ಬೇಸಿಗೆ ಉರಿ ಏರುತ್ತಿದ್ದಂತೆ ಎಲ್ಲೆಡೆ ನೀರಿನ ಹರಿವು ಮತ್ತು ಲಭ್ಯತೆ ಕಡಿಮೆಯಾಗುತ್ತಿದೆ. ಸುಳ್ಯಕ್ಕೆ ನೀರುಣಿಸುವ ಪಯಸ್ವಿನಿ ನದಿಯಲ್ಲಿಯೂ ನೀರಿನ ಹರಿವು ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡಲು ನಗರ ಪಂಚಾಯಿತಿ ವತಿಯಿಂದ ಪಯಸ್ವಿನಿ ನದಿಯಲ್ಲಿ ತಾತ್ಕಾಲಿಕ ಕಟ್ಟ ನಿರ್ಮಿಸಲಾಗಿದೆ.
ಮರಳು ತುಂಬಿದ ಚೀಲ ಬಳಸಿ ನಗರಕ್ಕೆ ನೀರು ಸರಬರಾಜು ಮಾಡಲು ನದಿಯಿಂದ ನೀರೆತ್ತುವ ಕಲ್ಲುಮುಟ್ಲುವಿನಲ್ಲಿ ಕಟ್ಟ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುವ ಸಂದರ್ಭದಲ್ಲಿ ಪ್ರತಿ ವರ್ಷವೂ ಈ ರೀತಿ ಮರಳಿನ ಕಟ್ಟ ನಿರ್ಮಿಸಲಾಗುತ್ತದೆ. ಪಂಪ್ ಮೂಲಕ ನೀರೆತ್ತುವ ಪಯಸ್ವಿನಿ ನದಿಯ ಹೊಂಡದ ಕೆಳಗೆ ಪಯಸ್ವಿನಿ ನದಿಗೆ ಅಡ್ಡಲಾಗಿ ಸುಮಾರು 150 ಮೀಟರ್ ಉದ್ದಕ್ಕೆ ಮರಳಿನ ಕಟ್ಟ ನಿರ್ಮಿಸಲಾಗಿದೆ. ಹೊಂಡದಲ್ಲಿ ತುಂಬಿದ ಹೂಳು ಮತ್ತು ಮರಳನ್ನು ತೆಗೆದು ಬಳಿಕ ಕಟ್ಟ ನಿರ್ಮಿಸಲಾಗಿದೆ.
ಕಲ್ಲುಮುಟ್ಲುವಿನ ಪಂಪ್ ಹೌಸ್‍ನಿಂದ 50 ಹೆಚ್‍ಪಿಯ ಎರಡು ಮತ್ತು 45 ಹೆಚ್‍ಪಿಯ ಒಂದು ಪಂಪ್‍ನ ಮೂಲಕ ನೀರೆತ್ತಲಾಗುತ್ತದೆ. ಪ್ರತಿ ವರ್ಷವೂ ನದಿಯ ಹೊಂಡದ ಹೂಳೆತ್ತಿ ಕಟ್ಟ ನಿರ್ಮಿಸಲು ಸುಮಾರು ನಾಲ್ಕರಿಂದ 5 ಲಕ್ಷ ರೂ ವೆಚ್ಚ ತಗುಲುತ್ತದೆ. ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗೆ ಶಾಶ್ವತ ಯೋಜನೆ ರೂಪಿಸಬೇಕೆಂಬುದು ಸುಮಾರು ಎರಡು ದಶಕಗಳ ಬೇಡಿಕೆಯಾಗಿದೆ. ಕಿಂಡಿ ಅಣೆಕಟ್ಟು ನಿರ್ಮಿಸಲು ಸುಮಾರು 18 ವರ್ಷಗಳ ಹಿಂದೆಯ ಯೋಜನೆ ರೂಪಿಸಲಾಗಿದ್ದರೂ ಅದು ಕೈಗೂಡಿಲ್ಲ. ಸುಳ್ಯ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ 65 ಕೋಟಿಯ ಯೋಜನೆ ತಯಾರಿಸಿ ಕೆಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಸಮರ್ಪಿಸಲಾಗಿದೆ. ಆದರೆ ಅದು ಇನ್ನೂ ಅಂತಿಮಗೊಂಡಿಲ್ಲ. ಹೀಗೆ ಸುಳ್ಯ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೂಡದ ಕಾರಣ ಪ್ರತಿ ವರ್ಷವೂ ತಾತ್ಕಾಲಿಕ ಕಟ್ಟ ನಿರ್ಮಿಸುವುದು ಅನಿವಾರ್ಯವಾಗಿದೆ.
45 ಕೊಳವೆ ಬಾವಿಗಳು: ಪಯಸ್ವಿನಿ ನದಿಯಿಂದ ನೀರೆತ್ತಿ ಸರಬರಾಜು ಮಾಡುವುದಲ್ಲದೆ 45 ಕೊಳವೆ ಬಾವಿಗಳ ಮೂಲಕವೂ ಸುಳ್ಯ ನಗರಕ್ಕೆ ನೀರು ಸರಬರಾಜಾಗುತ್ತದೆ. ಸುಳ್ಯ ನಗರದ 20 ವಾರ್ಡ್‍ಗಳಲ್ಲಿ ವಾಣೀಜ್ಯ ಸಂಸ್ಥೆಗಳು, ಮನೆಗಳು ಸೇರಿ ಒಟ್ಟು 5,240 ಇದೆ. ಇದರಲ್ಲಿ 4,020ಕ್ಕೆ ನಗರ ಪಂಚಾಯಿತಿಯ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ನದಿಗೆ ಅಡ್ಡಲಾಗಿ ಕಟ್ಟ ನಿರ್ಮಿಸುವುದರ ಜೊತೆಗೆ ಹೊಸ ಕೊಳವೆ ಬಾವಿಗಳನ್ನು ಕೊರೆದು ಹಳೆಯ ಕೊಳವೆ ಬಾವಿಗಳನ್ನು ನವೀಕರಿಸಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಸಿದ್ಧತೆ ನಡೆಸಲಾಗಿದೆ ಎಂದು ನಗರ ಪಂಚಾಯಿತಿ ಇಂಜಿನಿಯರ್ ಶಿವಕುಮಾರ್ ತಿಳಿಸಿದ್ದಾರೆ. ಬೇಸಿಗೆ ಆರಂಭವಾದೊಡನೆ ನೀರಿನ ಲಭ್ಯತೆ ಕಡಿಮೆಯಗುತ್ತಿದ್ದು ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಸ್ಥಿತಿ ಬರಬಹುದು ಎಂದು ಅವರು ತಿಳಿಸಿದ್ದಾರೆ.