ಸುಳ್ಯ:ಸಾಮಾನ್ಯ ರೈತ ಕುಟುಂಬವೊಂದರಿಂದ ಬಂದ ವೆಂಕಟ್ರಮಣ ಗೌಡರು ಕಂಡ ಕನಸುಗಳು ನನಸಾದ ಬಗೆಯೇ ರೋಚಕತೆಯನ್ನು ಉದ್ದೀಪಿಸಿ ಬಿಡುತ್ತದೆ. ಅವರ ದೃಷ್ಟಿಕೋನ ಗಾಂಧಿ ಪ್ರೇರಿತ. ಅದು ಧಾರ್ಮಿಕ ಕಾಠಿಣ್ಯದ ಧೋರಣೆಯದ್ದಲ್ಲ: ಧರ್ಮನಿರಪೇಕ್ಷೆಯದ್ದೂ ಅಲ್ಲದ ಧರ್ಮದ ಮೂಲಕವೇ ಆದ ಲಿಬರಲ್ ಆಲೋಚನೆಗಳಿಂದಾದುದು. ಅವರದ್ದು ಆಕಾಡೆಮಿ ಆಫ್ ಲಿಬರಲ್ ಪರಿಕಲ್ಪನೆಯ ಸಂಸ್ಥೆಗಳೇ ಇದಕ್ಕೆ ಸಾಕ್ಷಿಯಾಗಿವೆ ಎಂದು ಬರಹಗಾರ, ಚಿಂತಕ ಅವಿಂದ ಚೊಕ್ಕಾಡಿ ಹೇಳಿದರು.
ಅವರು ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘ, ವಿದ್ಯಾರ್ಥಿಸಂಘ ಮತ್ತು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸುಳ್ಯ ಸಹಯೋಗದಲ್ಲಿ ಆದಿ ಚುಂಚನಗಿರಿ ವಿಶ್ವ ವಿದ್ಯಾನಿಲಯ ಪ್ರಕಟಿಸಿರುವ ಡಾ. ಪೂವಪ್ಪ ಕಣಿಯೂರು ಬರೆದ ‘ಸಲ್ಲಕ್ಷಣದ ಕೈ-ಕುರುಂಜಿ ವೆಂಕಟರಮಣ ಗೌಡ’ ಕೃತಿಯನ್ನು ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆ ಸಮಾರಂಭದಲ್ಲಿ ಕೃತಿಪರಿಚಯ ಮಾಡಿದರು. ಸಲ್ಲಕ್ಷಣದ ಕೈ ಕುರುಂಜಿ ವೆಂಕಟರಮಣ ಗೌಡ ಎನ್ನುವ ಕೃತಿ ಶೀರ್ಷಿಕೆಯೆ ಗೌಡರ ಇಡೀ ವ್ಯಕ್ತಿತ್ವಕ್ಕೆ ಕೈ ಕನ್ನಡಿಯಾಗಿದೆ.ಇಲ್ಲಿ ಕೃತಿಗಾರ ಪೂವಪ್ಪ ಕಣಿಯೂರರು ಗೌಡರ ಜೀವನ ಚರಿತ್ರೆಗಿಂತ ಹೆಚ್ಚಾಗಿ ಅವರ ವ್ಯಕ್ತಿತ್ವದ ಚಿತ್ರಣವನ್ನು ಯಾವುದೇ ಭಾವುಕತೆ ಇಲ್ಲದೆ ಕೃತಿಯ ಪರಿಧಿಯಲ್ಲಿ ನಿಂತು ನಿರ್ಲಿಪ್ತವಾಗಿ, ಅತ್ಯಂತ ಸೊಗಸಾದ ಸಾಹಿತ್ಯಕ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ.ಈ ಕೃತಿ ಒಂದು ನುಡಿ ಚಿತ್ರದಂತೆ ಗೌಡರನ್ನು ಕಣ್ಣೆದುರು ನಿಲ್ಲಿಸಿ ಅವರ ಬಹುರೂಪಿಯಾದ ಶೈಕ್ಷಣಿಕ, ಸಾಮಾಜಿಕ,ಸಾಂಸ್ಕೃತಿಕ, ಧಾರ್ಮಿಕ ಮುಖಗಳನ್ನುಆಪ್ತವಾಗಿ ಕಟ್ಟಿಕೊಡುತ್ತದೆ ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ)ಸುಳ್ಯ ಇದರ ನಿರ್ದೇಶಕ ಡಾ.ಕುರುಂಜಿಯವರ ಮೊಮ್ಮಗ ಅಕ್ಷಯ್ ಕೆ.ಸಿಯವರು ಕೃತಿ ಬಿಡುಗಡೆಗೊಳಿಸಿ,ತಾತನೊಂದಿಗೆ ತಾನು ಬಾಲ್ಯದ ದಿನಗಳಲ್ಲಿ ಪಡೆದ ಅವಿಸ್ಮರಣಿಯ ನೆನಪುಗಳನ್ನುಮೆಲುಕು ಹಾಕಿದರು. ನನ್ನ ತಾತನವರಲ್ಲಿ ಸರಳ ಜೀವನದ ಕೆಲ ಸೂತ್ರಗಳಿದುವು ಜೊತೆಗೆ ಉನ್ನತವಾದ ಆದರ್ಶಗಳಿದ್ದುವು.ಅವರಲ್ಲಿದ್ದ ಸೂಪರ್ ನ್ಯಾಚುರಲ್ ಶಕ್ತಿ ನನ್ನನ್ನು ಬೆರಗುಗೊಳಿಸುತ್ತಿತ್ತು.ಆ ಶಕ್ತಿಯೇ ಇಂದೂ ನನಗೆ ಪ್ರೇರಣೆಯಾಗಿದೆಯೆಂದು ನೆನಪು ಮಾಡಿಕೊಂಡರು.
ಕೃತಿಕಾರರಾದ ಪ್ರಾಧ್ಯಾಪಕ ಡಾ.ಪೂವಪ್ಪ ಕಣಿಯೂರು ಅವರು ಈ ಕೃತಿಯನ್ನು ನಾನು ಭಿನ್ನ ಕಾರಣಗಳ ಒತ್ತಡದಿಂದಲೇ ಬರೆದಿದ್ದೇನೆ. ಬರೆಯುವ ಸಂದರ್ಭದಲ್ಲಿ ಇಂದು ಇಲ್ಲದಿರುವ ಕುರುಂಜಿಯವರನ್ನು ನಾನು ನನ್ನ ಅಂತ:ಪಟಲದಲ್ಲಿ ಪ್ರತ್ಯಕ್ಷ ದರ್ಶಿಸಿಕೊಂಡು ಬರೆದಿದ್ದೇನೆ. ಗೌಡರ ವ್ಯಕ್ತಿತ್ವ ಬಾಹುಳ್ಯ ವಿಸ್ತಾರವಾದುದು .ಅದೆಲ್ಲವನ್ನು ಈ ಕೃತಿ ಒಳಗೊಂಡಿದೆ ಎನ್ನುವ ತೃಪ್ತಿ ನನಗಿಲ್ಲವಾದ್ದರಿಂದ ಇದೇ ಅಂತಿಮವಲ್ಲ ಎಂದರು.
ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಹರಪ್ರಸಾದ ತುದಿಯಡ್ಕ ಹಾಗೂ ಅಧ್ಯಕ್ಷ ಸ್ಥಾನ ವಹಿಸಿದ್ದ ಪ್ರಾಂಶುಪಾಲ ಡಾ.ಕೆ ಗಿರಿಧರ ಗೌಡ ಅವರುಗಳು ಕುರುಂಜಿ ವೆಂಕಟರಮಣ ಗೌಡರೊಂದಿಗಿನ ತಮ್ಮ ಒಡನಾಟದ ಅನುಭವಗಳನ್ನು ಸ್ಮರಿಸಿಕೊಡರು.
ಉಪನ್ಯಾಸಕ ಸಂಜೀವ ಕುದ್ಪಾಜೆ ನಿರೂಸಿದರು, ವಿದ್ಯಾರ್ಥಿನಿ ಮೋನಿಕ ವಂದಿಸಿರು.