ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಮುಖ್ಯಮಂತ್ರಿ ಬಿ ಎಸ್ ವೈ ಮನವಿ

January 21, 2020
8:59 PM

ದಾವೊಸ್: ಸ್ವಿಟ್ಜರ್ಲೆಂಡಿನ ದಾವೊಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದ ಮೊದಲನೇ ದಿನವಾದ ಮಂಗಳವಾರ ರಾಜ್ಯದಲ್ಲಿ ಕೃಷಿ ಕೇಂದ್ರಿತ ಉದ್ಯಮ ಸ್ಥಾಪನೆ ಮಾಡುವಂತೆ ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು ನೀಡುವಂತೆ ಮನವಿ ಮಾಡಿದರು.

ಮಂಗಳವಾರ ಬೆಳಿಗ್ಗೆ ಸ್ವಿಸ್ ಮೂಲದ 2000 ವ್ಯಾಟ್ ಕಂಪೆನಿಯ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ರೈತರ ಆತ್ಮಹತ್ಯೆಯ ಪ್ರವೃತ್ತಿಯನ್ನು ತಡೆಯುವ ನಿಟ್ಟಿನಲ್ಲಿ ಕೃಷಿ ಆಧಾರಿತ ಆರ್ಥಿಕತೆಯನ್ನು ಸುಧಾರಿಸುವ ಯೋಜನೆಗಳ ಕುರಿತು ಆಸಕ್ತಿ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಹೊಸ ಯೋಜನೆಗಳು, ಬಂಡವಾಳ ಹೂಡಿಕೆ ಖಂಡಿತ ಬರಬೇಕು. ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡುವ ಜೊತೆಗೆ ಯುವಕರನ್ನು ಸ್ವಾವಲಂಬಿಗಳನ್ನಾಗಿಸಲು ಉದ್ಯೋಗಾವಕಾಶ ಸೃಷ್ಟಿಸಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ಈ ಸಭೆಯಲ್ಲಿ 2000 ವ್ಯಾಟ್ ಕಂಪೆನಿಯ ಫುಡ್ ಕ್ಲಸ್ಟರ್ ಗಳ ಅಭಿವೃದ್ಧಿ ಯೋಜನೆಯ ಕುರಿತು ವಿಶೇಷ ಆಸಕ್ತಿ ವಹಿಸಿದ ಮುಖ್ಯಮಂತ್ರಿಗಳು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಇಂತಹ ಯೋಜನೆಗಳಿಂದ ಕೃಷಿ ಆರ್ಥಿಕತೆ ಉತ್ತಮಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು. ಈ ಕುರಿತು ಪ್ರಾತ್ಯಕ್ಷಿಕೆ ನೀಡಿದ ಕಂಪೆನಿಯ ಪ್ರತಿನಿಧಿಗಳು, ತಮ್ಮ ಬಳಿ ತಂತ್ರಜ್ಞಾನ ಇರುವುದಾಗಿ ಹಾಗೂ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಲು ಪೂರಕವಾದ ಫುಡ್ ಕ್ಲಸ್ಟರುಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವುದಾಗಿ ವಿವರಿಸಿದರು.

“ಸತ್ವಪೂರ್ಣ ಆಹಾರ ಬೆಳೆಯಲು ಅಗತ್ಯವಿರುವ ಎಲ್ಲ ನೆರವು ಮತ್ತು ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳನ್ನು ನಾವು ಒದಗಿಸಲಿದ್ದು, ಈ ಉತ್ಪನ್ನಗಳ ಮೌಲ್ಯವರ್ಧನೆಯ ಮೂಲಕ ಮಾರುಕಟ್ಟೆ ಒದಗಿಸಲಾಗುವುದು” ಎಂದು ಸಂಸ್ಥೆಯ ವಿಜ್ಞಾನಿ ಆಂಡ್ರಿಯಾಸ್ ಬಿಂಕರ್ಟ್ ಅವರು ತಿಳಿಸಿದರು.

ಕಂಪೆನಿಯ ಸಂಸ್ಥಾಪಕ ಪಾಲುದಾರ ಮಾಧವ್ ಭಾಗವತ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಸ್ಮಾರ್ಟ್ ಸಿಟಿಯ ವಿನೂತನ ಪರಿಕಲ್ಪನೆಯ ಕುರಿತು ಮಾಹಿತಿ ನೀಡಿದರು. ತಮ್ಮ ಕಂಪೆನಿಯು ಇಂಗಾಲ ತಟಸ್ಥ ಸ್ಮಾರ್ಟ್ ಉಪನಗರಗಳ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿದ್ದು, ಈಗಾಗಲೇ ಪುಣೆ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದೊಂದಿಗೆ ಒಪ್ಪಂದ ಸಹಿ ಮಾಡಿರುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ರಿನ್ಯೂ ಪವರ್ ಪ್ರತಿನಿಧಿಗಳು ರಾಜ್ಯದ ಬರಡು ಭೂಮಿಯಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಆಸಕ್ತಿ ತೋರಿದರು. ಕಂಪೆನಿಯ ಸಿಇಓ ಸಮಂತ್ ಸಿನ್ಹಾ ಅವರು ತಮ್ಮ ಕಂಪೆನಿಯು ರಾಜ್ಯದ ಬೇಡಿಕೆಗಿಂತ ಹೆಚ್ಚುವರಿಯಾಗಿ ಉತ್ಪಾದನೆಯಾದ ವಿದ್ಯುತ್ ಸಂಗ್ರಹಿಸುವ ಬ್ಯಾಟರಿಗಳು ಮತ್ತು ಇತರ ಉಪಕರಣಗಳನ್ನು ಅಳವಡಿಸಲು ಯೋಜಿಸಿರುವುದಾಗಿ ತಿಳಿಸಿದರು. ಆಡಳಿತಾತ್ಮಕ ಮತ್ತು ಕಾನೂನು ತೊಡಕುಗಳನ್ನು ನಿವಾರಿಸಲು ಸರ್ಕಾರ ಕ್ರಮ ವಹಿಸುವಂತೆ ಅವರು ಸಲಹೆ ಮಾಡಿದರು.

ಮುಖ್ಯಮಂತ್ರಿಯವರು ಹಾಗೂ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ ಕಂಪೆನಿಗಳ ಪ್ರತಿನಿಧಿಗಳಲ್ಲಿ ಬಹುತೇಕ ಮಂದಿ ರೈತರಿಂದ ಜಮೀನು ಖರೀದಿಸಲು ಸರ್ಕಾರದ ಕೆಲವು ಅನಪೇಕ್ಷಿತ ನಿಯಮಗಳನ್ನು ತಿದ್ದುಪಡಿ ಅಥವಾ ರದ್ದುಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯವರು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಹೂಡಿಕೆದಾರರ ನಿಯೋಗಗಳೊಂದಿಗೆ ಚರ್ಚಿಸುವಾಗ ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವ, ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ವಿಷಯಕ್ಕೆ ಹೆಚ್ಚಿನ ಒತ್ತು ನೀಡಿದರು. ನಮ್ಮ ರೈತರು ಮತ್ತು ಗ್ರಾಮೀಣ ಯುವಕರ ಹಿತ ರಕ್ಷಣೆ ಮಾಡುವ ಹೂಡಿಕೆದಾರರು ಹಾಗೂ ಕೈಗಾರಿಕೆಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ ಎಂದು ಅವರು ನುಡಿದರು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಐಟಿ, ಬಿಟಿ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಸೆಲ್ವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..
March 7, 2026
7:29 AM
by: ಮಿರರ್‌ ಡೆಸ್ಕ್
ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ
March 7, 2026
7:23 AM
by: ಮಿರರ್‌ ಡೆಸ್ಕ್
ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು
March 6, 2026
8:22 PM
by: ದ ರೂರಲ್ ಮಿರರ್.ಕಾಂ
ರಾಜ್ಯ ಬಜೆಟ್‌ 2026-27: ಕೃಷಿ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಯೋಜನೆಗಳ ಘೋಷಣೆ
March 6, 2026
8:08 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror