ಪ್ರವಾಹ, ಮಳೆ ಸಂಕಷ್ಟದ ನಂತರ ಇದೀಗ ಕೊಡಗಿನಲ್ಲಿ ಮಾನವೀಯ ಕಾರ್ಯಗಳು ಹೆಚ್ಚು ಮೇಳೈಸಿದೆ. ಕೊಡಗು ಸ್ನೇಹ , ಸೌಹಾರ್ದತೆಯ ಊರು ಎಂಬುದು ಮತ್ತೆ ಸಾಬಿತಾಗಿದೆ. ಒಂದು ಕಡೆ ಪರಿಹಾರ ಕೇಂದ್ರಗಳಲ್ಲಿ ಎನ್‍ಸಿಸಿ ಕೆಡೆಟ್‍ಗಳ ನಿಸ್ವಾರ್ಥ ಸೇವೆ ಇತರರಿಗೆ ಮಾದರಿಯಾದರೆ, ಇನ್ನೊಂದು ಕಡೆ ಕೊಂಡಂಗೇರಿಯ ಮಳೆಹಾನಿ ಸಂತ್ರಸ್ತರಿಗೆ ಭೂದಾನ ಮಾಡಿದ ಹೆಚ್.ಎಂ.ಅಬ್ದುಲ್ಲ ಹಾಜಿ ಗಮನ ಸೆಳೆದಿದ್ದಾರೆ. ಈ ಕಡೆಗೆ ನಮ್ಮ ಫೋಕಸ್…
ಮಡಿಕೇರಿ ನಗರದ 19ನೇ ಕರ್ನಾಟಕ ಬೆಟಾಲಿಯನ್‍ನ ಕಮಾಂಡಿಂಗ್ ಆಫೀಸರ್ ವಿ.ಎಂ.ನಾಯಕ್ ಅವರ ಮಾರ್ಗದರ್ಶನದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್‍ನ 50ಕ್ಕೂ ಹೆಚ್ಚು ಎನ್‍ಸಿಸಿ ಕೆಡೆಟ್‍ಗಳು ಎನ್‍ಸಿಸಿ ಅಧಿಕಾರಿ ಮೇಜರ್ ರಾಘವ ಬಿ. ಅವರ ನೇತೃತ್ವದಲ್ಲಿ ಕಳೆದ 8 ದಿನಗಳಿಂದ ಜಿಲ್ಲೆಯ ವಿವಿಧೆಡೆ ಸಂತ್ರಸ್ತರು ಆಶ್ರಯ ಪಡೆದಿರುವ ಪರಿಹಾರ ಕೇಂದ್ರಗಳಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದಾರೆ.
ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬುತ್ತಾ ನೊಂದವರಿಗೆ ಯಾವುದೇ ರೀತಿಯಲ್ಲಿ ಕೊರತೆಗಳು ಉಂಟಾಗದಂತೆ ನಿಗಾ ವಹಿಸುತ್ತಿದ್ದಾರೆ. ಆಹಾರ ಸಾಮಾಗ್ರಿಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಲುಪಿಸುವಲ್ಲಿ ಇತರ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸೇವಾ ಇಲಾಖೆಯ ಮೂಲಕ ನೀಡಲಾಗುವ ಪಡಿತರವನ್ನು ತಲುಪಿಸುವುದು, ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸುವುದು ಮತ್ತು ವಿತರಿಸುವುದು, ಪರಿಹಾರ ಕೇಂದ್ರಗಳ ಶುಚಿತ್ವವನ್ನು ಕಾಪಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಫಲಾಪೇಕ್ಷೆ ಇಲ್ಲದೆ ಕೆಡೆಟ್‍ಗಳು ತಮ್ಮನ್ನು ತೊಂಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಗೆ ಸಂತ್ರಸ್ತರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ತಾಲೂಕಿನ ಪರಿಹಾರ ಕೇಂದ್ರಗಳಾದ ಚೆಯ್ಯಂಡಾಣೆ, ನಾಪೋಕ್ಲು, ವಾಟೆಕಾಡು, ಮರಗೋಡು, ಮೂರ್ನಾಡು, ಗುಹ್ಯ, ಕೊಂಡಂಗೇರಿ ಪ್ರದೇಶಗಳಿಗೆ ಕೆಡೆಟ್‍ಗಳ ತಂಡ ತೆರಳಿ ಮುಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಯಾವ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಕೆಡೆಟ್‍ಗಳು ಜಾಗೃತಿ ಮೂಡಿಸಿದರು.
ಫೀ.ಮಾ.ಕಾರ್ಯಪ್ಪ ಕಾಲೇಜ್‍ನ ಎನ್‍ಸಿಸಿ ಅಧಿಕಾರಿ ಮೇಜರ್ ರಾಘವ ಮಾತನಾಡಿ, ಕಾರ್ಯಪ್ಪ ಕಾಲೇಜ್‍ನಲ್ಲಿ ಎನ್‍ಸಿಸಿ ಕೆಡೆಟ್‍ಗಳಾಗಿದ್ದ 9 ವಿದ್ಯಾರ್ಥಿಗಳು ಭಾರತೀಯ ಸೈನ್ಯಕ್ಕೆ ಭರ್ತಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಎನ್‍ಸಿಸಿ ವಿದ್ಯಾರ್ಥಿಗಳು ಸಮಾಜ ಸೇವೆಯ ಜೊತೆಗೆ ದೇಶ ಸೇವೆಯಲ್ಲೂ ತೊಡಗುವುದು ಹೆಮ್ಮೆಯ ವಿಚಾರವೆಂದರು.
ಕಾಲೇಜು ಪ್ರಾಂಶುಪಾಲ ಡಾ.ಜಗತ್ ತಿಮ್ಮಯ್ಯ ಅವರ ಸಹಕಾರದಿಂದ ನಮ್ಮ ಸೇವೆ ಯಶಸ್ವಿಯಾಗಿದೆ ಎಂದು ವಿದ್ಯಾರ್ಥಿಗಳು ತೃಪ್ತಿ ವ್ಯಕ್ತಪಡಿಸಿದರು.
ಸಂತ್ರಸ್ತರ ಸಂಕಷ್ಟಕ್ಕೆ ಮನನೊಂದು ಭೂದಾನ ಮಾಡಿದೆ- ಹೆಚ್.ಎಂ.ಅಬ್ದುಲ್ಲ ಹಾಜಿ
ಕೊಂಡಂಗೇರಿಯ ಮಳೆಹಾನಿ ಸಂತ್ರಸ್ತರಿಗೆ ಭೂದಾನ ಮಾಡಿದ ಹೆಚ್.ಎಂ.ಅಬ್ದುಲ್ಲ ಹಾಜಿ ಅವರನ್ನು ಜಿಲ್ಲಾ ವಕ್ಫ್ ಸಲಹಾ ಸಮಿತಿ ವತಿಯಿಂದ ನಗರದ ವಕ್ಫ್ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದಾನಿ ಅಬ್ದುಲ್ಲಾ ಹಾಜಿ ಅವರು, ಮಹಾಮಳೆಯಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದು, ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಅನೇಕ ಸಂತ್ರಸ್ತರು ಮಂದಿರ, ಮಸೀದಿಗಳಲ್ಲಿ ವಾಸವಿದ್ದು, ಜೀವನ ನಡೆಸಲು ಪರದಾಡುವಂತಾಗಿದೆ. ಪರಿಹಾರ ಕೇಂದ್ರಗಳಿಗೆ ನಾನು ಭೇಟಿ ನೀಡಿದಾಗ ಅನೇಕರು ಕಷ್ಟಪಡುವುದನ್ನು ಕಂಡು ಮನನೊಂದು ಜಾಗವನ್ನು ಸಂತ್ರಸ್ತರಿಗೆ ನೀಡಲು ನಿರ್ಧರಿಸಿದೆ ಎಂದರು.ಸಂತ್ರಸ್ತರ ಸಂಕಷ್ಟಕ್ಕೆ ಪ್ರತಿಯೊಬ್ಬರು ಸ್ಪಂದಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ವಕ್ಫ್ ಅಧ್ಯಕ್ಷ ಕೆ.ಎ.ಯಾಕುಬ್ , ವಕ್ಫ್ ಸಮಿತಿ ಸದಸ್ಯ ಅಬ್ದುಲ್ ಅಫಿಲ್ ಸಹದಿ ,ಸದಸ್ಯ ಸಿ.ಎಂ.ಹಮೀದ್ ಮೌಲವಿ ಮಾತನಾಡಿದರು. ಸಮಿತಿಯ ಉಪಾಧ್ಯಕ್ಷ ಅಬ್ದುಲ್‍ಖಾದರ್, ಅಬ್ದುಲ್ ರೆಹಮಾನ್ (ಬಾಪು), ಸದಸ್ಯರಾದ ಅಬ್ದುಲ್ ಶುಕುರ್, ಎಂ.ಎ.ಮೊಯ್ದು, ಹಂಸ, ಅಬ್ದುಲ್ ಸಮ್ಮದ್, ಎಂ.ಬಿ.ಅಬ್ದುಲ್ ನಾಸೀರ್, ತನ್ವಿರ್ ಅಹಮ್ಮದ್, ಅಬ್ದುಲ್ ರೆಹಮಾನ್, ಮೊಹಮ್ಮದ್ ಹಾಗೂ ವಕ್ಫ್ ಅಧಿಕಾರಿ ಸಾಹಿದ್ ರೆಹಮಾನ್ ಉಪಸ್ಥಿತರಿದ್ದರು.