ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಹಬ್ಬದ ಆತಿಥ್ಯ ವಹಿಸಿರುವ ಬೆಳ್ಳೂರು ಹರಿಹರ ಮುಕ್ಕಾಟಿರ ಕುಟುಂಬ ಮುಂದಿನ ವರ್ಷ ನಡೆಯಲಿರುವ ಹಾಕಿ ಉತ್ಸವದ ಲಾಂಛನ ಬಿಡುಗಡೆಗೊಳಿಸಿದೆ.
ಬಾಳುಗೋಡು ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್‍ಸಿಂಹ ಅವರು ಮುಕ್ಕಾಟಿರ ಹಾಕಿ ಹಬ್ಬಕ್ಕೆ ಅಗತ್ಯ ಅನುದಾನ ದೊರಕಿಸಿ ಕೊಡುವ ಭರವಸೆ ನೀಡಿದರು. ಮಾಜಿ ಸಚಿವ ಹೆಚ್.ವಿಶ್ವನಾಥ್ ಮಾತನಾಡಿ ವೀರಾಜಪೇಟೆ ಸಮೀಪದ ಬಾಳುಗೋಡುವಿನಲ್ಲಿರುವ ಕೊಡವ ಸಮಾಜ ಒಕ್ಕೂಟದ ಆವರಣದಲ್ಲಿ ಹಾಕಿ ಸ್ಟೇಡಿಯಂ ನಿರ್ಮಾಣಕ್ಕೆ ಹಿಂದಿನ ಬಜೆಟ್‍ನಲ್ಲಿ ಜೆಡಿಎಸ್ ಮುಖಂಡ ದೇವೇಗೌಡ ಅವರ ಆಶಯದಂತೆ 15 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಕ್ಷೇತ್ರದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಈ ಅನುದಾನವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಮುಕ್ಕಾಟಿರ ಕುಟುಂಬ ಸಂಘದ ಅಧ್ಯಕ್ಷ ಮುಕ್ಕಾಟಿರ ಉತ್ತಪ್ಪ ಮಾತನಾಡಿ, ಆದಿಕಾಲದಿಂದ ಕೊಡಗಿನಲ್ಲಿ ನೆಲಸಿದ ಕೊಡವರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದ್ದು ಪ್ರಕೃತಿಯನ್ನು ಪೂಜಿಸಿಕೊಂಡು ಬಂದಿದ್ದಾರೆ. ಜನಾಂಗವನ್ನು ಬೆಸೆಯುವ ಮತ್ತು ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಕೊಡವ ಹಾಕಿ ಹಬ್ಬ ಸಹಕಾರಿಯಾಗಿದೆ ಎಂದರು.
ಈ ಬಾರಿ ಬಾಳುಗೋಡುವಿನಲ್ಲಿ ಮುಂದಿನ ಏ.20 ರಿಂದ ಮೇ 20 ರವರೆಗೆ ಮುಕ್ಕಾಟಿರ ಕಪ್ ಹಾಕಿ ಪಂದ್ಯಾವಳಿ ನಡೆಯಲಿದ್ದು, ಇದು ಒಂದು ರೀತಿ 20- 20 ಪಂದ್ಯಾಟವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ ಅಚ್ಚಕಾಳೇರ ಪಳಂಗಪ್ಪ, ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಕಾಳೇಂಗಡ ರಮೇಶ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಟುಂಬದ ಹಿರಿಯರಾದ ಮುಕ್ಕಾಟಿರ ಸೋಮಯ್ಯ ಲಾಂಛನ ಬಿಡುಗಡೆ ಮಾಡಿದರು. ಮುಕ್ಕಾಟಿರ ಶಿವು ಮಾದಪ್ಪ, ಜಿ ಪಂ ಸದಸ್ಯರಾದ ಸರಿತಾ ಪೂಣಚ್ಚ ಹಾಗೂ ಬಾನಂಡ ಪ್ರಥ್ಯು, ಮುಕ್ಕಾಟಿರ ಕುಟುಂಬದ ಕಾರ್ಯಾಧ್ಯಕ್ಷ ಮುಕ್ಕಾಟಿರ ರೋಹಿತ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.