ಸುಳ್ಯ:ಕೊರೊನಾ ವೈರಸ್ ದ ಕ ಜಿಲ್ಲೆ ಹಾಗೂ ಕಾಸರಗೋಡು ಪ್ರದೇಶದಲ್ಲಿ ಹರಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಸಂಪೂರ್ಣ ಬಂದ್ ಆಚರಿಸಲು ಜಿಲ್ಲಾಡಳಿತ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನಾದ್ಯಂತ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ಪ್ರತೀ ಬಾರಿ ಹೇಳಿಯೂ ಅನಗತ್ಯವಾಗಿ ಪೇಟೆಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಸುಳ್ಯ ಪೇಟೆ ಸಂಪೂರ್ಣ ಬಂದ್ ಆಗಿದ್ದು ಹಾಲಿನ ಅಂಗಡಿಗಳು ಬೆಳಗ್ಗೆ ತೆರೆದಿತ್ತು. ಕೆಲವು ಮೆಡಿಕಲ್ ತೆರೆದಿದೆ. ಆಸ್ಪತ್ರೆ ಚಿಕಿತ್ಸೆಗೆ ಲಭ್ಯವಿದೆ.
ಉಳಿದಂತೆ ಸಂಪಾಜೆ, ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು ಸೇರಿದಂತೆ ಗ್ರಾಮೀಣ ಭಾಗಗಳು ಬಂದ್ ಆಗಿವೆ. ಬಳ್ಪದಲ್ಲಿ ಬೆಳಗ್ಗೆ ಗುಂಪು ಸೇರಿದವರನ್ನು ಪೊಲೀಸರು ಚದುರಿಸಿದ್ದಾರೆ. ಗುತ್ತಿಗಾರಿನಲ್ಲಿ ಅನಗತ್ಯ ತಿರುಗಾಡಿದವರಿಗೆ ಪೊಲೀಸರು ಲಾಠಿ ಬೀಸಿದ್ದಾರೆ. ಬೆಳ್ಳಾರೆ, ಪಂಜದಲ್ಲೂ ಇದೇ ವಾತಾವರಣ ಕಂಡುಬಂದಿದೆ.
ಪಂಜ ಹಾಲು ಸಂಗ್ರಹಣಾ ಕೇಂದ್ರದಲ್ಲಿ ವಿವಿಧ ಸಹಕಾರಿ ಸಂಘದಿಂದ ಆಗಮಿಸುವ ಹಾಲು ಸೇರಿ ಸುಮಾರು 2500 ಲೀಟರ್ ಹಾಲು ಪ್ರತಿದಿನ ಸಂಗ್ರಹವಾಗುತ್ತದೆ. ಆದರೆ ಇದಕ್ಕೆ ಇಂದು ಅವಕಾಶ ಇರಲಿಲ್ಲ. ಕೆಲವು ಹೈನುಗಾರರು ಪ್ರತೀ ದಿನ 40-50 ಲೀಟರ್ ಹಾಲು ಸಂಘಕ್ಕೆ ಹಾಕುತ್ತಾರೆ.