ಮಂಗಳೂರು ಮಾ.22 ರಿಂದ ದ ಕ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡುವುದು ತಡೆಯಲು ಕರ್ಫ್ಯೂ ಇರುವುದರಿಂದ ಪ್ರತಿ ನಿತ್ಯ 1 ಲಕ್ಷ ಲೀಟರ್ ಹಾಲು ಮಾರಾಟ ಕಡಿಮೆಯಾಗಿದೆ. ಹಾಲನ್ನು ಪರಿವರ್ತನಾ ಘಟಕಗಳಿಗೆ ಕಳುಹಿಸಿದ್ದು, ಅಲ್ಲಿಯೂ ಸಹ ಸಾಮರ್ಥ್ಯ ಮೀರಿ ಹಾಲಿನ ದಾಸ್ತಾನು ಇರುವುದರಿಂದ ತಕ್ಷಣ ಪರಿವರ್ತನೆ ಮಾಡಲು ಸಾಧ್ಯವಾಗಿರುವುದಿಲ್ಲ. ಆದುದರಿಂದ ಒಕ್ಕೂಟವು ಸಂಘಗಳಿಂದ ಹಾಲನ್ನು ಸ್ವೀಕರಿಸಿ ದಾಸ್ತಾನಿಡಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಮಾ.29 ಹಾಗೂ 30 ರಂದು ಹಾಲು ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ನಿತ್ಯದಂತೆ ಮುಂದುವರಿಯಲಿದೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋವಿಡ್ 19 ವೈರಸ್ ಹರಡುವ ಭೀತಿಯಿಂದ ಜನರು ಜೀವ ಭಯದಿಂದ ದಿನದೂಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ನಂದಿನಿ ಬಳಗದ ಎಲ್ಲರೂ ಗ್ರಾಹಕರಿಗೆ ಹಾಲು ಪೂರೈಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮಾ.27 ರಿಂದ ಮಾಧ್ಯಮಗಳಲ್ಲಿ ಅಗತ್ಯ ಸೇವೆ ಒಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯು ಸಂಪೂರ್ಣ ಬಂದ್ ಎಂದು ವರದಿ ಬಿತ್ತರವಾದ ಹಾಗೂ ಪೋಲಿಸ್ ಇಲಾಖೆಯಿಂದ ಅಂಗಡಿ ಮುಂಗಟ್ಟುಗಳನ್ನು ಕಟ್ಟುನಿಟ್ಟಾಗಿ ತೆರೆಯದಂತೆ ಆದೇಶಿಸಿದ ಹಿನ್ನೆಲೆಯಲ್ಲಿ ನಮ್ಮ ಡೀಲರುಗಳ ಹಾಲು ಮಾರಾಟಕ್ಕೆ ತೊಂದರೆಯಾಗಿ ಮಾ.28 ರಂದು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸಂಪೂರ್ಣ ಸ್ಥಗಿತಗೊಂಡಿರುತ್ತದೆ.
ಈ ಸಂದರ್ಭದಲ್ಲಿ ಮಾನ್ಯ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತವನ್ನು ಒಕ್ಕೂಟದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿ ಮಾ.29 ರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಿಗದಿತ ಸಮಯದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿರುತ್ತಾರೆ.
ಆದರೆ ಈಗಾಗಲೇ ಹಾಲು ದಾಸ್ತಾನು ಇರುವುದರಿಂದ ಪ್ರಸ್ತುತದ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಅನಿವಾರ್ಯವಾಗಿ ಮಾ.29 ಹಾಗೂ 30 ರಂದು ಹಾಲು ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಹೈನುಗಾರರು ಸಹಕರಿಸುವಂತೆ ರವಿರಾಜ ಹೆಗ್ಡೆಯವರು ಮನವಿ ಮಾಡಿದ್ದಾರೆ.
ಮಾ.31 ರಿಂದ ಗುಣಮಟ್ಟದ ಹಾಲು ಸಂಗ್ರಹಣೆ ಪುನ:ರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.