ಸುಳ್ಯ: ಕೊರೊನಾ ವೈರಸ್ ಹರಡುವುದು ತಡೆಗೆ ತೆಗೆದುಕೊಂಡು ಪ್ರಮುಖ ಹೆಜ್ಜೆ ಲಾಕ್ ಡೌನ್. ಇದರ ಮುಖ್ಯ ಉದ್ದೇಶ ಜನರಿಂದ ಜನರಿಗೆ ಹರಡುವುದು ತಡೆಯಲು. ಇದಕ್ಕಾಗಿ ಮುಖ್ಯವಾಗಿ ಬೇಕಿರುವುದು ಸಾಮಾಜಿಕ ಅಂತರ. ಈ ಹಂತದಲ್ಲಿ ಸುಳ್ಯ ತಾಲೂಕಿನ ಸಹಕಾರಿ ಸಂಘಗಳಲ್ಲಿ ಕೆಲವು ಸಂಘಗಳು ಪ್ರಮುಖ ಪಾತ್ರ ವಹಿಸಿದೆ. ಪ್ರಮುಖ ಹೆಜ್ಜೆ ಇರಿಸಿದೆ. ಅದರಲ್ಲಿ ಕಳಂಜ ಸಹಕಾರಿ ಸಂಘದಿಂದ ಮನೆಮನೆಗೆ ದಿನಸಿ ಸಾಮಾಗ್ರಿ ತಲಪಿಸುವ ವ್ಯವಸ್ಥೆಗೆ ಮುಂದಾಗಿದೆ. ಇತರ ಕೆಲವು ಸಹಕಾರಿ ಸಂಘಗಳೂ ಪ್ರಮುಖ ನಿರ್ಧಾರ ಕೈಗೊಂಡಿದೆ.
ಕಳಂಜ ಸಹಕಾರಿ ಸಂಘವು ತನ್ನದೇ ಆದ ದಿನಸಿ ವಿಭಾಗವನ್ನು ಹೊಂದಿದೆ. ಇದೀಗ ಗ್ರಾಮದ ಜನರ ಸೇವೆಗೆ ಮುಂದಾಗಿದೆ. ಸಂಘದ ದಿನಸಿ ವಿಭಾಗದಲ್ಲಿ ಲಭ್ಯವಿರುವ ಸಾಮಾಗ್ರಿಗಳನ್ನು ನಿರ್ದೇಶಕರ ಹಾಗೂ ಸಾಮಾಜಿಕ ಕಾರ್ಯಕರ್ತರ ಮೂಲಕ ಗ್ರಾಮದ ಜನರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಈ ವ್ಯವಸ್ಥೆ ತಕ್ಷಣವೇ ಜಾರಿಗೆ ಬರಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಇದಕ್ಕೆ ಸಹಕಾರಿ ಸಂಘವು ವ್ಯಾಟ್ಸಪ್ ಗುಂಪು ರಚನೆ ಮಾಡಿ ಆ ಗುಂಪಿನ ಮೂಲಕ ಗ್ರಾಮದ ಜನರಿಗೆ ಮಾಹಿತಿ ನೀಡಲಾಗುತ್ತದೆ. ಜನರು ತಮಗೆ ತುರ್ತಾಗಿ ಅಗತ್ಯ ಇರುವ ಸಾಮಾಗ್ರಿಗಳ ಪಟ್ಟಿಯನ್ನು ಕರೆ ಮಾಡಿ ಅಥವಾ ವ್ಯಾಟ್ಸಪ್ ಮೂಲಕ ಪಟ್ಟಿಯನ್ನು ಕಳುಹಿಸಿ ಸಾಮಾಗ್ರಿ ಪಡೆಯಬಹುದಾಗಿದೆ.
ಅರಂತೋಡು-ತೊಡಿಕಾನ ಸಹಕಾರಿ ಸಂಘದಲ್ಲಿ ಇನ್ನೊಂದು ಹೆಜ್ಜೆ:
ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭ ಕೃಷಿಕ ಸಂಕಷ್ಟಕ್ಕೆ ಒಳಗಾಗಬಾರದು ಎಂದು ಅರಂತೋಡು-ತೊಡಿಕಾನ ಸಹಕಾರಿ ಸಂಘ ಪ್ರಮುಖ ಹೆಜ್ಜೆ ಇರಿಸಿದೆ.
ಸಂಘದ ಸದಸ್ಯ ವೈಯುಕ್ತಿಕ, ವಾಹನ ಖರೀದಿ, ಆಭರಣ ಈಡಿನ ಸಾಲ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿಯೇತರ ಸಾಲಗಳ ಮೇಲಿನ ಮಾ. 25ರಿಂದ ಏ. 30ರ ವರೆಗಿನ ಬಡ್ಡಿಯನ್ನು ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಸಹಕಾರಿ ಸಂಘದ ಸೇವೆಗಳು ಸದಸ್ಯರ ಉಪಯೋಗಕ್ಕಾಗಿ ಲಭ್ಯವಾಗಲಿದೆ.ಇಷ್ಟೇ ಅಲ್ಲ , ಸಂಘದ ವ್ಯಾಪ್ತಿಯಲ್ಲಿ ಯಾರಿಗಾದರೂ ಆಹಾರದ ಮತ್ತು ಆರೋಗ್ಯದ ಸಮಸ್ಯೆ ಕಂಡು ಬಂದರೆ ಆಯಾಯ ಭಾಗದ ನಿರ್ದೇಶಕರನ್ನು ಸಂಪರ್ಕಿಸಿ, ಅರ್ಹ ಫಲಾನುಭವಿಗಳಿಗೆ ಸಹಕಾರಿ ಸಂಘದ ವತಿಯಿಂದ ಉಚಿತ ಪಡಿತರ ಕಿಟ್ ಅನ್ನು ವಿತರಿಸಲು ವ್ಯವಸ್ಥೆ ಮಾಡಿದೆ.ಇದೊಂದು ಸಹಕಾರಿ ಸಂಘ ತೆಗೆದುಕೊಂಡಿರುವ ಮಹತ್ವದ ಹೆಜ್ಜೆ ಹಾಗೂ ಮಾದರಿ ಸಹಕಾರಿ ಸಂಘವಾಗಿ ಗುರುತಿಸಿದೆ.
ಗುತ್ತಿಗಾರು ಸಹಕಾರಿ ಸಂಘ:
ಗುತ್ತಿಗಾರು ಸಹಕಾರಿ ಸಂಘವು ಕೂಡಾ ಸಂಘದ ಸದಸ್ಯರಿಗೆ ಆರ್ಥಿಕ ವ್ಯವಹಾರ, ರೇಶನ್ ಗೆ ವ್ಯವಸ್ಥೆ ಮಾಡಿದೆ. ಸಂಘದ ಸದಸ್ಯರಿಗೆ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ವ್ಯವಹಾರಕ್ಕೆ ವ್ಯವಸ್ಥೆ ಮಾಡಿದೆ. ಅಲ್ಲದೆ ಸಂಘದ ಪೆಟ್ರೋಲ್ ಪಂಪ್ ಸೇವೆ ಸಂಜೆಯವರೆಗೆ ವ್ಯವಸ್ಥೆ ಮಾಡಿದೆ.