ಮಂಗಳೂರು: ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಈಗ ನಿಲ್ಲದ ರೇಸ್. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಪಾಸಿಟಿವ್ ಪ್ರಕರಣ ಗುರುವಾರ ಬೆಳಗಿನವರೆಗೆ ಪತ್ತೆಯಾಗಿದೆ. ಇದೇ ವೇಳೆ ಉಡುಪಿ ಜಿಲ್ಲೆಯಲ್ಲಿ 27 ಪ್ರಕರಣ ಕಂಡುಬಂದರೆ ರಾಜ್ಯದಲ್ಲಿ 116 ಜನರಲ್ಲಿ ಸೋಂಕು ದೃಢಪಟ್ಟಿದ್ದು ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1578 ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಪಾಸಿಟಿವ್ ಹಾಗೂ ಉಡುಪಿ ಜಿಲ್ಲೆಯಲ್ಲಿ 27 ಪ್ರಕರಣ ಪತ್ತೆಯಾಗಿದೆ. ಈ ಪೈಕಿ ದುಬೈ ಹಾಗೂ ಮುಂಬೈಯಿಂದ ಬಂದ ಪ್ರಯಾಣಿಕರಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.ಉಡುಪಿಯಲ್ಲಿ 16 ಮಕ್ಕಳ ಸಹಿತ 27 ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಆದರೆ ಎಲ್ಲರೂ ಕ್ವಾರಂಟೈನ್ ನಲ್ಲಿದ್ದವರಾಗಿದ್ದಾರೆ.
ರಾಜ್ಯದಲ್ಲಿ ಗುರುವಾರ 116 ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ಮೂಲಕ ಸೋಂಕಿತರ ಸಂಖ್ಯೆ 1578 ಕ್ಕೆ ಏರಿಕೆಯಾಗಿದೆ. ಇದರಲ್ಲಿ 570 ಮಂದಿ ಆಸ್ಪತ್ರೆಯಿಮದ ಬಿಡುಗಡೆ ಹೊಂದಿದ್ದಾರೆ. 966 ಕ್ರಿಯಾಶೀಲ ಪ್ರಕರಣ ಇದ್ದು 41 ಮಂದಿ ಮೃತಪಟ್ಟಿದ್ದಾರೆ.
ದೇಶದಲ್ಲಿ 5609 ಹೊಸ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,12,359 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 132 ಮಂದಿ ಸಾವನ್ನಪ್ಪಿದ್ದಾರೆ.
ಜಗತ್ತಿನಾದ್ಯಂತ 3 .29 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವೈರಸ್ ಬಲಿ ಪಡೆದಿದೆ.ಒಟ್ಟು 5,090,061 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು 20.21 ಲಕ್ಷಕ್ಕೂ ಅಧಿಕ ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಲ್ಲಿ 1,06,000 ಲಕ್ಷ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ವಿಶ್ವದಲ್ಲಿ ಅಮೆರಿಕಾ ಮೃತಪಟ್ಟವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ ಮತ್ತೆ 1,561 ಮಂದಿ ವೈರಸ್ ಗೆ ಬಲಿಯಾಗಿದ್ದಾರೆ. ಅಮೆರಿಕಾದಲ್ಲಿ ಈವರೆಗೂ ಮಹಾಮಾರಿ ವೈರಸ್’ಗೆ 94,994 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ತತ್ತರಿಸಿದ್ದ ಇಟಲಿ, ಸ್ಪೇನ್ ಮುಂತಾದ ಕಡೆ ನಿಧಾನವಾಗಿ ಲಾಕ್ ಡೌನ್ ಸಡಿಲಿಸಲಾಗಿದೆ. ಇದೀಗ ಏರಡನೇ ಹಂತದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ರಷ್ಯಾದಲ್ಲಿ 3 ಲಕ್ಷ ಸೋಂಕಿತರಿದ್ದರೆ 2,972 ಮಂದಿ ಸಾವಿಗೀಡಾಗಿದ್ದಾರೆ. ಸ್ಪೇನ್ ನಲ್ಲಿ 2.79 ಲಕ್ಷ ಸೋಂಕಿದ್ದರೆ 27,888 ಮಂದಿ ಸಾವಿಗೀಡಾಗಿದ್ದಾರೆ. ಬ್ರೆಜಿಲ್ ನಲ್ಲಿ 2.93 ಲಕ್ಷ ಸೋಂಕು. 18,894 ಮಂದಿ ಸಾವು. ಬ್ರಿಟನ್ ನಲ್ಲಿ 2.48 ಲಕ್ಷ ಸೋಂಕು. 35 ಸಾವಿರ ಬಲಿ. ಇಟಲಿಯಲ್ಲಿ 2.27 ಲಕ್ಷ ಸೋಂಕಿತರ ಪೈಕಿ 32 ಸಾವಿರ ಮಂದಿ ಬಲಿಯಾಗಿದ್ದಾರೆ.