ಮಂಗಳೂರು: ಯಾವುದೇ ಕಾರಣಕ್ಕೂ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಅಡಿಕೆ ಧಾರಣೆ ಕುಸಿಯುವುದಿಲ್ಲ. ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಇದೆ. ಲಾಕ್ಡೌನ್ ಮುಗಿದ ಬಳಿಕ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಸಹಜ ಸ್ಥಿತಿಗೆ ಬರಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಅವರು ಗುರುವಾರ ಕ್ಯಾಂಪ್ಕೋದಿಂದ ಆನ್ ಲೈನ್ ಮೂಲಕ ನಡೆದ ಬೆಳೆಗಾರರ ಸಭೆಯಲ್ಲಿ ಮಾತನಾಡಿದರು. ಅಡಿಕೆಗೆ ಬೇಡಿಕೆ ಇದ್ದರೂ ಅದರ ನಂತರ ಪ್ರೊಸೆಸಿಂಗ್ ಈಗ ಸಾಧ್ಯವಾಗುತ್ತಿಲ್ಲ. ಉತ್ತರ ಭಾರತದಿಂದ ಸಾಕಷ್ಟು ಬೇಡಿಕೆ ಇದೆ. ಆದರೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಡಿಕೆ ಧಾರಣೆ ಕುಸಿತವಾಗದು, ಈಗಾಗಲೇ ಶೇ.30 ರಷ್ಟು ಕಡಿಮೆ ದಾಸ್ತಾನು ಇದೆ. ಉತ್ತರ ಭಾರತದಲ್ಲೂ ಸಾಕಷ್ಟು ಅಡಿಕೆ ಕೊರತೆ ಇದೆ. ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಎಂದರು.
ಅಡಿಕೆ ಬೆಳೆಗಾರರ ರಕ್ಷಣೆಗೆ ಸಹಕಾರಿ ಸಂಘಗಳು, ಸರಕಾರ ಹಾಗೂ ಇತರ ಎಲ್ಲಾ ಸಂಘಸಂಸ್ಥೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ಕ್ಯಾಂಪ್ಕೋ ಸದಾ ಅಡಿಕೆ ಬೆಳೆಗಾರರ ಪರವಾಗಿ ನಿಲ್ಲಲಿದೆ. ಈ ನಡುವೆ ಕ್ಯಾಂಪ್ಕೋದಲ್ಲಿ ಠೇವಣಿ ಇಡಲೂ ಅನೇಕರು ಮುಂದೆ ಬಂದಿರುವುದು ಕೂಡಾ ಆಶಾದಾಯಕ ಬೆಳವಣಿಗೆ ಎಂದರು. ಇದರ ಜೊತೆಗೆ ಮಳೆಗಾಲ ಮೊದಲು ಮೈಲುತುತ್ತು ಸರಬರಾಜಿಗೂ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಅನೇಕ ಬೆಳೆಗಾರರಿಂದ ಗ್ರಾಮೀಣ ಭಾಗಗಳಲ್ಲೂ ಅಡಿಕೆ ಖರೀದಿ ನಡೆಸುವ ಬಗ್ಗೆ ಬೇಡಿಕೆ ವ್ಯಕ್ತವಾಗಿತ್ತು, ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಮುಂದಿನ ದಿನಗಳಲ್ಲಿ ಖರೀದಿ ನಡೆಸಲಾಗುವುದು. ಈಗಾಗಲೇ ಪಂಜ ಸಹಕಾರಿ ಸಂಘ ಸೇರಿದಂತೆ ಕೆಲವು ಸಹಕಾರಿ ಸಂಘಗಳು ಕ್ಯಾಂಪ್ಕೋ ಜೊತೆ ಕೈಜೋಡಿಸಲು ಮುಂದೆ ಬಂದಿದೆ. ಹೀಗಾಗಿ ಸಹಕಾರಿ ಸಂಘಗಳ ಸಹಕಾರದಿಂದ ಅಡಿಕೆ ಖರೀದಿ ನಡೆಸಬಹುದು ಎಂದರು.
ಇದರ ಜೊತೆಗೆ ಕ್ಯಾಂಪ್ಕೋ ಬೆಳೆಗಾರರರ ಜೊತೆ ನಿಕಟ ಸಂಬಂಧ ಇರಿಸಿಕೊಳ್ಳಲು ವ್ಯಾಟ್ಸಪ್ ಗುಂಪು ರಚನೆ, ಡಿಜಿಟಲ್ ಯುಗದಲ್ಲಿ ಇನ್ನಷ್ಟು ಹತ್ತಿರವಾಗುವುದು ಮೊದಲಾದ ಸಲಹೆಗಳಿಗೆ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಸಭೆಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ, ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ , ನಿರ್ದೇಶಕ ಪದ್ಮರಾಜ ಪಟ್ಟಾಜೆ ಇದ್ದರು. ಸಾಕಷ್ಟು ಬೆಳೆಗಾರರು ತಮ್ಮ ಪ್ರಶ್ನೆಗಳನ್ನು ಕೇಳಿದರು.