ಸುಳ್ಯ: ವೈಯುಕ್ತಿಕವಾಗಿ ತಾನು ಎಂದೂ ಸಚಿವ ಸ್ಥಾನ ಆಕಾಂಕ್ಷಿ ಅಲ್ಲ, ಅಧಿಕಾರದ ಹಿಂದೆಯೂ ಹೋಗಿಲ್ಲ. ಆದರೆ ಸಚಿವ ಸ್ಥಾನದ ಪಟ್ಟಿಯಲ್ಲಿ ಸೇರ್ಪಡೆ ಆಗಿದೆ ಎಂದು ಹೇಳಲಾಗಿ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಇಲ್ಲ ಎಂದಾಗ ಕ್ಷೇತ್ರದ ಜನತೆಗೆ, ಪಕ್ಷದ ಕಾರ್ಯಕರ್ತರಿಗೆ ಆದ ನೋವು, ಅನ್ಯಾಯವನ್ನು ಸರಿ ಪಡಿಸುವ ಅಗತ್ಯ ಇದೆ ಎಂಬ ಸ್ಪಷ್ಟ ಸಂದೇಶವನ್ನು ಶಾಸಕ ಅಂಗಾರ ತಮ್ಮನ್ನು ಭೇಟಿಯಾದ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಮತ್ತು ಮುಖಂಡರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ನಿರಂತರವಾಗಿ ಆರು ಬಾರಿ ಪಕ್ಷವನ್ನು ಬೆಂಬಲಿಸಿ ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನತೆ, ದುಡಿದ ಕಾರ್ಯಕರ್ತರು ಸಹಜವಾಗಿ ಸಚಿವ ಸ್ಥಾನಕ್ಕೆ ಅಪೇಕ್ಷೆ ಪಟ್ಟಿದ್ದಾರೆ. ಸಿಗದಿದ್ದಾಗ ಅಸಮಾಧಾನ, ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದಕ್ಕೆ ತುರ್ತು ಪರಿಹಾರ ಆಗಬೇಕಾಗಿದೆ ಎಂದು ಅಂಗಾರರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಶನಿವಾರ ಸುಳ್ಯಕ್ಕೆ ಆಗಮಿಸಿ ದೊಡ್ಡತೋಟದ ಶಾಸಕ ಅಂಗಾರ ಅವರ ಮನೆಗೆ ತೆರಳಿ ಚರ್ಚೆ ನಡೆಸಿದ್ದಾರೆ.
ಸಚಿವ ಸ್ಥಾನ ದೊರಕಿಸಲು ಎಲ್ಲಾ ಪ್ರಯತ್ನವನ್ನೂ ನಡೆಸಲಾಗುವುದು ಎಂದು ಸಂಜೀವ ಮಠಂದೂರು ಅವರು ಶಾಸಕ ಅಂಗಾರರಿಗೆ ಮತ್ತು ಸುಳ್ಯದ ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ.